ಜಿಲ್ಲೆಯ ಜಾಣ-ಜಾಣೆಯರಿಗೆ ಪ್ರತಿಭಾ ಪುರಸ್ಕಾರ
ಆಗಸ್ಟ್ ಮೊದಲ ವಾರ
ದಾನಿಗಳ ಮೂಲಕ ನಗದು ಪುರಸ್ಕಾರ-ಡಾ.ಬೊಮ್ಮನಹಳ್ಳಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಜಿಲ್ಲೆಯ ಜಾಣ-ಜಾಣೆಯರನ್ನು ಸನ್ಮಾನಿಸಿ, ದಾನಿಗಳ ಮೂಲಕ ನಗದು ಬಹುಮಾನ ಕೊಡಿಸುವ ಸತ್ಸಂಪ್ರದಾಯವನ್ನು ಈ ವರ್ಷವೂ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಜು.20) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ, ವಸತಿಶಾಲೆಗಳಲ್ಲಿ ಕಲಿತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ಜಾಣ-ಜಾಣೆಯರನ್ನು ಸನ್ಮಾನಿಸುವ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಈ ವರ್ಷ ಅಗಸ್ಟ್ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿಪತ್ರಗಳನ್ನು ನೀಡುವ ಸತ್ಸಂಪ್ರದಾಯವನ್ನು ಜಿಲ್ಲಾಡಳಿತವು ಪ್ರತಿವರ್ಷ ಪಾಲಿಸಿಕೊಂಡು ಬಂದಿದೆ. ಅದೇ ರೀತಿ ಈ ಸಲ ಕೂಡ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಶಾಲೆ ಮತ್ತು ವಸತಿನಿಲಯಗಳಲ್ಲಿದ್ದುಕೊಂಡು ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಮಾರಂಭ ಈಗಾಗಲೇ ತಡವಾಗಿದೆ. ಆದ್ದರಿಂದ ಕಳೆದ ಬಾರಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು.
ಕಳೆದ ಬಾರಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿತ್ತು. ಈ ಬಾರಿ ಮಕ್ಕಳ ಸಂಖ್ಯೆಯನ್ನು ಆಧರಿಸಿ ಶೇ.95 ರವರೆಗೆ ಅಂಕ ಗಳಿಸಿದ ಮಕ್ಕಳನ್ನು ಪುರಸ್ಕಾರಕ್ಕೆ ಪರಿಗಣಿಸುವ ಬಗ್ಗೆ ನಂತರ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರ ಸಂಖ್ಯೆಗೆ ಅನುಗುಣವಾಗಿ ದಾನಿಗಳನ್ನು ಗುರುತಿಸಿ, ಅವರ ಮೂಲಕವೇ ಮಕ್ಕಳಿಗೆ ಚೆಕ್ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶೇ.90 ಕ್ಕೂ ಅಧಿಕ ಅಂಕ ಗಳಿಸಿರುವ ಮಕ್ಕಳ ಪಟ್ಟಿಯನ್ನು ತಯಾರಿಸಿ, ಅವರ ಸಂಖ್ಯೆಗೆ ಅನುಗುಣವಾಗಿ ದಾನಿಗಳನ್ನು ಗುರುತಿಸಿ ಸಮನ್ವಯತೆ ಸಾಧಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಅವರು ಮಾತನಾಡಿ ಕಳೆದ ಬಾರಿಯಂತೆ ಸಿದ್ಧತೆ ಕೈಗೊಳ್ಳುವಂತೆ ತಿಳಿಸಿದರು.
ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತ ಡಾ.ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಉಪಸ್ಥಿತರಿದ್ದರು.
ಉಪ ವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಹೊನಕೇರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎ.ಬಿ.ಪುಂಡಲೀಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಮನಗೌಡ ಕನ್ನೊಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಾಣ ಜಾಣೆಯರ ಬಳಗ ರಚಿಸಲು ಅರ್ಜಿ ಆಹ್ವಾನ
ಕನ್ನಡ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿ ಮತ್ತು ಯುವಜನರನ್ನು ಸಾಹಿತ್ಯಾಭಿರುಚಿಗೆ ಆಕರ್ಷಿಸಲು ಹಾಗೂ ಸಾಹಿತ್ಯದ ಕ್ರಿಯಾಶೀಲತೆಯನ್ನು ಬೆಳೆಸಲು ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಜಾಣ ಜಾಣೆಯರ ಬಳಗವನ್ನು ರಚಿಸಲು ಅರ್ಜಿ ಆಹ್ವಾನಿಸಲಾಗಿದೆ.
ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕನಿಷ್ಠ 5 ರಿಂದ 15 ಮಂದಿ ವಿದ್ಯಾರ್ಥಿಗಳನ್ನೊಳಗೊಂಡಂತೆ ಕಾರ್ಯಾಕಾರಿ ಸಮಿತಿಯೊಂದನ್ನು ರಚಿಸಿಕೊಂಡು ಆಯಾ ಕಾಲೇಜುಗಳ ಪ್ರಾಶುಂಪಾಲರು ಹಾಗೂ ಕನ್ನಡ ವಿಭಾಗಗಳ ಮುಖ್ಯಸ್ಥರ ಅನುಮೋದನೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕಾಲೇಜಿನಲ್ಲಿ ಕನ್ನಡ ಸಾಹಿತ್ಯಿಕ ವಾತಾವರಣವನ್ನು ಕ್ರಿಯಾಶೀಲವಾಗಿಡುವ ನಿಟ್ಟಿನಲ್ಲಿ ವರ್ಷದಲ್ಲಿ 2 ಕಾರ್ಯಕ್ರಮಗಳಂತೆ ಕನ್ನಡ ಸಾಹಿತ್ಯ ಚಟುವಟಿಕೆಯನ್ನು ಈ ಬಳಗವು ಹಮ್ಮಿಕೊಳ್ಳುತ್ತದೆ. ಇದಕ್ಕಾಗಿ ಪ್ರಾಧಿಕಾರದಿಂದ ಕಾರ್ಯಕ್ರಮ ಒಂದಕ್ಕೆ ರೂ. 5 ಸಾವಿರ ಗರಿಷ್ಠ ಮಿತಿಯೊಳಗೆ ವಾಸ್ತವಿಕ ವೆಚ್ಚವನ್ನು ಭರಿಸಲಾಗುವದು.
ಅಲ್ಲದೆ ಪ್ರಾಧಿಕಾರವು ಹಮ್ಮಿಕೊಳ್ಳುವ ಎಲ್ಲಾ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ಈ ಜಾಣ ಜಾಣೆಯರ ಬಳಗವನ್ನು ತೊಡಗಿಸಿಕೊಳ್ಳಲಾಗುವುದು.
ನಿಗದಿತ ಅರ್ಜಿ ನಮೂನೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಹಾಯಕ ನಿದೇರ್ಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯನ್ನು ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ವೆಬ್‌ಸೈಟ್ www.knnadapustakapradhikara.com ನಲ್ಲಿ ಅರ್ಜಿಯನ್ನು ಪಡೆಯಬಹುದು.
ಅರ್ಜಿಗಳನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು-560002, ದೂರವಾಣಿ ಸಂಖ್ಯೆ 080-22107704, 22484516 ಅವರಿಗೆ ಕಳುಹಿಸಿಕೊಡಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ