Kannada NewsKarnataka News

ಜಿಲ್ಲಾಧಿಕಾರಿ ಕೊಟ್ಟ ಡೆಡ್ ಲೈನ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಜಿಲ್ಲೆಯಲ್ಲಿ ಇರುವ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಕಾರ್ಯಲಯಗಳನ್ನು ತಂಬಾಕು ಮುಕ್ತ ಪ್ರದೇಶಗಳಾಗಿ ಮಾಡಿ ತಂಬಾಕು ನಿಷೇಧಿತ ಪ್ರದೇಶ ಎಂಬ ಫಲಕಗಳನ್ನು ಅಳವಡಿಸಬೇಕು. ಅದೇ ರೀತಿ ಎಲ್ಲ ಶಾಲೆಗಳ ಸುತ್ತಮುತ್ತಲಿನ ಪ್ರದೇಶವನ್ನು ತಂಬಾಕು ರಹಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಶುಕ್ರವಾರ ( ಮಾ.೬ ) ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋಟ್ಟಾ ಕಾಯ್ದೆಯ ೩ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರಿಲ್ ೧೦ರ ಒಳಗಾಗಿ ಜಿಲ್ಲೆಯಲ್ಲಿ ಇರುವ ಎಲ್ಲಾ ಶಾಲೆಯಗಳನ್ನು ತಂಬಾಕು ರಹಿತ ಪ್ರದೇಶವಾಗಿ ಮಾಡಬೇಕು. ಅದಕ್ಕೆ ಬೇಕಾಗುವ ಅಗತ್ಯ ಕ್ರಮವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕು.
ತಂಬಾಕು ರಹಿತ ಶಾಲೆಗಳ ಮತ್ತು ಕಾರ್ಯಾಲಯಗಳ ಮಾಹಿತಿಯನ್ನು ಫೋಟೊಗಳ ಸಮೇತ ಜಿಲ್ಲಾಧಿಕಾರಿಗಳ ಕಾರ್ಯಲಯ ಮತ್ತು ಜಿಲ್ಲಾಪಂಚಾಯತ ಕಾರ್ಯಾಲಯಗಳಿಗೆ ಕಳುಹಿಸಿ ಕೊಡಬೇಕು. ನಿಯಮ ಬಾಹಿರವಾಗಿ ಯಾರಾದರು ತಂಬಾಕು ಮಾರಾಟ ಮಾಡುತ್ತಿದ್ದರೆ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ದಂಡ ವಸೂಲಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್. ಬಿ ಬೊಮ್ಮನಹಳ್ಳಿ ಅವರು ತಿಳಿಸಿದರು.
ಬಳಿಕ ಜಿಲ್ಲಾಪಂಚಾಯತ ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ತಂಬಾಕು ಅಂಗಡಿಗಳು ಮಕ್ಕಳಿಗೆ ಸಿಗರೇಟ್ ಅಥವಾ ತಂಬಾಕು ಮಾರಾಟ ಮಾಡುತ್ತಾರೆ ಎಂಬುದನ್ನು ಸ್ವತಃ ಮಕ್ಕಳನ್ನು ತಂಬಾಕು ಅಂಗಡಿಗಳಿಗೆ ಕಳುಹಿಸಿ ಪರೀಕ್ಷೆ ಮಾಡಿ ನೋಡಿ, ಒಂದು ವೇಳೆ ಮಕ್ಕಳಿಗೆ ತಂಬಾಕು ಅಂಗಡಿಯವರು ಮಾರಾಟ ಮಾಡಿದರೆ ಅವರಿಗೆ ದಂಡ ಹಾಕಿ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ ಕೆ.ಎಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ. ವಿನಯ ದಾಸ್ತಿಕೊಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಬಿ.ಎನ್. ತುಕ್ಕಾರ ಸೇರಿದಂತೆ ಶಿಕ್ಷಣ, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಮದ್ಯ ಮಾರಾಟ ನಿಷೇಧ

ಮಾರ್ಚ ೯ ರಂದು ರಾತ್ರಿ ಕಾಮದಹನ ಹಾಗೂ ಮಾರ್ಚ ೧೦ ರಂದು ಹೋಳಿ ಹಬ್ಬದ ನಿಮಿತ್ಯ ಜಿಲ್ಲೆಯ ನಗರ ಹಾಗೂ ತಾಲೂಕಿನಾದ್ಯಂತ ಮುಂಜಾಗೃತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮಾರ್ಚ ೯ ರಂದು ಬೆಳಿಗ್ಗೆ ೬ ಗಂಟೆಯಿಂದ ಮಾರ್ಚ ೧೦ ರಂದು ರಾತ್ರಿ ೧೨ ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರಾದ ಬಿ.ಎಸ್. ಲೋಕೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಸಪ್ತಪದಿ ಸಾಮೂಹಿಕ ವಿವಾಹ:ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನ ಹಾಗೂ ರಾಯಬಾಗ ತಾಲೂಕಿನ ಚಿಂಚಲಿಯ ಶ್ರೀ ಮಾಯಕ್ಕಾದೇವಿ ದೇವಸ್ಥಾನದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ.
ಏ.೨೬ ರಂದು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹಾಗೂ ಮೇ ೨೪ ರಂದು ರಾಯಬಾಗ ತಾಲ್ಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನದಲ್ಲಿ ಸಪ್ತಪದಿ ಕಾರ್ಯಕ್ರಮದಡಿ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಸರಳ ವಿವಾಹವಾದ ವರನಿಗೆ ರೂ. ೫೦೦೦ ಗಳನ್ನು ಮತ್ತು ವಧುವಿಗೆ ರೂ. ೧೦,೦೦೦ ಗಳನ್ನು ಮತ್ತು ಎರಡು ಚಿನ್ನದ ತಾಳಿಗಳನ್ನು ಹಾಗೂ ೩ ಚಿನ್ನದ ಗುಂಡುಗಳನ್ನು (ಅಂದಾಜು ೮ ಗ್ರಾಮ್ ತೂಕ ) ಒಟ್ಟು ರೂ . ೫೫,೦೦೦ ಗಳನ್ನು ದೇವಾಲಯದ ವತಿಯಿಂದ ಭರಿಸಲಾಗುತ್ತಿದೆ.
ಸಾಮೂಹಿಕ ಸರಳ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ರೂ. ೧೦, ೦೦೦ ಗಳ ನಿಶ್ಚಿತ ಠೇವಣ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ ರೂ . ೫೦, ೦೦೦ ಗಳನ್ನು ನೀಡಲಾಗುತ್ತಿದೆ.
ಸಾಮೂಹಿಕ ಸರಳ ವಿವಾಹಕ್ಕೆ ಆಗಮಿಸುವ ವಧು – ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಇತರೆ ಅವಶ್ಯಕ ವ್ಯವಸ್ಥೆಗಳನ್ನು ದೇವಾಲಯದಿಂದ ಮಾಡಲಾಗುವುದು.
ಸಾಮೂಹಿಕ ವಿವಾಹದಲ್ಲಿ ಭಾಗ ವಹಿಸುವ ವಧು-ವರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪಡೆದು ಅರ್ಜಿ ಫಾರ್ಮನ್ನು ಭರ್ತಿ ಮಾಡಿ ಮಾರ್ಚ್ ೨೭ ರೊಳಗಾಗಿ ಸವದತ್ತಿ ತಾಲೂಕಿನ ಯಲ್ಲಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಏಪ್ರಿಲ್ ೨೪ ರೊಳಗಾಗಿ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನದಲ್ಲಿ ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸವದತ್ತಿ ತಾಲೂಕಿನ ಯಲ್ಲಮನ ಗುಡ್ಡದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ದೂರವಾಣ ಸಂಖ್ಯೆ: ೯೪೪೮೧೫೮೧೧೫/ ೯೪೮೩೨೫೨೪೮೯/ ೯೪೪೯೧೫೭೧೮೭ ಹಾಗೂ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನದ ದೂರವಾಣ ಸಂಖ್ಯೆ :೦೮೩೩೧-೨೩೭೨೨೦, ೦೮೩೩೫-೨೪೫೨೪೭, ೯೮೮೦೦೨೬೪೩೧ ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  ಶಂಕುಸ್ಥಾಪನೆ ಸಮಾರಂಭ ಮಾ.೭ ರಂದು

ಜಲ ಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ನಿಗಮ ನಿಯಮಿತ ವತಿಯಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪೂರ (ಹಳೆ ದಿಗ್ಗೆವಾಡಿ) – ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣದ ಶಂಕು ಸ್ಥಾಪನೆಯ ಕಾರ್ಯಕ್ರಮವು ಶನಿವಾರ (ಮಾ.೭ ) ಮಧ್ಯಾಹ್ನ ೨ ಗಂಟೆಗೆ ರಾಯಬಾಗ ತಾಲೂಕಿನ ದಿಗ್ಗೆವಾಡಿಯಲ್ಲಿ ಜರುಗಲಿದೆ.
ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಶ್ರೀಮಂತ ಪಾಟೀಲ ಆಗಮಿಸಿಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಬಾಗ ಕ್ಷೇತ್ರದ ಶಾಸಕಾರಾದ ದುರ್ಯೋಧನ ಐಹೊಳೆ ಅವರು ವಹಿಸಲಿದ್ದಾರೆ.
ರಾಜ್ಯ ರೈಲ್ವೆ ಸಚಿವರಾದ ಸುರೇಶ ಅಂಗಡಿ, ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷಣ ಸವದಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಜಿಲ್ಲೆಯ ಪ್ರತಿನಿಧಿಗಳು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿದ್ಯುತ್ ವ್ಯತ್ಯಯ

ನಗರದ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಉದ್ಯಮಭಾಗ, ಆರ್.ಪಿ.ಡಿ, ಅಗ್ಜಲರಿ, ಮಜಗಾಂವ, ಹುಲಿಯಾರ, ಘಡಕೆ ಈ ಪ್ರದೇಶಗಳಲ್ಲಿ ಮಾರ್ಚ ೮ ರಂದು ಮುಂಜಾನೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಭಾರತ ಸ್ಟೇಜ್-೪ ವಾಹನ ನೋಂದಣಿಗೆ ಮಾರ್ಚ್ ೩೧ ಕೊನೆಯ ದಿನ

ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮೋಟಾರು ವಾಹನಗಳ ನಿಯಮಗಳ ಪ್ರಕಾರ ಏಪ್ರಿಲ್ ೧ ರಿಂದ ಭಾರತ ಸ್ಟೇಜ್-೪ ಮಾಪನದ ವಾಹನಗಳ ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ. ಆದ್ದರಿಂದ ಮಾರ್ಚ್ ೩೧ ರೊಳಗಾಗಿ ಭಾರತ ಸ್ಟೇಜ್-೪ ಮಾಪನದ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ತಾತ್ಕಾಲಿಕ ನೋಂದಣ ಸಂಖ್ಯೆಯ ಮೇಲೆ ವಾಹನ ಖರೀದಿ ಮಾಡಿದ ನಂತರ ಕಾಯಂ ನೋಂದಣ ಮಾಡಿಸದೇ ಇರುವ ವಾಹನ ಮಾಲೀಕರು ಹಾಗೂ ವಿತರಕರು ಮಾರ್ಚ್ ೩೧ ರೊಳಗಾಗಿ ಭಾರತ ಸ್ಟೇಜ್- ೪ ವಾಹನಗಳ ನೋಂದಣಿ ಮಾಡಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button