Belagavi NewsBelgaum NewsEducationLatest

*ದೇಸೂರು ಸರ್ಕಾರಿ ಮರಾಠಿ ಶಾಲೆಗೆ ಶತಮಾನೋತ್ಸವ ಸಂಭ್ರಮ*: *ನೂರು ವರ್ಷಗಳ ಜ್ಞಾನದ ಬೆಳಕು ಮುಂದಿನ ತಲೆಮಾರಿಗೂ ದಾರಿದೀಪವಾಗಲಿ*: *ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ದೇಸೂರು ಗ್ರಾಮದ ಸರ್ಕಾರಿ ಆದರ್ಶ ಪೂರ್ವ ಪ್ರಾಥಮಿಕ ಮರಾಠಿ ಶಾಲೆಯ ಐತಿಹಾಸಿಕ ಶತಮಾನೋತ್ಸವ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿ ಶುಭ ಹಾರೈಸಿದರು.

1926ರಲ್ಲಿ ಆರಂಭವಾದ ಈ ಶಾಲೆ ನೂರು ವರ್ಷಗಳ ಕಾಲ ಮೂರು ತಲೆಮಾರುಗಳ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡಿದ್ದು, ಇದು ಕೇವಲ ಒಂದು ಶಾಲೆಯ ಶತಮಾನೋತ್ಸವವಲ್ಲ, ಇಡೀ ಗ್ರಾಮದ ಹೆಮ್ಮೆಯ ಸಂಭ್ರಮವಾಗಿದೆ. ಅಂದಿನ ಹಿರಿಯರು ನೆಟ್ಟ ಶಿಕ್ಷಣದ ಸಣ್ಣ ಸಸಿ ಇಂದು ಸಾವಿರಾರು ಬದುಕುಗಳಿಗೆ ನೆರಳಾಗುವ ಹೆಮ್ಮರವಾಗಿ ಬೆಳೆದಿದೆ. ಈ ಶಾಲೆಯಲ್ಲಿ ಕಲಿತವರು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.

ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಅವರು, ಮಕ್ಕಳ ಕನಸುಗಳಿಗೆ ರೆಕ್ಕೆ ನೀಡುವುದು, ಅವರಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಸಮಾನ ಅವಕಾಶ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಇಂದಿನ ಮಕ್ಕಳಿಗೆ ಪಠ್ಯಪುಸ್ತಕದ ಜ್ಞಾನದ ಜೊತೆಗೆ ವೈಜ್ಞಾನಿಕ ಚಿಂತನೆ, ಸೃಜನಶೀಲತೆ, ತಂತ್ರಜ್ಞಾನದ ಅರಿವು ಮತ್ತು ಹೊಸದನ್ನು ಕಲಿಯುವ ಆಸಕ್ತಿ ಬೆಳೆಸಬೇಕು. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಜ್ಞಾನ ಸಂಪಾದನೆಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾತೃಭಾಷೆ ನಮ್ಮ ಬೇರುಗಳಾದರೆ, ಇತರ ಭಾಷೆಗಳು ನಮ್ಮ ರೆಕ್ಕೆಗಳಿದ್ದಂತೆ. ಮರಾಠಿ ಭಾಷೆಯ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಕನ್ನಡ, ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನೂ ಕಲಿಯಬೇಕು. ಬೆಳಗಾವಿಯ ಭಾಷಾ ವೈವಿಧ್ಯತೆ ಮತ್ತು ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಯಾವುದೇ ಮಗು ಹಳ್ಳಿಯಲ್ಲಿ ಹುಟ್ಟಿದೆ ಅಥವಾ ಸರ್ಕಾರಿ ಶಾಲೆಯಲ್ಲಿ ಓದುತ್ತಿದೆ ಎಂಬ ಕಾರಣಕ್ಕೆ ತನ್ನ ಕನಸುಗಳನ್ನು ಸೀಮಿತಗೊಳಿಸಿಕೊಳ್ಳಬಾರದು. ನಗರದ ಮಕ್ಕಳಿಗೆ ದೊರೆಯುವ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಮತ್ತು ಅವಕಾಶಗಳು ಗ್ರಾಮೀಣ ಮಕ್ಕಳಿಗೂ ಸಿಗಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಡಿಜಿಟಲ್ ಕಲಿಕೆ, ಪೂರ್ವಪ್ರಾಥಮಿಕ ಶಿಕ್ಷಣ ಹಾಗೂ ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಮಕ್ಕಳ ಬದುಕಿಗೆ ಅಡಿಪಾಯ ಹಾಕುವವರು. ಶಾಲೆಯ ಹಿಂದಿನ ಮತ್ತು ಇಂದಿನ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ, ಪೋಷಕರು, ಗ್ರಾಮಸ್ಥರು ಹಾಗೂ ದಾನಿಗಳ ಕೊಡುಗೆಯನ್ನು ಸ್ಮರಿಸಿದ ಅವರು, ಮಕ್ಕಳು ದೊಡ್ಡ ಸಾಧನೆ ಮಾಡುವುದರ ಜೊತೆಗೆ ಉತ್ತಮ ಮನುಷ್ಯರಾಗಬೇಕು. ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಶಾಲೆ, ಊರು, ತಂದೆ-ತಾಯಿ ಮತ್ತು ಶಿಕ್ಷಕರನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಶಾಲೆಯ ಮುಂದಿನ ನೂರು ವರ್ಷಗಳ ಅಭಿವೃದ್ಧಿಗಾಗಿ ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸೌಲಭ್ಯ ಮತ್ತು ಡಿಜಿಟಲ್ ಕಲಿಕೆಗೆ ಆದ್ಯತೆ ನೀಡಬೇಕು. ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ನಿರಂತರ ಸಂಪರ್ಕ ಹೊಂದಿ ತಮ್ಮ ಅನುಭವ ಹಾಗೂ ಜ್ಞಾನವನ್ನು ಇಂದಿನ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಈ ಶಾಲೆ ಮುಂದಿನ ಶತಮಾನದಲ್ಲಿಯೂ ಸಾವಿರಾರು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಜ್ಞಾನಮಂದಿರವಾಗಿ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ಪ್ರಶಾಂತ ಪಾಟೀಲ, ತಾನಾಜಿ ಹೊಸೂರಕರ್, ರಮಾಕಾಂತ ಕೊಂಡೂಸ್ಕರ್, ವಿವೇಕಾನಂದ ಪಾಟೀಲ, ಪುಂಡಲೀಕ್ ಚೌಹಾಣ್, ಸಂಕೇತ್ ಪಾಟೀಲ, ರಮೇಶ್ ಗೊರಲ್, ಮನೋಜ ಸಾವರಕರ್, ಯಲ್ಲಪ್ಪ ಸಾವಂತ, ಮಂಗಳಾ ಕಾಂಬಳೆ, ಸುನಿಲ್ ಪಾಟೀಲ, ರಾಜೇಂದ್ರ ಪಾಟೀಲ, ಸುಭಾಷ್ ಪಾಟೀಲ, ರೋಹಿತ್ ತಳವಾರ, ಮಂಗೇಶ್ ದೇಶಪಾಂಡೆ, ಭರಮನಿ ಪಾಟೀಲ, ಸಾತೇರಿ ಕಳಸೇಕರ್, ದಿಗಂಬರರಾವ್ ಪಾಟೀಲ, ಹೇಮಂತ ಚೌಹಾಣ್, ಗಂಗಾರಾಮ್ ಮಜುಕರ್, ವೆಂಕಟ್ ಪಾಟೀಲ, ಜೋತಿಬಾ ಕಳಸೇಕರ್, ಸಂತೋಷ ಮರಗಾಯಿ, ಅಂಕುಶ್ ಕೆಸರಕರ್, ಜಿ.ಕೆ. ಪಾಟೀಲ ಸೇರಿದಂತೆ ಶಾಲಾ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button