ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೂ ಮುನ್ನ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಜೆ.ಕೆ.ಕೃಷ್ಣಾರೆಡ್ಡಿ ರಾಜೀನಾಮೆ ನೀಡಿದ್ದಾರೆ.
ಇಂದು ಬೆಳಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ಜೆ.ಕೆ. ಕೃಷ್ಣಾರೆಡ್ಡಿ, ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಸದಸ್ಯರು ಇಂದು ಕೃಷ್ಣಾರೆಡ್ಡಿ ವಿರುದ್ಧ ನಿಯಮ 169ರಡಿಯಲ್ಲಿ ಅವಿಶ್ವಾಸ ನಿರ್ಣಯದ ಪ್ರಸ್ತಾವ ಮಂಡಿಸಲಿದ್ದರು. ಆದರೆ ಮುಜುಗರದಿಂದ ಪಾರಾಗಲು ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನವೇ ಕೃಷ್ಣಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಆಯ್ಕೆ ಆಗಿದ್ದರು. ಬಳಿಕ ನಡೆದ ರಾಜಕೀಯ ವಿದ್ಯಮಾನದಲ್ಲಿ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು. ಬಜೆಟ್ ಅಧಿವೇಶನದ ಮೊದಲ ದಿನವೇ ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿಯ 25 ಕ್ಕೂ ಹೆಚ್ಚು ಶಾಸಕರು ಸ್ಪೀಕರ್ ಕಾಗೇರಿ ಅವರಿಗೆ ಅವಿಶ್ವಾಸ ನಿರ್ಣಯ ನೊಟೀಸ್ ನೀಡಿದ್ದರು.
ಬಿಜೆಪಿಯಿಂದ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಸವದತ್ತಿ ಆನಂದ್ ಸಿ. ಮಾಮನಿ ಪ್ರಬಲ ಬೇಡಿಕೆ ಇಟ್ಟಿದ್ದು, ಬಹುತೇಕ ಬಿಜೆಪಿ ಶಾಸಕರು ಇದಕ್ಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆನಂದ್ ಸಿ. ಮಾಮನಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ