ಪ್ರಗತಿವಾಹಿನಿ ಸುದ್ದಿ, ಹಾಸನ: ಇಲ್ಲಿನ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಹರೀಶ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಡ್ಡಿಗಟ್ಟ ಗ್ರಾಮದ ಸರ್ವೆ ನಂಬರ್ 224ರಲ್ಲಿ 50.30 ಹೆಕ್ಟೇರ್ ಗೋಮಾಳ ಪ್ರದೇಶ 2014ರಲ್ಲೇ ಪರಿಭಾವಿತ ಅರಣ್ಯವೆಂದು ಅನುಮೋದನೆಗೊಂಡಿತ್ತು. ಆದರೆ ಕೆ. ಹರೀಶ ಅವರು ಈ ಪರಿಭಾವಿತ ಪ್ರದೇಶದ 21 ಎಕರೆ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು 2023ರ ಮಾ.3ರಂದು ನಿರಾಕ್ಷೇಪಣಾ ಪತ್ರ ನೀಡಿದ್ದರು. ಈ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದರು.
ಕೆ. ಹರೀಶ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಪಡೆ ಮುಖ್ಯಸ್ಥರೂ ಆಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು ಸಂಪೂರ್ಣ ಪರಾಮರ್ಷಿಸಿದ ಸರಕಾರ ಕೆ. ಹರೀಶ ಅವರು ನಾಗರಿಕ ಸೇವಾ (ನಡತೆ) ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ರಾಜ್ಯಪಾಲರ ಆದೇಶದ ಮೇರೆಗೆ ಅಮಾನತುಗೊಳಿಸಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ