*ಪರಾಗ್ವೆಯ ವರ್ಲ್ಡ್ ಸ್ಕೇಟ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕೆಎಲ್ಎಸ್ ಜಿಐಟಿ ವಿದ್ಯಾರ್ಥಿ ದೇವೇನ್ ಬಾಮನೆ*

ಪ್ರಗತಿವಾಹಿನಿ ಸುದ್ದಿ: ಆರು ಬಾರಿ ರಾಷ್ಟ್ರೀಯ ಪದಕ ವಿಜೇತ, ಎಂಟು ಬಾರಿ ರಾಜ್ಯ ಚಾಂಪಿಯನ್; ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಯುವ ಸ್ಕೇಟರ್
ಬೆಳಗಾವಿ: ಪರಾಗ್ವೆಯಲ್ಲಿ ನಡೆದ ಪ್ರತಿಷ್ಠಿತ ವರ್ಲ್ಡ್ ಸ್ಕೇಟ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ (ಕೆಎಲ್ಎಸ್ ಜಿಐಟಿ) ವಿದ್ಯಾರ್ಥಿ ದೇವೇನ್ ವಿನೋದ ಬಾಮನೆ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೆಎಲ್ಎಸ್ ಜಿಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ದೇವೇನ್, ರೋಲರ್ ಸ್ಕೇಟಿಂಗ್ ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಹಾಗೂ ಸಾಧನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಆರು ಬಾರಿ ರಾಷ್ಟ್ರೀಯ ಪದಕ ವಿಜೇತರಾಗಿರುವ ಅವರು, ಎಂಟು ಬಾರಿ ರಾಜ್ಯ ಚಾಂಪಿಯನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ದೇವೇನ್ ಅವರು ಹಲವು ಪ್ರಮುಖ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅನುಭವ ಹೊಂದಿದ್ದಾರೆ. ಕೊರಿಯಾ ಓಪನ್, ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್, ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ ಹಾಗೂ ಪರಾಗ್ವೆಯಲ್ಲಿ ನಡೆದ ವರ್ಲ್ಡ್ ಸ್ಕೇಟ್ ಗೇಮ್ಸ್ನಲ್ಲಿ ಪಾಲ್ಗೊಂಡಿರುವುದು ಅವರ ಕ್ರೀಡಾ ಪಯಣದ ಮಹತ್ವದ ಮೈಲುಗಲ್ಲುಗಳಾಗಿವೆ.
ಕ್ರೀಡೆಯ ಮೇಲಿನ ಅಪಾರ ಆಸಕ್ತಿ, ಕಠಿಣ ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಭ್ಯಾಸದ ಮೂಲಕ ದೇವೇನ್ ಈ ಸಾಧನೆಗಳನ್ನು ಮಾಡಿದ್ದಾರೆ. ಅವರ ಯಶಸ್ಸು ಬೆಳಗಾವಿ ಜಿಲ್ಲೆ ಹಾಗೂ ಕೆಎಲ್ಎಸ್ ಜಿಐಟಿಗೆ ಹೆಮ್ಮೆ ತಂದಿದ್ದು, ಇತರ ವಿದ್ಯಾರ್ಥಿಗಳಿಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಿದೆ.
ದೇವೇನ್ ಅವರ ಸಾಧನೆಗೆ ಕೆಎಲ್ಎಸ್ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ, ಆಡಳಿತ ಮಂಡಳಿ ಸದಸ್ಯ ರಾಮ ಭಂಡಾರೆ, ಪ್ರಾಚಾರ್ಯ ಡಾ. ವಿಜಯ ಅಠವಲೆ, ಆಡಳಿತ ವಿಭಾಗದ ಡೀನ್ ಪ್ರೊ. ದಿಗಂಬರ ಕುಲಕರ್ಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾರ್ಜ್ ರಾಡ್ರಿಗಸ್ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಮುಂದಿನ ಕ್ರೀಡಾ ಬದುಕು ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
ಕೆಎಲ್ಎಸ್ ಜಿಐಟಿ ಸಂಸ್ಥೆಯು ದೇವೇನ್ ಅವರ ಸಾಧನೆಯನ್ನು ಶ್ಲಾಘಿಸಿದ್ದು, ಭವಿಷ್ಯದಲ್ಲಿಯೂ ಅವರು ಕ್ರೀಡಾ ಕ್ಷೇತ್ರದಲ್ಲಿ ದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




