
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಅಧಿಕಾರಿಗಳಿಗೆ ಮಾಹಿತಿ ನೀಡದೆ ಇಂದಿರಾ ಕ್ಯಾಂಟೀನ್, ಘನತ್ಯಾಜ್ಯ ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ, ಅಲ್ಲಿನ ಕಾರ್ಯವೈಖರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ನಲ್ಲಿನ ಕೆಲವು ವ್ಯವಸ್ಥೆಗಳನ್ನು ಗಮನಿಸಿದ್ದೇನೆ. ಇನ್ನು ಘನತ್ಯಾಜ್ಯ ಘಟಕಗಳಲ್ಲಿ ಪರಿಶೀಲನೆ ಮಾಡಿದ್ದು, ಅಲ್ಲಿನ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ. ಮೊದಲು ಸರ್ಕಾರದ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ನಂತರ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಈ ಎಲ್ಲಾ ಸಂಸ್ಥೆಗಳ ಕಾರ್ಯವೈಖರಿ ಸರಿಯಾದ ಹಳಿಗೆ ತರಬೇಕು. ಮೊದಲು ಆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಸದಿಂದ ಇಂಧನ ಉತ್ಪಾದನೆ ಮಾಡುವುದಾಗಿ ಹೇಳಿ ಜವಾಬ್ದಾರಿ ವಹಿಸಿಕೊಂಡವರು ಇಂಧನ ಉತ್ಪಾದನೆ ಮಾಡುತ್ತಿಲ್ಲ. ಇನ್ನು ಈ ಘಟಕಗಳ ಕಾರ್ಯವೈಖರಿ ಬಗ್ಗೆ ಜವಾಬ್ದಾರಿಯುತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಲ್ಲ. ಬೆಂಗಳೂರು ನಗರ ಸ್ವಚ್ಚವಾಗಿ ಇಡಬೇಕು. ಆದರೆ ರಸ್ತೆ ಮಧ್ಯದಲ್ಲಿ ಕಸದ ರಾಶಿ ಇರುವ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೇನೆ. ಇದಕ್ಕೆ ಹೊಣೆಗಾರಿಕೆ ಯಾರು ಹೊರಬೇಕು ಎಂದು ಕೇಳಿದ್ದೇನೆ. ಈ ಮಧ್ಯೆ ಲಾರಿ ಮಾಲೀಕರ ಸಂಘದ ಜೊತೆ ಚರ್ಚೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಕಸಗಳನ್ನು ತಂದು ರಸ್ತೆಗೆ ಸುರಿಯುತ್ತಿರುವ ವಾಹನಗಳ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ಸಂಸ್ಕರಣ ಘಟಕಗಳ ಲೆಕ್ಕಾಚಾರದಲ್ಲಿ ಏರುಪೇರುಗಳಿವೆ. ಅದೆಲ್ಲವನ್ನೂ ಸರಿಪಡಿಸುತ್ತೇವೆ. ಘಟಕಕ್ಕೆ ಬರುವ ಪ್ರತಿ ಕಸದ ವಾಹನಗಳ ವಿಡಿಯೋ ದಾಖಲೆ ಮಾಡಿಸಿದ್ದೇನೆ. ಎಲ್ಲವೂ ಲೆಕ್ಕ ಸರಿಯಾಗಿ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ನೋಡಬೇಕು ಎಂದು ಡಿ.ಕೆ.ಶಿವಕುಮಾರ ಹೇಳಿದರು.

ಇದಕ್ಕೂ ಮುನ್ನ ಇಂದಿರಾ ಕ್ಯಾಂಟೀನ್ ಗಳಿಗೆ ಭೇಟಿ ನೀಡಿದ್ದೆ. ಒಂದು ಕಡೆ 9 ಗಂಟೆಗೆ 200ಕ್ಕೂ ಹೆಚ್ಚು ಪ್ಲೇಟ್ ತಿಂಡಿ ಖಾಲಿ ಆಗಿತ್ತು. ಅಲ್ಲಿ ₹5ರ ಬದಲು ₹10 ರೂ. ಪಡೆಯಲಾಗಿದೆ. ಅಲ್ಲಿದ್ದ ಸಹಾಯವಾಣಿ ಸಂಖ್ಯೆ ದುರಸ್ಥಿಯಲ್ಲಿತ್ತು. ಆದಷ್ಟು ಬೇಗ ಈ ಲೋಪದೋಷ ಸರಿಪಡಿಸಲಾಗುವುದು. ಎಲ್ಲಾ ಹಂತದಲ್ಲೂ ರಿಪೇರಿ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಬಜೆಟ್ ನಲ್ಲಿ ನಿರೀಕ್ಷೆಗೆ ತಕ್ಕ ಅನುದಾನ ಸಿಕ್ಕಿದೆಯೇ ಎಂದು ಕೇಳಿದ ಪ್ರಶ್ನೆಗೆ, “ಬಜೆಟ್ ನಲ್ಲಿ ಅನುದಾನ ಸಿಗುತ್ತದೆಯೋ ಇಲ್ಲವೋ. ನಾನು ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿದೆ. ತೆರಿಗೆ ವಂಚನೆ ಮಾಡಲಾಗುತ್ತಿದೆ. ಯಾವ ತೆರಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತೇವೆ” ಎಂದು ತಿಳಿಸಿದರು.
ನಿಮ್ಮ ಸರ್ಕಾರಕ್ಕೆ ಪೆನ್ ಡ್ರೈವ್ ಟೆನ್ಶನ್ ಇದೆಯೇ ಎಂದು ಕೇಳಿದಾಗ, “ಅವರು ಏನಾದರೂ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಈ ವಿಚಾರವಾಗಿ ಮುಂದೆ ಮಾತನಾಡೋಣ” ಎಂದು ತಿಳಿಸಿದರು.
*ದುರ್ವಾಸನೆ ನಡುವೆಯೂ ಘನತ್ಯಾಜ್ಯ ಸಂಸ್ಕರಣ ಘಟಕಗಳ ಪರಿಶೀಲನೆ*
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಯಶವಂತಪುರದ ಸೀಗೇಹಳ್ಳಿ ಘನ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟಕ ಇನ್ನೂ ಕಾರ್ಯಾರಂಭ ಮಾಡದಿರುವುದನ್ನು ಗಮನಿಸಿದರು.
ಇದುವರೆಗೂ ಅಧಿಕಾರಿಗಳು ಪರಿಶೀಲನೆ ಮಾಡದ ದುರ್ವಾಸನೆಯಿಂದ ಕೂಡಿದ ಘಟಕಗಳಿಗೆ ಹೋಗಿ ಪರಿಶೀಲನೆ ನಡೆಸಿ ಅಲ್ಲಿನ ದಾಖಲೆ, ಕಾರ್ಯವೈಖರಿ ಪರಿಶೀಲಿಸಿದರು.
ನಂತರ ಕನ್ನಹಳ್ಳಿ ಘನ ತ್ಯಾಜ್ಯ ಸಂಸ್ಕರಣೆ, ಇಂಧನ ಉತ್ಪಾದನೆ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಮೇಲ್ವಿಚಾರಕರಿಂದ ಮಾಹಿತಿ ಪಡೆದರು.
ಪ್ರವೇಶದ್ವಾರದ ರಿಜಿಸ್ಟರ್ ಪುಸ್ತಕದಲ್ಲಿ ಆಗಿರುವ ದಾಖಲೆ ಮತ್ತು ಒಳಗೆ ಬಂದಿರುವ ಕಸ ಲಾರಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಗಮನಿಸಿದರು. ಇಂಧನ ಉತ್ಪಾದನೆ ಆಗದಿರುವುದನ್ನು ಗಮನಿಸಿದರು.
ನಂತರ ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕಾರಣೆ, ಇಂಧನ ಉತ್ಪಾದನೆ ಘಟಕಕ್ಕೆ ಭೇಟಿ ನೀಡಿದರು.
ಈ ಮಧ್ಯೆ ದಾರಿ ಮಧ್ಯದಲ್ಲಿ ಸೀಗೆಹಳ್ಳಿ ರಸ್ತೆಯಲ್ಲಿ ಸಾಗುವಾಗ ರಸ್ತೆ ಬದಿಯಲ್ಲಿ ಕಸದ ರಾಶಿ ಕಂಡ ಡಿಸಿಎಂ ಪರಿಶೀಲನೆಗೆ ಮುಂದಾದರು. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಬಿದ್ದಿರುವುದನ್ನು ಕಂಡು, ಬೆಂಗಳೂರು ನಗರದಲ್ಲೇ ರಸ್ತೆಯಲ್ಲಿ ಈ ರೀತಿ ಕಸ ಎಸೆದು ಹೋದರೆ ಅದಕ್ಕೆ ಹೊಣೆ ಯಾರು? ಎಂದು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ