*ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಕೊಲೆ: ಆರೋಪಿಗೆ ಮರಣದಂಡನೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ಹಂತಕನಿಗೆ ಜಿಲ್ಲಾ ಪೋಕ್ಸೊ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಪ್ರಕರಣದ ಬಗ್ಗೆ ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಈಗ ಆರೋಪಿ ರಾಯಬಾಗ ತಾಲೂಕು ಪರಮಾನಂದವಾಡಿಯ ಭರತೇಶ ರಾವಸಾಬ ಮಿರ್ಜಿ (28) ಎಂಬಾತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿ 2019ರ ಅಕ್ಟೋಬರ್ 15 ರ ಸಂಜೆ 5:30 ಕ್ಕೆ ತನ್ನ ಮನೆಯಿಂದ ಬಸವಣ್ಣ ದೇವರ ಗುಡಿಯ ಹತ್ತಿರ ಹೋಗಿ ಮರಳಿ ಬರುವಾಗ ಆರೋಪಿ, ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗುವ ಉದ್ದೇಶದಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಾಲಕಿ ಚೀರಾಡುತ್ತಿದ್ದಂತೆ ಆಕೆಯ ಕುತ್ತಿಗೆ ಹಿಸುಕಿ ಕಲ್ಲನ್ನು ಕಟ್ಟಿ ಮನೆ ಹತ್ತಿರ ಇದ್ದ ಬಾವಿಗೆ ಒಗೆದು ಬರ್ಬರವಾಗಿ ಕೊಲೆ ಮಾಡಿದ್ದ.
ಆರೋಪಿ ಮನೆಗೆ ಬೀಗ ಹಾಕಿಕೊಂಡು ಪರಾರಿ ಆಗಿದ್ದ. ನಂತರ ಪೊಲೀಸರು ಬಾವಿಯಲ್ಲಿ ಬೋರ್ ವೆಲ್ ರಿಪೇರಿ ಮಾಡುವ ಕ್ಯಾಮರಾವನ್ನು ಬಿಟ್ಟು ತಪಾಸಣೆ ಮಾಡಿದ್ದಾರೆ. ಬಾವಿಯ ತುಂಬ ನೀರು ತುಂಬಿದ್ದು 6 ಮೋಟರ್ ಗಳ ಸಹಾಯದಿಂದ ಇಡೀ ರಾತ್ರಿ ತಪಾಸಣೆ ನಡೆಸಿದ ವೇಳೆ ಕೊನೆಗೂ ಬಾಲಕಿಯ ಶವ ಸಿಕ್ಕಿದೆ.
ತನಿಖಾಧಿಕಾರಿ ಜಿ.ಎಸ್.ಉಪ್ಪಾರ ಪ್ರಕರಣ ದಾಖಲಿಸಿದ್ದರು. ಮುಂದಿನ ದಿನಗಳಲ್ಲಿ ಎನ್.ಮಹೇಶ ಮತ್ತು ಕೆ.ಎಸ್.ಹಟ್ಟಿ ತನಿಖೆ ಮಾಡಿ ಮಾನ್ಯ ಹೆಚ್ಚುವರಿ ಜಿಲ್ಕಾ ಸತ್ರ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಪ್ರಕರಣ ವಿಚಾರಣೆ ಮಾಡಿ 20 ಸಾಕ್ಷಿಗಳ ವಿಚಾರಣೆ ಹಾಗೂ 106 ದಾಖಲೆ ಮತ್ತು 22 ಮುದ್ದೆಮಾಲುಗಳ ಆಧಾರದ ಮೇಲೆ ಆರೋಪಿ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿ ಭರತೇಶ ರಾವಸಾಬ ಮಿರ್ಜಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.
ಕಾಲಂ 363 ರಡಿ 7 ವರ್ಷಗಳ ಶಿಕ್ಷೆ,ದಂಡ ರೂ.5000, ಕಲಂ 376 ರ ಪ್ರಕಾರ 10 ವರ್ಷಗಳ ಶಿಕ್ಷೆ ಮತ್ತು ದಂಡ ರೂಪವಾಗಿ 15 ಸಾವಿರ ರೂ. ಹಾಗೂ ಕಲಂ 201 ಸಾಕ್ಷಿ ನಾಶಕ್ಕೆ ಸಂಬಂಧಿಸಿ 7 ವರ್ಷಗಳ ಶಿಕ್ಷೆ ಮತ್ತು ದಂಡ ಹಾಗೂ ರೂ.5,000 ಹಾಗೂ ಪೋಕ್ಸೊ ಕಲಂ 4 ಮತ್ತು 6 ರಡಿ ಕಠಿಣ ಜೀವಾವಧಿ ಶಿಕ್ಷೆ ಹಾಗೂ ರೂ.20,000 ದಂಡ ವಿಧಿಸಿದ್ದಾರೆ. ದಂಡವನ್ನು ತುಂಬದೇ ಇದ್ದ ಕಾಲಕ್ಕೆ ಒಂದು ವರ್ಷದ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ. ಮತ್ತು ಬಾಲಕಿಯ ತಂದೆ- ತಾಯಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ 10 ಲಕ್ಷ ರೂ. ಪರಿಹಾರ ಪಡೆಯಲು ನ್ಯಾಯಾಲಯ ಆದೇಶ ನೀಡಿದೆ.