
ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿಗಳು ಮಾತನಾಡುತ್ತಾರೆ. ನಾನು ಪ್ರವಾಸದಲ್ಲಿ ಇರುವ ಕಾರಣ ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ನಾವು ಬೆಳೆದಿರುವುದೇ ಪಕ್ಷದಿಂದ. ಪಕ್ಷ ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ನಾನು ಬದ್ಧ ಎಂದು ಹೇಳಿದರು.
ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಹಾಗೂ ಸಿಎಂ ಯಡಿಯೂರಪ್ಪನವರು ಏನು ನಿರ್ಣಯ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ನನಗೆ ಸಚಿವ ಸ್ಥಾನ ಬಿಡು ಎಂದರೆ ಅತ್ಯಂತ ಖುಷಿಯಿಂದ ಬಿಟ್ಟುಕೊಡುತ್ತೇನೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಡಿಸಿಎಂ ಸ್ಥಾನ ಹೆಚ್ಚಳದಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ. ಸಾರ್ವಜನಿಕರ ಜೊತೆ ನಾವೂ ಸಾರ್ವಜನಿಕರು. ಸಾಮಾನ್ಯ ಜನರಿಗೆ ಕೊಡುವ ವ್ಯವಸ್ಥೆ ನಮಗೆ ಕೊಡಿ ಎಂದು ನಾನು ಮೊದಲೇ ಹೇಳಿದ್ದೇನೆ ಎಂದರು. ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೂ ಸ್ಥಾನ ಮಾನ ಸಿಗಬೇಕು ಎಂಬುದು ನನ್ನ ಆಗ್ರಹ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ