ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಪ ಮುಖ್ಯಮಂತ್ರಿಗಳು, ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿಯವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರಿಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯ ಸಭೆ ನಡೆಯಿತು.
ಈ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:
ಭತ್ತ, ರಾಗಿ, ಬಿಳಿಜೋಳ: ಈ ಹಿಂದೆ 2020-21 ನೇ ಸಾಲಿನ ಮುಂಗಾರು ಋತುವಿನಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು 3.00 ಲಕ್ಷ ರಾಗಿಯನ್ನು ಮತ್ತು 4000 ಮೆಟ್ರಿಕ್ ಟನ್ ಬಿಳಿಜೋಳ ಖರೀದಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿತ್ತು. ಸದರಿ ಪ್ರಮಾಣವನ್ನು ಹೆಚ್ಚಿಸಲು ಕೋರಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರವು ರಾಜ್ಯದ ಈ ಸಾಲಿನಲ್ಲಿ ರೈತರಿಂದ 12.10 ಲಕ್ಷ ಮೆಟ್ರಿಕ್ ಟನ್ ಭತ್ತ, 4 ಲಕ್ಷ ಮೆಟ್ರಿಕ್ ಟನ್ ರಾಗಿ ಮತ್ತು 1 ಲಕ್ಷ ಮೆಟ್ರಿಕ್ ಟನ್ ಬಿಳಿಜೋಳವನ್ನು ಖರೀದಿಸಲು ಅನುಮತಿ ನೀಡಿದೆ. ಅದರಂತೆ ಖರೀದಿಗೆ ಆದೇಶವನ್ನು ಹೊರಡಿಸಲಾಗಿದ್ದು, ಈ ಪ್ರಕ್ರಿಯೆಗೆ ಸಚಿವ ಸಂಪುಟ ಉಪ ಸಮಿತಿಯು ಅನುಮೋದನೆ ನೀಡಿತು.
ಕೇಂದ್ರ ಸರ್ಕಾರವು 2020-21 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಘೋಷಿಸಿದ ಆಹಾರಧಾನ್ಯಗಳ ಕನಿಷ್ಟ ಬೆಂಬಲ ಬೆಲೆಯ ವಿವರ (ಪ್ರಸ್ತುತ ಖರೀದಿ ಪ್ರಕ್ರಿಯೆ ನಡೆಯುತ್ತಿದೆ)
2020-21 ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಘೋಷಿಸಲಾಗಿರುವ ದರ
(ಪ್ರತಿ ಕ್ವಿಂಟಾಲ್‌ಗೆ) ರೂಪಾಯಿಗಳಲ್ಲಿ
ಭತ್ತ -ಸಾಮಾನ್ಯ-1868
ಭತ್ತ-ಗ್ರೇಡ್-ಎ-1888
ಬಿಳಿಜೋಳ- ಹೈಬ್ರಿಡ್-2620
ಬಿಳಿಜೋಳ-ಮಾಲ್ದಂಡಿ-2640
ರಾಗಿ-3295
ತೊಗರಿ-6000
ಶೇಂಗಾ-5275
ಕಡಲೆ-5100
>ಕೇಂದ್ರ ಸರ್ಕಾರದ ಪರವಾಗಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಆಹಾರಧಾನ್ಯಗಳನ್ನು ರಾಜ್ಯ ಸರ್ಕಾರದಿಂದ ಖರೀದಿಸಿ ಕೇಂದ್ರ ಸರ್ಕಾರದ ಲೆಕ್ಕಕ್ಕೆ ತೆಗೆದುಕೊಂಡು ಸಾರ್ವಜನಿಕ ವಿತರಣಾ ಪದ್ದತಿಯಡಿ ರಾಜ್ಯದಲ್ಲಿನ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ರೈತರಿಂದ ಗರಿಷ್ಟ ಪ್ರಮಾಣದಲ್ಲಿ ಭತ್ತ ರಾಗಿ ಮತ್ತು ಬಿಳಿಜೋಳವನ್ನು ಖರೀದಿಸಲು ತೀರ್ಮಾನಿಸಲಾಗಿದೆ.
>ಭತ್ತ ಖರೀದಿಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ, ಗರಿಷ್ಟ 75 ಕ್ವಿಂಟಾಲ್ ಖರೀದಿ ಪ್ರಮಾಣವನ್ನು ನಿಗದಿಪಡಿಸಲಾಗಿತ್ತು. ಸದರಿ ನಿಬಂಧನೆಯನ್ನು ಸಡಿಲಿಸಿ ಪ್ರತಿ ಎಕರೆಗೆ 25 ಕ್ವಿಂಟಾಲ್ ಮಿತಿಯನ್ನು ಮುಂದುವರೆಸಲಾಗಿದ್ದು, ಗರಿಷ್ಟ ಮಿತಿಯನ್ನು ತೆಗೆದು ಹಾಕಲಾಗಿದೆ.
>ರಾಗಿ ಖರೀದಿಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಟ 50 ಕ್ವಿಂಟಾಲ್ ಖರೀದಿ ಪ್ರಮಾಣವನ್ನು ನಿಗದಿಪಡಿಸಲಾಗಿತ್ತು. ಸದರಿ ನಿಬಂಧನೆಯನ್ನು ಸಡಿಲಿಸಿ ಪ್ರತಿ ಎಕರೆಗೆ 10 ಕ್ವಿಂಟಾಲ್ ಮಿತಿಯನ್ನು ಮುಂದುವರೆಸಲಾಗಿದ್ದು, ಗರಿಷ್ಟ ಮಿತಿಯನ್ನು ತೆಗೆದು ಹಾಕಲಾಗಿದೆ.
> ಬಿಳಿಜೋಳ ಖರೀದಿಗೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 15 ಕ್ವಿಂಟಾಲ್‌ನಂತೆ ಗರಿಷ್ಟ 75 ಕ್ವಿಂಟಾಲ್ ಖರೀದಿ ಪ್ರಮಾಣವನ್ನು ನಿಗದಿಪಡಿಸಲಾಗಿತ್ತು. ಸದರಿ ನಿಬಂಧನೆಯನ್ನು ಸಡಿಲಿಸಿ ಪ್ರತಿ ಎಕರೆಗೆ 15 ಕ್ವಿಂಟಾಲ್ ಮಿತಿಯನ್ನು ಮುಂದುವರೆಸಲಾಗಿದ್ದು, ಗರಿಷ್ಟ ಮಿತಿಯನ್ನು ತೆಗೆದು ಹಾಕಲಾಗಿದೆ.
ತೊಗರಿ
ಕೇಂದ್ರ ಸರ್ಕಾರವು ಘೋಷಿಸಿರುವ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಗೆ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲಿಗೆ ರೂ: 6,000/- ರಂತೆ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್, ರಾಯಚೂರು ಬಳ್ಳಾರಿ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪ್ರತಿ ರೈತರಿಂದ ಪ್ರತಿ ಎಕೆರೆಗೆ 7.5 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ.
ರೈತರ ನೋಂದಣಿ ಕಾರ್ಯದ ಕಾಲಾವಧಿಯನ್ನು ದಿನಾಂಕ:15.12.2020 ರಿಂದ 30.12.2020 ರವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ದಿನಾಂಕ:01.01.2021 ರಿಂದ 30.01.2021 ರವರೆಗೆ ನಿಗದಿಪಡಿಸಿ, ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಖರೀದಿಸಲು ಆದೇಶಿಸಲಾಗಿರುವುದನ್ನು ಅವಗಾಹಿಸಲಾಯಿತು.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಯ ರೈತರ ನೋಂದಣಿ ಅವಧಿಯನ್ನು ದಿನಾಂಕ:30.01.2021 ರವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ದಿ:28.02.2021ರವರೆಗೆ ವಿಸ್ತರಿಸಿ ಆದೇಶಿಸಲಾಗಿರುವ ವಿಷಯವನ್ನು ಪರಿಶೀಲಿಸಿ ಘಟನೋತ್ತರ ಅನುಮೋದನೆ ನೀಡಲಾಯಿತು. ಅಲ್ಲದೆ ಬೆಳಗಾವಿ ಮತ್ತು ಚಿತ್ರದುರ್ಗ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗಳ ಶಿಫಾರಸ್ಸಿನ ಮೇರೆಗೆ ಆ ಜಿಲ್ಲೆಗಳಿಂದಲೂ ತೊಗರಿ ಖರೀದಿಗೆ ಅನುಮತಿಸಿ, ಸರ್ಕಾರದಿಂದ ದಿನಾಂಕ:16.12.2020 ಹಾಗೂ 05.02.2021 ರಂದು ಸೇರ್ಪಡೆ ಆದೇಶ ಹೊರಡಿಸಿರುವುದಕ್ಕೆ ಘಟನೋತ್ತರ ಅನುಮೋದನೆ ನೀಡಲಾಯಿತು.
ದಿನಾಂಕ:05.02.2021ರ ಸರ್ಕಾರದ ಆದೇಶದನ್ವಯ ರೈತರ ನೋಂದಣಿ ಕಾಲಾವಧಿಯನ್ನುದಿನಾಂಕ:28.02.2021 ರವರೆಗೆ ಹಾಗೂ ಖರೀದಿ ಕಾಲಾವಧಿಯನ್ನು ದಿ:14.03.2021ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿರುವುದನ್ನು ಪರಿಶೀಲಿಸಿ ಘಟನೋತ್ತರ ಅನುಮೋದನೆ ನೀಡಲಾಯಿತು.
ದಿನಾಂಕ:07.01.2021ರಲ್ಲಿ ಮಾಡಲಾದ ಸರ್ಕಾರದ ಆದೇಶದನ್ವಯ ಖರೀದಿ ಪ್ರಕ್ರಿಯೆ ಪೂರ್ವಸಿದ್ದತೆಗಾಗಿ ಆವರ್ತನಿಧಿಯಿಂದ ರೂ:25.00 ಕೋಟಿಗಳನ್ನು ಮರುಪಾವತಿಸುವ ಷರತ್ತಿಗಳಿಗೊಳಪಟ್ಟು ಬಿಡುಗಡೆ ಮಾಡಲಾಗಿರುವುದನ್ನು ಸಭೆಯು ಪರಿಶೀಲಿಸಿ ಘಟನೋತ್ತರ ಅನುಮೋದನೆ ನೀಡಲಾಯಿತು.
ದಿನಾಂಕ09.02.2021ರ ಅಂತ್ಯಕ್ಕೆ ಒಟ್ಟು 1,77,148 ರೈತರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 5,803 ರೈತರಿಂದ 88,817 ಕ್ವಿಂಟಾಲ್ ತೊಗರಿಯನ್ನು ಖರೀದಿಸಲಾಗಿರುವುದನ್ನು ಹಾಗೂ ಮಾರುಕಟ್ಟೆಯಲ್ಲಿ ತೊಗರಿ ಧಾರಣೆಯು ಬೆಂಬಲ ಬೆಲೆಗಿಂತಲು ಹೆಚ್ಚಿನ ದರ ರೂ:6900/- ಗಳವರೆಗೆ ವ್ಯಾಪಾರವಾಗುತ್ತಿರುವುದರಿಂದ, ರೈತರಿಂದ ಉತ್ತಮ ಪ್ರತಿಕ್ರಿಯೆ ಬಾರದಿರುವ ಕಾರಣಗಳನ್ನು ಗಣನೆಗೆ ತೆಗೆದುಕೊಂಡು ತೊಗರಿಗೆ ಯಾವುದೇ ಪ್ರೋತ್ಸಾಹಧನ ಘೋಷಣೆ ಮಾಡುವ ಅವಶ್ಯಕತೆ ಕಂಡುಬರುವುದಿಲ್ಲವೆಂದು ಪರಿಗಣಿಸಿ ಬೆಂಬಲ ಬೆಲೆ ಖರೀದಿ ಪ್ರಕ್ರಿಯೆಯನ್ನು ಯಥಾ ರೀತಿಯಲ್ಲಿ ಮುಂದುವರೆಸಲು ಒಪ್ಪಿ ತೀರ್ಮಾನಿಸಲಾಯಿತು.
ಕಡಲೇಕಾಳು
ಕೇಂದ್ರ ಸರ್ಕಾರವು ದಿನಾಂಕ: 09.02.2021ರ ಆದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಉತ್ಪನ್ನವನ್ನು ರೂ.5,100/- ಪ್ರತಿ ಕ್ವಿಂಟಾಲಿಗೆ ಬೆಂಬಲ ಬೆಲೆಯಂತೆ ಪಿ.ಎಸ್.ಎಸ್. ಸ್ಕೀಮ್‍ನಡಿ ಒಟ್ಟು 1,67,000 ಮೆಟ್ರಿಕ್ ಟನ್ ಖರೀದಿಗೆ ಅನುಮತಿ ನೀಡಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಈ ಕುರಿತು ಸಭೆಯಲ್ಲಿ ಚರ್ಚಿಸಿ ಈ ಕೆಳಕಂಡಂತೆ ತೀರ್ಮಾನ ಕೈಗೊಳ್ಳಲಾಯಿತು.
*ಕಡಲೇಕಾಳು ಬೆಳೆಯುವ ಜಿಲ್ಲೆಗಳಾದ ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಸಧೃಡ PACS/VSSN/FPO/TAPCMS ಸಂಸ್ಥೆಗಳ ಮೂಲಕ ಖರೀದಿ ಕೇಂದ್ರಗಳನ್ನು ತೆರೆದು ಕೂಡಲೇ ಖರೀದಿ ಪ್ರಾರಂಭಿssಸಲು ತಿರ್ಮಾನಿಸಲಾಯಿತು.
* ನಾಫೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ(ಮಾರ್ಕ್‍ಫೆಡ್) ಹಾಗೂ ದ್ವಿದಳ ಧಾನ್ಯಗಳ ಅಭಿವೃದ್ದಿ ಮಂಡಳಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಲು ನಿರ್ಧರಿಸಲಾಯಿತು.
*ಪ್ರತಿ ಎಕರೆಗೆ ಗರಿಷ್ಟ 4 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಯಿತು.
* ರೈತರ ನೋಂದಣಿ ಕಾರ್ಯವನ್ನು ದಿನಾಂಕ:15.02.2021 ರಿಂದ ದಿನಾಂಕ:29.04.2021ರವರೆಗೆ ಹಾಗೂ ಖರೀದಿಯನ್ನು ದಿನಾಂಕ:15.02.2021 ರಿಂದ 14.05.2021ರವರೆಗೆ ಕೈಗೊಳ್ಳುವುದು.
* ರೈತ ನೋಂದಣಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಕಂಡುಬಂದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಇತರೇ ಇಲಾಖೆಗಳ ಸಿಬ್ಬಂದಿಗಳನ್ನು ಬಳಸಿಕೊಳ್ಳಲು ಕ್ರಮವಹಿಸಲು ಸೂಚಿಸಲಾಯಿತು.
ಶೇಂಗಾ
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಶೇಂಗಾ ಖರೀದಿಸಲು ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳ ನಿಯಮಿತ (ಕೆಓಎಫ್)ರ ಮೂಲಕ ಒಟ್ಟು 22 ಖರೀದಿ ಕೇಂದ್ರಗಳನ್ನು ತೆರೆದು, 30.01.2021ರವರೆಗೆ ಖರೀದಿ ಕಾಲಾವಕಾಶವನ್ನು ನಿಗದಿಪಡಿಸಿದ್ದು, ದಿನಾಂಕ: 30.01.2021ರ ಅಂತ್ಯಕ್ಕೆ ಒಟ್ಟು 943 ರೈತರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 116 ರೈತರಿಂದ, 1160 ಕ್ವಿಂಟಾಲ್ ಶೇಂಗಾ ಉತ್ಪನ್ನವನ್ನು ಖರೀದಿಸಲಾಗಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು.
ಖರೀದಿ ಕಾಲಾವಧಿಯು ದಿನಾಂಕ:30.01.2021ಕ್ಕೆ ಮುಕ್ತಾಯವಾಗಿದ್ದು, ನೋಂದಾಯಿತ ರೈತರು ಖರೀದಿ ಸೌಲಭ್ಯ ಬಳಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಹೆಚ್ಚಿನ ಖರೀದಿ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಲಾಯಿತು.
ಪ್ರಸ್ತುತ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳ ನಿಯಮಿತ (ಕೆಓಎಫ್) ವತಿಯಿಂದ ಖರೀದಿಸಲಾದ ಶೇಂಗಾ ಉತ್ಪನ್ನಕ್ಕೆ ರೈತರಿಂದ ಹಣ ಪಾವತಿಸಲು ಅನುಕೂಲವಾಗುವಂತೆ ರೂ:2.00 ಕೋಟಿ ಹಣವನ್ನು ಮರುಪಾವತಿಸುವ ಷರತ್ತಿಗೊಳಪಟ್ಟು ಆವರ್ತನಿಧಿಯಿಂದ ಬಿಡುಗಡೆಗೊಳಿಸಲು ಸೂಚಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ