Kannada NewsKarnataka NewsLatest
ಸರಕಾರದ ರೀತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೆಲಸ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸುವಲ್ಲಿ ಮತ್ತು ಮಹಿಳೆಯರನ್ನು ಸ್ವಾವಲಂಬಿಯಾಗಿಸುವಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಉಚಗಾಂವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಾಗೂ ಒಕ್ಕೂಟಗಳ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ. ಹೇಮಾವತಿ ವೀ ಹೆಗ್ಗಡೆಯವರ ವ್ಯಕ್ತಿತ್ವ ಅತ್ಯಂತ ಎತ್ತರದ್ದು. ಅವರ ದೂರದೃಷ್ಟಿ ಮತ್ತು ವಿಶಾಲ ಮನೋಭಾವದಿಂದಾಗಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಸರಕಾರದ ರೀತಿಯಲ್ಲಿ ಧರ್ಮಸ್ಥಳ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಹೆಬ್ಬಾಳಕರ್ ಹೇಳಿದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ವ್ಯವಸ್ಥಾಪನ ಸಮಿತಿ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕುದ್ರೆಮನಿ, ಕೊನೆವಾಡಿ, ಅತಿವಾಡ, ಬಾಚಿ ಹಾಗೂ ಪ್ರಗತಿಬಂಧು ಜ್ಞಾನವಿಕಾಸ ಸ್ವ-ಸಹಾಯ ಸಂಘಗಳ ಒಕ್ಕೂಟ ಉಚಗಾಂವ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಕ್ತಿಮಠದ ಧರ್ಮಶ್ರೀ ತಪೋರತ್ನ ಷ. ಬ್ರ. ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅನಿತಾ ಚೌಗುಲೆ, ಪ್ರದೀಪ ಶೆಟ್ಟಿ, ಯುವರಾಜ ಕದಂ, ಜಾವೇದ ಜಮಾದಾರ, ಮಥುರಾ ತೆರಸೆ, ಚಾಂಗದೇವ ಬೆಳಗಾಂವ್ಕರ್, ಎನ್ ಓ ಚೌಗುಲೆ, ವಿಧ್ಯಾ ಸರ್ನೋಬತ್, ಪರುಶರಾಮ ಪಾಂಡೆಕರ್, ನಾಗರಾಜ ಹಡ್ಲಿ ಹಾಗೂ ಗ್ರಾಮಾಭಿವೃದ್ಧಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
https://pragati.taskdun.com/politics/belagavirural-mla-laxmihebbalkar-inform-bharatjodo-walk-organise-congress-party/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ