Kannada NewsKarnataka News

*ದೇವಸ್ಥಾನ ಜೀರ್ಣೋದ್ದಾರದಿಂದ ಮಾನವ ಕುಲ ಅಭಿವೃದ್ಧಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌*

 * *ಹೇರಂಜಾಲು ಗ್ರಾಮದ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ನೂತನ ರಾಜಗೋಪುರ ಉದ್ಘಾಟಿಸಿದ ಸಚಿವರು* 

* *ಉಡುಪಿ ಜಿಲ್ಲೆ ಕರ್ನಾಟಕದ ದೇವರ ನಾಡು* 

Home add -Advt

 ಪ್ರಗತಿವಾಹಿನಿ ಸುದ್ದಿ, *ಉಡುಪಿ:* ದೇವಸ್ಥಾನಗಳ ಜೀರ್ಣೋದ್ದಾರ ಮಾಡಿದರೆ ಇಡೀ ಮಾನವ ಕುಲವೇ ಅಭಿವೃದ್ಧಿಯಾದಂತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಜಿಲ್ಲೆಯ ಬೈಂದೂರು ತಾಲೂಕಿನ ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಗುರುವಾರ ನಡೆದ ನೂತನ ರಾಜಗೋಪುರ ಸಮರ್ಪಣೆ ಹಾಗೂ ಅತಿರುದ್ರ ಮಹಾಯಾಗದ ಪುಣ್ಯ ಮುಹೂರ್ತದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇವಸ್ಥಾನ ಎಂಬ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ಧಿ ಮಾಡಿದರೆ ಇಡೀ ಸಮಾಜಕ್ಕೆ ಶಾಂತಿಯ ಸಂದೇಶ ರವಾನೆಯಾಗುತ್ತದೆ ಎಂದರು.

ಮನುಷ್ಯನಿಗೆ ನೆಮ್ಮದ್ದಿ ಕೊಡುವ ಸ್ಥಳಗಳೆಂದರೆ ಒಂದು ಅಮ್ಮನ ಮಡಿಲು, ಮತ್ತೊಂದು ದೇವಸ್ಥಾನಗಳು, ನಮ್ಮಲ್ಲಿರುವ ಕಷ್ಟಗಳನ್ನು ದೇವರ ಬಳಿ ಕೇಳುತ್ತೇವೆ. ದೇವರ ಬಳಿ ನಾವು ಯಾವುದೇ ಮುಚ್ಚುಮರೆ ಮಾಡದೆ ಎಲ್ಲವನ್ನೂ ಹೇಳಿಕೊಳ್ಳುತ್ತೇವೆ. ಇದೇ ದೇವರ ಮಹಿಮೆ ಎಂದು ಸಚಿವರು ಅಭಿಪ್ರಾಯಪಟ್ಟರು. 

ಮಹಾಲಿಂಗೇಶ್ವರ ದೇವರ, ಗುರು ಹಿರಿಯರ ಹಾಗೂ ತಂದೆ ತಾಯಂದಿರ ಆಶೀರ್ವಾದಿಂದ ನಾನು ಇಷ್ಟರ ಮಟ್ಟಿಗೆ ಬೆಳೆದೆ. ಬೇರನ್ನು ಮರೆತರೆ ಮರ ಗಟ್ಟಿಯಾಗಿ ನಿಲ್ಲುವುದಕ್ಕೆ ಸಾಧ್ಯವಿಲ್ಲ, ಹಾಗೆಯೇ ನಾವುಗಳು ಹಿಂದೆ ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ನಾವು ಹಳೆಯ ದಿನಗಳನ್ನು ನೆನಪಾಗಿಟ್ಟುಕೊಂಡು ಮುಂದಿನ ದಿನವನ್ನು ನೋಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಪಾಠ ಕಲಿಸಿದ ಗುರುಗಳು, ಜನ್ಮಕೊಟ್ಟ ತಂದೆ ತಾಯಿಯನ್ನು ಯಾರು ಭಕ್ತಿಯಿಂದ ನೋಡುತ್ತಾರೋ ಅವರು ಬಹಳಷ್ಟು ಎತ್ತರಕ್ಕೆ ಬೆಳೆಯುತ್ತಾರೆ, ಇದಕ್ಕೆ ಜಯಶೀಲ ಶೆಟ್ಟಿ ಅವರೆ ಉದಾಹರಣೆ. ದೇವಸ್ಥಾನಕ್ಕೆ ರಾಜಗೋಪುರವನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದರು. 

* *ಉಡುಪಿ ಜಿಲ್ಲೆ ದೇವರ ನಾಡು* 

ಉತ್ತರ ಕರ್ನಾಟಕದ ಬಹಳಷ್ಟು ಭಕ್ತರು ದೇವಸ್ಥಾನಗಳಿಗೆ ಉಡುಪಿ ಜಿಲ್ಲೆಗೆ ಬರುತ್ತಾರೆ, ಉಡುಪಿ ಜಿಲ್ಲೆ ದೇವರ ನಾಡು, ಇಲ್ಲಿನ ದೇವಾಲಯಗಳು ಅನ್ನಪ್ರಸಾದದ ಮೂಲಕ ಬಡವರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿವೆ. ಈ ಭಾಗದ ಜನರು ದೇವರ ಕೆಲಸಕಾರ್ಯದಲ್ಲಿ ಪಕ್ಷಬೇಧ ಮರೆತು ಸಂಘಟಿತರಾಗುವುದು ಶ್ಲಾಘನಿಯವಾಗಿದೆ ಎಂದರು. 

ಶಾಲೆ, ರಸ್ತೆ ಹಾಗೂ ಆಸ್ಪತ್ರೆಯ ಅಭಿವೃದ್ಧಿ ಮಾಡಿದರೆ ಕೇವಲ ಆ ಭಾಗದ ಜನರ ಅಭಿವೃದ್ಧಿಯಾಗುತ್ತದೆ. ಆದರೆ ದೇವಸ್ಥಾನ ಅಭಿವೃದ್ಧಿಯಿಂದ ಇಡೀ ಮಾನವ ಕುಲವೇ ಅಭಿವೃದ್ಧಿಯಾಗುತ್ತದೆ, ದೇವರ ಕೆಲಸ ಅಂದರೆ ಎಲ್ಲಾ ಕೆಲಸವನ್ನು ಮರೆತು ಇಲ್ಲಿನ ಉದ್ಯಮಿಗಳು ಗುಡಿಗಳನ್ನು ಜೀರ್ಣೋದ್ದಾರ ಮಾಡುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. 

ನಾನು ನನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 154 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಮಾಡಿದ್ದೇನೆ. ಪ್ರತಿಯೊಬ್ಬರ ಶ್ರೇಯಸ್ಸನ್ನು ಬಯಸುವುದೇ ನನ್ನ ಹಾಗೂ ಸರ್ಕಾರದ ಉದ್ದೇಶ. ನಮ್ಮ ದೇಶದ ನಮ್ಮ ಸಂಸ್ಕೃತಿಯನ್ನು ನಮ್ಮ ರಕ್ತದ ಪ್ರತಿ ಕಣ ಕಣದಲ್ಲೂ ಕಾಣುತ್ತೇವೆ. ನಮ್ಮ ದೇಶದಲ್ಲಿ 19,500 ಭಾಷೆಗಳಿವೆ, ವಿವಿಧ ಸಂಸ್ಕೃತಿಯನ್ನು ಹೊಂದಿದೆ. ನಾವು ನಂಬಿರುವ ಬಲವಾದ ದೇವರು, ದೈವ, ಸಂಸ್ಕೃತಿಯೇ ನಮ್ಮ ಶಕ್ತಿ ಎಂದು ಬಣ್ಣಿಸಿದರು. 

ಈ ವೇಳೆ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮಾಜಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಜಯಶೀಲ ಶೆಟ್ಟಿ, ಪದ್ಮನಾಭ, ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್‌ ಸಿಇಒ ಪ್ರತೀಕ್‌ ಬಾಯಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಮುಖಂಡರಾದ ಕಿಶೋರ್‌ ಕುಮಾರ್‌ ಹೆಗ್ಡೆ, ವಿಜಯ್‌ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button