
ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ನಾಳೆಯಿಂದ ಸಾರಿಗೆ ನೌಕರರು ಮುಷ್ಕರನಡೆಸಲು ಮುಂದಾಗಿದ್ದು, ಬಸ್ ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಮತ್ತು ವಿದ್ಯಾರ್ಥಿಗಳ ಪರೀಕ್ಷೆ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ, ಮುಷ್ಕರ ನಿರ್ಧಾರ ಕೈಬಿಡುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಚಿವರು, 6ನೇ ವೇತನ ಆಯೋಗ ಜಾರಿಗೆ ಚರ್ಚೆ ನಡೆಸಲಾಗುವುದು. ಸಾರಿಗೆ ನೌಕರರಿಗೆ ಶೀಘ್ರದಲ್ಲಿ ಸಂಬಳ ಹೆಚ್ಚಳ ಮಾಡುತ್ತೇವೆ. ಆದರೆ ಎಷ್ಟು ಹೆಚ್ಚಳ ಮಾಡುತ್ತೇವೆ ಎಂದು ಈಗಲೇ ಹೇಳಲಾಗದು. ರಾಜ್ಯದಲ್ಲಿ ಉಪಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಎಷ್ಟು ಸಂಭಳ ಹೆಚ್ಚಿಸುತ್ತೇವೆ ಎಂಬುದನ್ನು ಘೋಷಿಸಿದರೆ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಹಾಗಾಗಿ ಚುನಾವಣೆ ಮುಗಿಯುವವರೆಗೂ ಸಾರಿಗೆ ನೌಕರರು ಸಮಾಧಾನದಿಂದ ಇರಬೇಕು ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಮುಷ್ಕರದ ಹೆಸರಲ್ಲಿ ಬಸ್ ಸಂಚಾರ ಬಂದ್ ಮಾಡಿದರೆ ವಿದ್ಯಾರ್ಥಿಗಳು, ಸರ್ವಜನಿಕರಿಗೆ ತೊಂದರೆಯಾಗಲಿದೆ. ಹೀಗಾಗಿ ಮುಷ್ಕರದ ನಿರ್ಧಾರ ಹಿಂಪಡೆಯಿರಿ ಎಂದು ಮನವಿ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ