Kannada NewsKarnataka NewsLatest

ಅಕ್ಕೋಳ ಗ್ರಾಮದಲ್ಲಿ 62.63 ಕೋಟಿಗಳ ಅಭಿವೃದ್ಧಿ ಕಾಮಗಾರಿ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ:  “ಗಡಿಭಾಗದಲ್ಲಿ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು ಆ ನಿಟ್ಟಿನಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ) ಮಹಾವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಅಷ್ಟೆ ಅಲ್ಲದೆ ಎಲ್ಲ ಸರ್ಕಾರಿ ಶಾಲಾ-ಮಹಾವಿದ್ಯಾಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಅಕ್ಕೋಳದ ಐಟಿಐ ಮಹಾವಿದ್ಯಾಲಯದ ಸ್ವಂತ ಕಟ್ಟಡ ಲೋಕಾರ್ಪಣೆಗೊಳಿಸಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪೂರ್ತಿಗೊಳಿಸುತ್ತಿದ್ದೇನೆ,” ಎಂದು ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.

ತಾಲೂಕಿನ ಅಕ್ಕೊಳ ಗ್ರಾಮದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ) ಮಹಾವಿದ್ಯಾಲಯದ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

“ಅವಿರತವಾಗಿ ಪ್ರಯತ್ನಿಸಿ ಅಕ್ಕೊಳ ಗ್ರಾಮಕ್ಕೆ ಐಟಿಐ ಮಹಾವಿದ್ಯಾಲಯವನ್ನು ಮಂಜೂರು ಮಾಡಿಸಿದೆ. ಇಂದು ಪಂಚಾಯತರಾಜ್ ಇಲಾಖೆಯಿಂದ ಮಂಜೂರಾದ .2 ಕೋಟಿ ರೂ.ಗಳಲ್ಲಿ 4.23ಎಕರೆ  ಜಾಗದಲ್ಲಿ 12 ಕೊಠಡಿಗಳ ಸುಸಜ್ಜಿತ ಕಟ್ಟಡ ಹೊಂದಿದೆ. ಈ ತಾಂತ್ರಿಕ ಮಹಾವಿದ್ಯಾಲಯದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣಕ್ಕಾಗಿ ತುಂಬ ಅನುಕೂಲವಾಗಲಿದೆ. 15 ದಿನಗಳಲ್ಲಿ ಮಹಾವಿದ್ಯಾಲಯದಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಲಾಗುವುದು” ಎಂದ ಅವರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.

“ಅಕ್ಕೋಳ ಗ್ರಾಮದ 13 ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ 1.63 ರೂ. ಕೋಟಿ ಅನುದಾನ ಕಲ್ಪಿಸಲಾಗಿದೆ. ನನ್ನ 10 ವರ್ಷಗಳ ಆಡಳಿತಾಧಿಕಾರದಲ್ಲಿ ಅಕ್ಕೋಳ ಗ್ರಾಮಕ್ಕೆ ರೂ.62.63 ಕೋಟಿ ಅನುದಾನವನ್ನು ಬಿಡುಗೊಡೆಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ” ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ‘ಸ್ಥಳೀಯ ವಿಧಾನಸಭೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲ ಸರ್ಕಾರಿ ಶಾಲೆ-ಮಹಾವಿದ್ಯಾಲಯಗಳು ಸ್ವಂತ ಕಟ್ಟಡ ಹೊಂದಿದ್ದು ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ ಹೊಂದಿದೆ ಎಂದರು.

ಈ ಸಂದರ್ಭದಲ್ಲಿ ಕೌಶಲ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವಪ್ರಭು ಹಿರೇಮಠ, ಅಕ್ಕೋಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಕುಂಬಾರ, ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಮಲಗೊಂಡಾ ಪಾಟೀಲ, ಸಂಚಾಲಕ ರಾಮಗೌಡಾ ಪಾಟೀಲ, ಸಮಿತ ಸಾಸನೆ, ಮನಿಷಾ ರಾಂಗೊಳೆ, ಮ್ಹಾಳಪ್ಪಾ ಪಿಸುತ್ರೆ, ಸಿದ್ದು ನರಾಟೆ, ಜಿತೇಂದ್ರ ಕುಲಕರ್ಣಿ, ಬಾಪುಸಾಹೇಬ ಕಟ್ಟಿಕಲ್ಲೆ, ರಾಮಗೌಡಾ ಪಾಟೀಲ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಾಚಾರ್ಯ ವಿನೋದ ಗೋಕಾವಿ ಸ್ವಾಗತಿಸಿದರು. ಪ್ರೊ. ತುಕಾರಾಮ ಹಾಡಕರ ನಿರೂಪಿಸಿದರು. ಗೋಕಾಕದ ಸರ್ಕಾರಿ ಐಟಿಐನ ಪ್ರಾಚಾರ್ಯ ಎಸ್.ಎಸ್. ಖಿಲಾರೆ ವಂದಿಸಿದರು.

ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಶ್ರೇಷ್ಠವಾದುದು : ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button