ಭಕ್ತಿಭಾವದ ಪರಾಕಾಷ್ಠೆ -ರಾಮಾಯಣ ಭಾಗ 5

ನೀತಾ ರಾವ್

ರಾಮನ ವಿವಾಹವಾಗಿ‌ ಒಂದಿಷ್ಟು ವರುಷಗಳು ಸಂದಿವೆ. ಮತ್ತು ಈ ವರುಷಗಳೆಲ್ಲ ಅಯೋಧ್ಯೆಯ ಅರಮನೆಯಲ್ಲಿಯೇ, ಪ್ರೀತಿಯ ಮಡದಿ ಸೀತೆ, ರಾಜ್ಯಭಾರವನ್ನೆಲ್ಲ ತನ್ನದೇ ಭುಜಗಳ ಮೇಲೆ ಹೊತ್ತಿರುವ ಪ್ರಿಯ ತಂದೆ ದಶರಥ ಮಹಾರಾಜ, ಪ್ರೇಮಮಯಿ ಮಾತೆಯರಾದ ಕೌಸಲ್ಯೆ, ಸುಮಿತ್ರಾ, ಮತ್ತು ಕೈಕೈ, ಇವರೆಲ್ಲರ ಮಧ್ಯೆ ಆನಂದದಿಂದ ಉರುಳಿವೆ. ಸುಂದರ ದಿನಗಳು, ಬೆಳದಿಂಗಳ ರಾತ್ರಿಗಳೂ ವಿಶೇಷ ಉಲ್ಲೇಖವಿಲ್ಲದೇ ಕಳೆದುಹೋಗಿದ್ದರೂ ಇದೇ ಸಮಯದಲ್ಲಿ ರಾಮನ ವ್ಯಕ್ತಿತ್ವವು ಸಂಪೂರ್ಣವಾಗಿ ರೂಪಗೊಂಡಿರಬಹುದಲ್ಲವೇ? ರಾಜ್ಯಭಾರದ ನಿರ್ಧಿಷ್ಟ ಜವಾಬ್ದಾರಿ ಇಲ್ಲದೇ ಹೋದರೂ ರಾಮನು ತನ್ನ ಅನುಜರೊಡನೆ ರಾಜ್ಯದ ಹಿತಕ್ಕಾಗಿ ದುಡಿದದ್ದು, ಚಿಂತಿಸಿದ್ದು, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸಿದ್ದು ಮೊದಲಾದ ಕಾರ್ಯಗಳನ್ನು ಸ್ವಂತ ಅಭಿರುಚಿಯಿಂದ ಮಾಡಿರಲೇಬೇಕು. ಮತ್ತು ಈ ಎಲ್ಲ ಕೆಲಸಗಳಿಂದಲೇ ರಾಜ್ಯಾಭಿಷೇಕಕ್ಕಿಂತ ಮೊದಲೇ ಅವನ ಕೀರ್ತಿ ಜನಮಾನಸದಲ್ಲಿ ಎತ್ತರದ ಸ್ಥಾನಕ್ಕೇರಿರಬಹುದು.
ಅದರ ಪರಿಣಾಮವನ್ನೇ ನಾವು ಮುಂದೆ ವನವಾಸದುದ್ದಕ್ಕೂ ಕಾಣುತ್ತೇವೆ. ರಾಮನು ಕಾಡಿಗೆ ಹೊರಟು ಮೊದಲು ತಲುಪುವುದೇ ನಿಷಾದ ರಾಜನ ಕಾಡಿಗೆ. ತನ್ನ ಕಾಡಿನ ಮೇಲೆ ಮುತ್ತಿಗೆ ಹಾಕಲೆಂದೇ ಶ್ರೀರಾಮನು ಬರುತ್ತಿರಬಹುದೆಂದು ತಿಳಿದು ತನ್ನೆಲ್ಲ ಸೈನ್ಯವನ್ನು ಎಚ್ಚರಿಸುವ ನಿಷಾದ ರಾಜನು ರಾಮನ ಬಳಿ ಹೋದಾಗ ಆಗುವ ಅನುಭವವೇ ಬೇರೆ. ರಾಜಕುಮಾರ ಶ್ರೀರಾಮನು ಅತ್ಯಂತ ವಿನಯದಿಂದ ತಾನು ಬಂದ ಕಾರಣವನ್ನು ಅರುಹಿದ ನಂತರ ನಿಷಾದ ರಾಜನು ಅಕ್ಷರಶಃ ರಾಮನ ಭಕ್ತನೇ ಆಗಿಹೋಗುತ್ತಾನೆ. ಹದಿನಾಲ್ಕು ವರ್ಷಗಳೆಲ್ಲವನ್ನೂ ತನ್ನ ಕಾಡಿನಲ್ಲಿ ಕಳೆದುಬಿಡಬೇಕೆಂದೂ, ತಾನು ರಾಮನ ದಾಸನಾಗಿ ಉಳಿದೆಲ್ಲ ಜವಾಬ್ದಾರಿಗಳನ್ನೂ ನೋಡಿಕೊಂಡಿರುತ್ತೇನೆಂದೂ ಬೇಡಿಕೊಳ್ಳುತ್ತಾನೆ. ಆದರೆ ಯಥಾ ಪ್ರಕಾರ ರಾಮನು ವಿನಯದಿಂದಲೇ ಅವನ ಬೇಡಿಕೆಯನ್ನು ತಳ್ಳಿಹಾಕುತ್ತಾನೆ. ತಮ್ಮ ವನವಾಸದ ಮೊದಲ ರಾತ್ರಿಯನ್ನು ಅಲ್ಲಿನ ಒಂದು ಮರದಡಿ ರಾಮ-ಸೀತೆಯರು ಕಳೆಯುತ್ತಾರೆ. ಲಕ್ಷ್ಮಣನು ಅವರ ಕಾವಲಿಗೆ ನಿಂತು ಎಚ್ಚರವಾಗಿಯೇ ಕಳೆಯುತ್ತಾನೆ. ರಾಮ-ಸೀತೆಯರು ರಾತ್ರಿಯನ್ನು ಕಳೆದ ಆ ಮರವು ಇನ್ನೂ ಇದೆ ಎಂದು ಉತ್ತರ ಭಾರತದ ಜನ ಹೇಳುತ್ತಾರೆ. ಪ್ರಯಾಗರಾಜದ ಹತ್ತಿರವೇ ಇರುವ ಶೃಂಗವೇರಪುರ ಎನ್ನುವ ಊರು ನಿಷಾದ ರಾಜನ ರಾಜ್ಯವಾಗಿತ್ತಂತೆ. ಭಕ್ತಿಭಾವದಿಂದ ತನ್ನ ದಾಸಾನುದಾಸನಾಗ ಬಯಸುವ ನಿಷಾದ ರಾಜನಿಗೆ ರಾಮನು‌ ನೀಡುವುದು ಮಿತ್ರನ ಸ್ಥಾನಮಾನ. ಮುಂದಿನ ಎಲ್ಲ ಸಂದರ್ಭಗಳಲ್ಲಿ ರಾಮನು ನಿಷಾದರಾಜನನ್ನು ತನ್ನ ಸರಿಸಮಾನವಾಗಿ ನಡೆಸಿಕೊಳ್ಳುವುದನ್ನು ನಾವು ನೋಡುತ್ತೇವೆ. ರಾಮನ ಇಂಥ ಶ್ರೇಷ್ಠ, ಉದಾತ್ತ ಗುಣಗಳಿಂದಾಗಿಯೇ ಅವನು ಪೂಜ್ಯನಾಗುತ್ತಾನೆ.
ಸೀತಾಪಹರಣವಾದಾಗ ರಾಮನ ವನವಾಸವು ಹೆಚ್ಚೂಕಡಿಮೆ ಮುಗಿಯುತ್ತ ಬಂದಿರುತ್ತದಲ್ಲವೇ? ಸೀತೆಯನ್ನು ಹುಡುಕುತ್ತ ಹೊರಟ ಆ ದುಃಖ ಮತ್ತು ದುಗುಡದ ಸಮಯದಲ್ಲಿ ಅವರಿಗೆ ಸಿಗುವವನು ರೆಕ್ಕೆ ಕತ್ತರಿಸಿದರೂ ಜೀವವನ್ನು ಹಿಡಿದುಕೊಂಡು ಶ್ರೀ ರಾಮನ‌ ಆಗಮನದ ನಿರೀಕ್ಷೆಯಲ್ಲಿರುವ ಜಟಾಯು. ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಅಪಹರಿಸಿಕೊಂಡು ಓಡುತ್ತಿರುವ ರಾವಣನನ್ನು ತಡೆದು ತನ್ನ ಮುದಿ ರೆಕ್ಕೆಗಳಿಂದ ರಾವಣನಿಗೆ ಗಾಯ ಮಾಡಿ ಸೀತೆಯನ್ನು ಉಳಿಸಲು ಪ್ರಯತ್ನಿಸುತ್ತಾನೆ ಜಟಾಯು. ಆದರೆ ರಾವಣನು ಜಟಾಯುವಿನ ರೆಕ್ಕೆಯನ್ನು ತನ್ನ ಖಡ್ಗದಿಂದ ಕತ್ತರಿಸಿ ಹಾಕುತ್ತಾನೆ. ಇದರಿಂದ ಶಕ್ತಿ ಕಳೆದುಕೊಳ್ಳುವ ಜಟಾಯು ಧರಾಶಾಹಿಯಾಗುತ್ತಾನೆ. ಆದರೆ ರಾಮನು ಬರುವ ತನಕ ತನ್ನ ಪ್ರಾಣವನ್ನು ಹಿಡಿದಿಟ್ಟುಕೊಂಡಿರುತ್ತಾನೆ. ರಾಮನಿಗೆ ರಾವಣನ ಸುದ್ದಿಯನ್ನೆಲ್ಲ ಅರುಹಿ, ಆತನು ಹೋದ ಮಾರ್ಗದ ಬಗ್ಗೆ ಮಾಹಿತಿ ಕೊಟ್ಟನಂತರವೇ ಜಟಾಯು ರಾಮನ‌ ಮಡಿಲಿನಲ್ಲಿ ವೀರ ಮರಣವನ್ನಪ್ಪುತ್ತಾನೆ. ಶ್ರೀರಾಮನೇ ಜಟಾಯುವಿಗೆ ಮೋಕ್ಷವನ್ನು ನೀಡಿದ ಎಂತಲೂ ಜನ ನಂಬುತ್ತಾರೆ. ಬೃಹತ್ ಹದ್ದು ಜಟಾಯುವಿನ ಜೊತೆಗಿನ ರಾಮನ ಸಂಬಂಧವೂ ಶ್ರೇಷ್ಠತೆಯ ಪರಾಕಾಷ್ಠೆಯೇ ಆಗಿದೆ. ಈ ಜಟಾಯು ತನ್ನ ರೆಕ್ಕೆಯನ್ನು ಮುರಿದುಕೊಂಡು ಬಿದ್ದ ಬೆಟ್ಟವು ಕೇರಳದಲ್ಲಿದೆ ಎಂದು ಜನರ ನಂಬಿಕೆ. (ಕೆಲವರ ನಂಬಿಕೆಯ ಪ್ರಕಾರ ಆಂಧ್ರಪ್ರದೇಶದ ಲೇಪಾಕ್ಷಿಯು ಜಟಾಯುವು ರೆಕ್ಕೆ ಮುರಿದುಕೊಂಡು ಬಿದ್ದಿರುವ ಸ್ಥಳವಾಗಿದೆ) ಕೊಲ್ಲಮ್ ನಲ್ಲಿರುವ ಈ ಬೆಟ್ಟವು ಚಡಾಯಮಂಗಲಮ್ (ಜಟಾಯುಮಂಗಲಮ್) ಎನ್ನುವ ಹೆಸರಿನಿಂದ ಪ್ರಸಿದ್ಧವಿದೆ. ಕೇರಳದ ಸಿನಿಮಾ ನಿರ್ದೇಶಕ/ನಿರ್ಮಾಪಕ ಮತ್ತು ಶಿಲ್ಪಿ ಶ್ರೀ. ರಾಜೀವ್ ಅಂಚಲ್ ಈ ಬೆಟ್ಟದ ಮೇಲೆ ‌ರೆಕ್ಕೆ ಮುರಿದುಕೊಂಡು ಬಿದ್ದಿರುವ ಜಟಾಯುವಿನ ಬಹು ದೊಡ್ಡ ಸಿಮೆಂಟಿನ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. “ಜಟಾಯು ಅರ್ಥ್ ಸೆಂಟರ್” ಎನ್ನುವ ಹೆಸರಿನಿಂದ ೨೦೧೮ರಲ್ಲಿ ಉದ್ಘಾಟನೆಗೊಂಡ ಈ ಶಿಲ್ಪ ಮತ್ತು ಅದರೊಳಗಿರುವ ಮ್ಯೂಸಿಯಂ ಇದೀಗ ರಾಮಾಯಣದ ಈ ಮಹಾನ್ ರಾಮಭಕ್ತ ವೀರಾಗ್ರಣಿಯ ನೆನಪನ್ನು ಸದಾ ಜನರ ಮನಸ್ಸಿನಲ್ಲಿ ಹಸಿರಾಗಿರಿಸುತ್ತದೆ.
ಸೀತೆಯನ್ನು ಹುಡುಕುತ್ತ ಹುಡುಕುತ್ತ ದಕ್ಷಿಣದೆಡೆಗೆ ಸಾಗುತ್ತಿದ್ದ ರಾಮ-ಲಕ್ಷ್ಮಣರಿಗೆ ಸಿಕ್ಕಿದ್ದು ಇನ್ನೊಬ್ಬ ಮಹಾವೀರ ಹನುಮಂತ. ವಾಲಿಯಿಂದ ದೇಶಭ್ರಷ್ಟನಾದ ಸುಗ್ರೀವನು ಋಷ್ಯಮೂಕ ಪರ್ವತದಲ್ಲಿರುವಾಗ ರಾಮ-ಲಕ್ಷ್ಮಣರನ್ನು ನೋಡಿ ಹೆದರಿಕೊಂಡು ವಿಚಾರಿಸಿ ಕೊಂಡು ಬರಲು ಹನುಮಂತನನ್ನು ಕಳಿಸುತ್ತಾನೆ. ಹಾಗೆ ರಾಮನನ್ನು ಮೊದಲ ಸಲ ಭೆಟ್ಟಿಯಾದ ಹನುಮಂತನು ಅವನ ಪರಮ ಭಕ್ತನೇ ಆಗಿಬಿಡುತ್ತಾನೆ. ರಾಮನಿಗಾಗಿ ಎಂಥ ಕಷ್ಟದ ಕೆಲಸವನ್ನೂ ಮಾಡಲು ಸಿದ್ಧ ಈ ಮಾರುತಿ. ಈತ ಹುಟ್ಟಿದ್ದು ಎಂದು ಹೇಳುವ ಅಂಜನಾದ್ರಿ ಬೆಟ್ಟವೂ ಹೊಸಪೇಟೆಯಲ್ಲಿದೆ. ಕಿಷ್ಕಿಂಧಾ ಪಟ್ಟಣವೂ ಅಲ್ಲಿಯೇ ಹತ್ತಿರದಲ್ಲಿದೆ. ರಾಮನು ನೀಡಿದ ಉಂಗುರವನ್ನು ಸೀತೆಗೆ ತಲುಪಿಸಿ, ಅವಳ‌ ಕ್ಷೇಮ ಸಮಾಚಾರವನ್ನು ರಾಮನಿಗಾಗಿ ತರಲು ಸಾಗರವನ್ನೇ ಹಾರಿ ಲಂಕೆಗೆ ಲಗ್ಗೆ ಇಟ್ಟ ವೀರನವನು. ಯುದ್ಧದಲ್ಲಿ ರಾವಣನ ಪುತ್ರ ಇಂದ್ರಜಿತುವು ಲಕ್ಷ್ಮಣನಿಗೆ ಬಾಣ ಹೊಡೆದು ಅವನು ಮೂರ್ಛೆ ಹೋದಾಗ ಇದೇ ಹನುಮಂತನು ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಬಂದವನು. ಶ್ರೀರಾಮ ಪಟ್ಟಾಭಿಷೇಕದಲ್ಲಿ ಮನೆಯ ಮಗನಂತೆ ಸಂತಸದಿಂದ ಪಾಲ್ಗೊಂಡವನು. ಅವನ ರಾಮಭಕ್ತಿಯು ಅಲೌಕಿಕವಾದದ್ದು. ರಾಮ ಮತ್ತು ಹನುಮಂತನ ಸ್ನೇಹ, ಪ್ರೇಮ ಮತ್ತು ಭಕ್ತಿ ಮತ್ತು ದೇವರ ಸಂಬಂಧ ಅಮೋಘವಾದದ್ದು. ರಾಮಾಯಣ ಮಹಾಭಾರತ ಮಹಾಕಾವ್ಯಗಳಲ್ಲಿ ವಿಶೇಷ ರುಚಿ ಮತ್ತು ಜ್ಞಾನ ಹೊಂದಿರುವ ಹಿರಿಯ ವಾಗ್ಮಿಗಳು ಒಂದು ಸಭೆಯಲ್ಲಿ ಹೇಳುತ್ತಿದ್ದರು, “ನಾವು ಭಕ್ತಿಯಿಂದ ನಮ್ಮ ಕೆಲಸವನ್ನು ಮಾಡುತ್ತ ಸಾಗಬೇಕು. ಹೆಸರು, ಕೀರ್ತಿ ತಂತಾನೇ ಹಿಂಬಾಲಿಸುತ್ತದೆ. ಭಾರತದಲ್ಲಿ ರಾಮನ ದೇವಸ್ಥಾನಗಳಿಗಿಂತಲೂ ಅವನ ಭಕ್ತ ಹನುಮಾನನ ಗುಡಿಗಳು ಹೆಚ್ಚಿವೆ. ಹನುಮಾನ್ ಚಾಲೀಸಾ ಪಠಣ ಎಲ್ಲೆಲ್ಲೂ ನಡೆಯುತ್ತದೆ. ಯಾಕೇ? ಭಕ್ತನ ಭಕ್ತಿಯು ದೇವರಿಗಿಂತ ಮಿಗಿಲಾದದ್ದು”. ಎಷ್ಟು ನಿಜವಾದದ್ದು ಈ ಮಾತು! ಭಕ್ತಿಯ ಮಹಿಮೆಯು ಅಪಾರವಾದದ್ದು. ಅದು ಸ್ವತಃ ಭಕ್ತವತ್ಸಲನನ್ನೇ ಸೋಲಿಸುವ ಶಕ್ತಿಯುಳ್ಳದ್ದು. ಅಂಥ ಶಕ್ತಿಯನ್ನು ತನ್ನ ಭಕ್ತಿ, ಆರಾಧನೆಯಿಂದಾಗಿ ಪಡೆದವನು ನಮ್ಮ ಕನ್ನಡ ಕುಲಪುಂಗವ ಹನುಮ. ಅವನನ್ನು ನೆನೆದರೆ ಸಾಕು ನಮಲ್ಲಿ ಕೂಡ ಒಂದು ಪುಳಕ ಉಂಟಾಗುತ್ತದೆ. ಅವನ ಭಕ್ತಿಯು ನಮ್ಮಲ್ಲಿ ಕೂಡ ಒಂದು ಧೈರ್ಯವನ್ನು ತುಂಬುತ್ತದೆ.
ಇದೇ ಋಷ್ಯಮೂಕ ಪರ್ವತದ ಹತ್ತಿರವೇ ಪಂಪಾ ನದಿಯ ತೀರದಲ್ಲಿ ರಾಮನ ಬರುವಿಗಾಗಿಯೇ ಕಾದು ಕುಳಿತಿರುವ ಭಕ್ತೆ ಶಬರಿ. ದಿನಾಲೂ ರಾಮ ಬರುವನೆಂದು ಬಗೆಬಗೆಯ ಹೂಗಳಿಂದ ತನ್ನ ಗುಡಿಸಲಿನ ದಾರಿಯನ್ನು ಅಲಂಕರಿಸಿ ಇಡುವಳು. ದಿನಾಲೂ ಬೋರೆ ಹಣ್ಣುಗಳನ್ನು ಆರಿಸಿ ತಂದಿಡುವಳು. ಕಾಯುತ್ತ ಕಾಯುತ್ತ ಕೃಶಳಾಗಿ ಹೋದರೂ ದೇಹದಲ್ಲಿ ಜೀವವನ್ನು ಹಾಗೆಯೇ ಹಿಡಿದಿಟ್ಟುಕೊಂಡು ಮಂಜಾದ ಸಂಜೆಗಣ್ಣಿನಲ್ಲಿ ದೃಷ್ಟಿ ಹಾಯಿಸಿ ರಾಮನಿಗಾಗಿ ಕಾಯುವಳು. ಅಂತೂ ಕಡೆಗೊಮ್ಮೆ ಅವಳ ರಾಮನು ಆ ದಾರಿಯಲ್ಲಿ ಬಂದೇ ಬಂದ. ಅವಳು ಕಚ್ಚಿ ರುಚಿ ನೋಡಿ ಕೊಟ್ಟ ಹಣ್ಣುಗಳನ್ನು ಅಷ್ಟೇ ಪ್ರೀತಿಯಿಂದ ತಿಂದು ತೃಪ್ತನಾದ. ಅದಕ್ಕಾಗಿಯೇ ಜೀವ ಹಿಡಿದುಕೊಂಡಿದ್ದ ಶಬರಿಯ ಉದ್ದೇಶವು ಫಲಿಸಿದ ಮೇಲೆ ಆತ್ಮವು ತೃಪ್ತವಾಯ್ತು. ಇಹದ ಬಂಧಗಳನ್ನು ತೊರೆದು ಪರದಲ್ಲಿ ಲೀನವಾಯ್ತು. ಇವತ್ತಿಗೂ ಕಾಯುವಿಕೆಗೆ ರೂಪಕವಾಗಿ ಜನಮನದಲ್ಲಿ ಉಳಿದುಹೋದಳು ಭಕ್ತೆ ಶಬರಿ.
ಶ್ರೇಷ್ಠ ಆದರ್ಶಗಳ ಅಪರೂಪದ ರಾಮಾಯಣದಲ್ಲಿ ಭಕ್ತಿರಸವು ತುಂಬಿ ತುಳುಕುತ್ತದೆ. ನೋವು ತುಂಬಿದ ಈ ಜಗದಲ್ಲಿ ಒಂದಿಷ್ಟು ಸಮಾಧಾನ ನೀಡುವ ಸುಧೆಯಾಗುತ್ತದೆ.

(ಮುಂದುವರಿಯುತ್ತದೆ)

ಅಂದಿನ ರಾಮಾಯಣ ಇಂದು ನೋಡಿದಾಗ…. -ಭಾಗ 1

ಭಾಗ 2 –

ಇಂದಿಗೂ ರಾಮಾಯಣ ಪ್ರಸ್ತುತವೇ?

ಭಾಗ 3 –

ಸೋದರ ಪ್ರೇಮದ ಉತ್ಕೃಷ್ಟ ಮಾದರಿ

ಭಾಗ 4-

ರಾವಣನ ಪರಿವಾರ – ರಾಮಾಯಣ ಭಾಗ 4

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button