ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕದ ರಾಜಕಾರಣಕ್ಕೆ 2020ರ ಜನವರಿ ಮತ್ತು ಫೆಬ್ರವರಿ ಅತ್ಯಂತ ಮಹತ್ವದ ಕಾಲ. ಇದು ರಾಜಕೀಯ ಪಕ್ಷಗಳಿಗೆ ಅಗ್ನಿಪರೀಕ್ಷೆ ಕೂಡ.
ಬಿಜೆಪಿಯಲ್ಲಿ ಗೆದ್ದು ಬಂದ 11 ಶಾಸಕರಿಗೆ ಹಾಗೂ ಕೆಲವು ಅಸಮಾಧಾನಿತರಿಗೆ ಮಂತ್ರಿಸ್ಥಾನ ನೀಡಬೇಕಿದ್ದರೆ, ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಗಳನ್ನು ಭರ್ತಿ ಮಾಡಬೇಕಿದೆ.
ಈ ಬೆಳವಣಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಎಷ್ಟು ಭಿನ್ನಮತಗಳನ್ನು ಸೃಷ್ಟಿಸಲಿದೆ? ಪಕ್ಷಗಳು ಅದನ್ನು ಹೇಗೆ ನಿಭಾಯಿಸುತ್ತವೆ ಎನ್ನುವ ಕುತೂಹಲಗಳಿವೆ. ಈ ಹಂತದಲ್ಲಿ ನಡೆಯಲಿರುವ ಬೆಳವಣಿಗೆಗಳು ರಾಜ್ಯರಾಜಕಾರಣದಲ್ಲಿ ಧೃವೀಕರಣಕ್ಕೆ, ಮುಂದಿನ ಹಲವಾರು ಬದಲಾವಣೆಗಳಿಗೂ ಕಾರಣವಾಗಬಹುದು.
ಬೆಳಗಾವಿ ಪಾಲಿಗೆ ಮಹತ್ವದ ತಿಂಗಳು
ಹೊಸ ವರ್ಷದ ಮೊದಲ ಎರಡೂ ತಿಂಗಳು ಬೆಳಗಾವಿ ಜಿಲ್ಲೆಯ ಪಾಲಿಗೆ ಅತ್ಯಂತ ಮಹತ್ವದ ಅವಧಿ. ಇಲ್ಲಿಯ ರಾಜಕಾರಣದಲ್ಲಿ ಅನೇಕ ಪ್ರಮುಖ ಬೆಳವಣಿಗೆಗಳು ನಿಶ್ಚಿತ. ಈಚೆಗೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ಮೂವರಿಗೆ ಮಂತ್ರಿಸ್ಥಾನ ನೀಡಬೇಕಾದ ಜವಾಬ್ದಾರಿ ಬಿಜೆಪಿ ಪಾಲಿಗಿದೆ.
ಇದರ ಜೊತೆಗೆ, ಮಂತ್ರಿ ಸ್ಥಾನ ಸಿಗದೆ ತೀವ್ರ ಅಸಮಾಧಾನ ಹೊಂದಿರುವ ಉಮೇಶ ಕತ್ತಿಗೂ ಸ್ಥಾನ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಈಗಾಗಲೆ ಇಬ್ಬರು ಮಂತ್ರಿಗಳಿದ್ದಾರೆ. ಇನ್ನೂ ನಾಲ್ವರಿಗೆ ಅವಕಾಶ ಸಿಕ್ಕಿದರೆ ಮಂತ್ರಿಗಳ ಸಂಖ್ಯೆ 6ಕ್ಕೇರಲಿದೆ.
ಇದನ್ನೂ ಓದಿ – ಬೆಳಗಾವಿಗೆ ಮತ್ತೆ 4 ಸಚಿವ ಸ್ಥಾನ ಫಿಕ್ಸ್?
ಒಂದೇ ಜಿಲ್ಲೆಗೆ 6 ಮಂತ್ರಿಸ್ಥಾನ ನೀಡುವುದು ಸುಲಭವೇ? ಇತರ ಜಿಲ್ಲೆಗಳ ಶಾಸಕರು ಸುಮ್ಮನಿರುವರೇ? ಇದರ ಜೊತೆತೆ ರಮೇಶ ಜಾರಕಿಹೊಳಿಗೆ ಮಂತ್ರಿಸ್ಥಾನ ಕೊಟ್ಟರೆ ಸಾಕೆ? ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದೇ? ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಒಂದೇ ಜಿಲ್ಲೆಯಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಾಗಲಿದ್ದಾರೆ. ಅದನ್ನೂ ಪಕ್ಷ ಹೇಗೆ ನಿಭಾಯಿಸಲಿದೆ ಎನ್ನುವ ಪ್ರಶ್ನೆಯೂ ಇದೆ.
ಲಕ್ಷ್ಮಣ ಸವದಿಗೆ ಫೆ.26 ಮಹತ್ವದ ದಿನ
ಇವೆಲ್ಲ ಬೆಳವಣಿಗೆ ಜೊತೆಗೆ ಶಾಸಕರಲ್ಲದೆ ಮಂತ್ರಿಯಾಗಿರುವ, ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿಗೆ ಮುಂದಿನ ಒಂದು ತಿಂಗಳು ಇಪ್ಪತ್ತಾರು ದಿನ ಅತ್ಯಂತ ನಿರ್ಣಾಯಕ. ಏಕೆಂದರೆ ಅಷ್ಟರೊಳಗೆ ಅರು ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರಾಗಬೇಕು. ಇಲ್ಲವಾದಲ್ಲಿ ಅವರು ಸಚಿವಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ.
ಇದನ್ನೂ ಓದಿ – ಶಿವಾಜಿನ ನಗರ ಕಾಂಗ್ರೆಸ್ ಗೆಲುವು: ಲಕ್ಷ್ಮಣ ಸವದಿಗೆ ವರ?
ವಿಧಾನಸಭೆ ಸದಸ್ಯರಾಗುವುದಂತೂ ಅಸಾಧ್ಯದ ಮಾತು. ಹಾಗಾಗಿ ವಿಧಾನಪರಿಷತ್ ಒಂದೇ ಅವರಿಗಿರುವ ದಾರಿ. ವಿಧಾನಪರಿಷತ್ ನಲ್ಲೂ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಅವರಿಂದ ತೆರವಾದ ಒಂದು ಸ್ಥಾನವಿದೆ. ಅದಕ್ಕೆ ಲಕ್ಷ್ಮಣ ಸವದಿಗೆ ಅವಕಾಶ ಸಿಕ್ಕಿದರೆ ಅವರ ಮಂತ್ರಿಸ್ಥಾನ ಉಳಿಯಲಿದೆ. ಆದರೆ ಆ ಸ್ಥಾನಕ್ಕೆ ರಾಣೆಬೆನ್ನೂರಿನ ಆರ್.ಶಂಕರ್ ಕೂಡ ಕಣ್ಣಿಟ್ಟಿದ್ದಾರೆ.
ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಲಕ್ಷ್ಮಣ ಸವದಿ, ಕಾಲಬಂದಾಗ ಎಲ್ಲವೂ ಆಗಿತ್ತದೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಶಾಸಕನಲ್ಲದಿದ್ದರೂ ತಮ್ಮನ್ನು ಉಪಮುಖ್ಯಮಂತ್ರಿ ಮಾಡಿರುವ ಹೈಕಮಾಂಡೇ ತಮ್ಮನ್ನು ಉಳಿಸಿಕೊಳ್ಳುತ್ತದೆ ಎನ್ನುವ ವಿಶ್ವಾಸ ಅವರಲ್ಲಿದೆ.
ಇನ್ನು, ಉಪಮುಖ್ಯಮಂತ್ರಿ ಹುದ್ದೆಯೇ ಇರಬಾರದು ಎಂದು ರೇಣುಕಾಚಾರ್ಯ ಸಹಿ ಸಂಗ್ರಹಿಸುತ್ತಿರುವ ಕುರಿತು ಸವದಿ ಅವರನ್ನು ಪ್ರಶ್ನಿಸಿದಾಗ, ಇದೆಲ್ಲ ಹಾದಿ ಬೀದಿಯಲ್ಲಿ ಚರ್ಚಿಸುವ ವಿಷಯವಲ್ಲ ಎಂದಿದ್ದಾರೆ.
ಒಟ್ಟಾರೆ ಕರ್ನಾಟಕದ ರಾಜಕಾರಣದಲ್ಲಿ ಮುಂದಿನ ಎರಡು ತಿಂಗಳು ಅತ್ಯಂತ ಮಹತ್ವದ ಅವಧಿಯಾಗಿದ್ದು, ಹಲವಾರು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ