*ಮಧ್ಯಾಹ್ನ ಊಟಕ್ಕೆ ಬಿಟ್ಟಾಗಲೇ ಶಾಲೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ ವ್ಯಕ್ತಿ: ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಎಂದಿನಂತೆ ಶಾಲೆಗೆ ಹೋಗಿದ್ದ ಮಕ್ಕಳಿಬ್ಬರನ್ನು ಮಧ್ಯಾಹ್ನ ಊಟಕ್ಕೆ ಬಿಟ್ಟಿದ್ದ ವೇಳೆ ವ್ಯಕ್ತಿಯೋರ್ವ ಶಾಲೆ ಬಳಿ ಬಂದು ಕಿಡ್ನ್ಯಾಪ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಧಾರವಾಡದ ಕಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದ ಮಕ್ಕಳಿಬ್ಬರು ಮಧ್ಯಾಹ್ನ ಶಾಲೆಯಲ್ಲಿ ಎಂದಿನಂತೆ ಬಿಸಿಯೂಟವನ್ನು ಮಾಡಿದ್ದರು. ಶಾಲೆಯ ಅಂಗಳದಲ್ಲಿ ಎಲ್ಲಾ ಮಕ್ಕಳೊಂದಿಗೆ ಆಟವಾದುತ್ತಿದ್ದ ಮಕ್ಕಳನ್ನು ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಮಾತನಾಡಿಸಿ ಇಬ್ಬರು ಮಕ್ಕಳನ್ನು ಬೈಕ್ ನಲ್ಲಿ ಕರೆದೊಯ್ದಿದ್ದಾನೆ. ಹೀಗೆ ಕರೆದುಕೊಂಡು ಹೋದವನೇ ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾನೆ.
ಮಧ್ಯಾಹ್ನದ ತರಗತಿ ಆರಂಭವಾದಾಗ 3ನೇ ತರಗತಿಯ ಇಬ್ಬರು ಮಕ್ಕಳು ಕ್ಲಾಸಿಗೆ ಬಾರದಿರುವುದು ಕಂಡು ಶಿಕ್ಷಕರು ವಿಚಾರಿಸಿದ್ದಾರೆ. ಪೋಷರಿಗೆ ಕರೆ ಮಾಡಿ ಕೇಳಿದ್ದಾರೆ. ಪೋಷರು ಮಕ್ಕಳು ಮನೆಗೆ ಬಂದಿಲ್ಲ ಎಂದಿದ್ದಾರೆ. ಆಗಲೇ ಗೊತ್ತಾಗಿದ್ದು, ಮಕ್ಕಳಿಬ್ಬರೂ ಶಾಲೆಯಲ್ಲಿಯೂ ಇಲ್ಲ, ಮನೆಗೂ ಹೋಗಿಲ್ಲ ಎಂದು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಶಾಲೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಬೈಕ್ ನಲ್ಲಿ ಬಂದ ಆಸಾಮಿ ಮಕ್ಕಳಿಬ್ಬರನ್ನು ಕರೆದೊಯ್ದಿರುವುದು ಗೊತ್ತಾಗಿದೆ.
3ನೇ ತರಗತಿಯ ಅನ್ವರ್ (9) ಹಾಗೂ ಲಕ್ಷ್ಮೀ ಕರಿಯಪ್ಪನವರ್ (9) ಎಂಬ ಇಬ್ಬರು ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಧಾರವಾಡ ಉಪನಗರ ಪೊಲೀಸರು ಆರೋಪಿ ಜಾಡು ಹಿಡಿದಿದ್ದಾರೆ. ತಕ್ಷಣ ಅಕ್ಕಪಕ್ಕದ ಜಿಲ್ಲೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಬೈಕ್ ವೊಂದು ರಸ್ತೆ ಬದಿ ಗುಂಡಿಗೆ ಬಿದ್ದು, ಓರ್ವ ವ್ಯಕ್ತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿರುವ ಬಗ್ಗೆ ದಾಂಡೇಲಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕಾಗಮಿಸಿ ಬೈಕ್ ಸವಾರನನ್ನು ಹಾಗೂ ಮಕ್ಕಳನ್ನು ವಿಚಾರಿಸಿದಾಗ ಧಾರವಾಡದಿಂದ ಬಂದಿರುವುದಾಗಿ ಹೇಳಿದ್ದಾರೆ. ಅನುಮಾನಗೊಂಡು ಬೈಕ್ ಸವಾರನನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆರೋಪಿ ಮಕ್ಕಳಿಬ್ಬರನ್ನು ಉಳವಿ ಜಾತ್ರೆಗೆ ಹೋಗುತ್ತಿದ್ದೇನೆ ಬರುತ್ತೀರಾ ಎಂದು ಕೇಳಿದ್ದಾನೆ. ಶಾಲೆ ಬಳಿ ಇದ್ದ ವಿದ್ಯಾರ್ಥಿ ಅನ್ವರ್ ಬರುವುದಾಗಿ ಹೇಳಿ ಬೈಕ್ ಹತ್ತಿದ್ದಾನೆ. ಇದೇ ವೇಳೆ ಅಲ್ಲಿಯೇ ಇದ್ದ ವಿದ್ಯಾರ್ಥಿನಿಯನ್ನೂ ಕೇಳಿದ್ದಾನೆ. ಅದಕ್ಕೆ ಆಕೆಯೂ ಬರುತ್ತೇನೆ ಎಂದಿದ್ದಾಳೆ. ಇಬ್ಬರು ಮಕ್ಕಳನ್ನು ಬೈಕ್ ನಲ್ಲಿ ಕೂರಿಸಿಕೊಂಡ ಆರೋಪಿ ಕ್ಷಣ ಮಾತ್ರದಲ್ಲಿ ದಾಂಡೇಲಿ ಕಡೆ ಹೊರಟಿದ್ದಾನೆ. ಈ ವೇಳೆ ಅಪಘಾತವಾಗಿದ್ದು, ಅಪಘಾತವೊಂದು ಇಬ್ಬರು ಮಕ್ಕಳನ್ನು ಅಪಹರಣಕಾರನಿಂದ ರಕ್ಷಿಸಿದೆ. ಸದ್ಯ ಪೊಲೀಸರು ಇಬ್ಬರು ಮಕ್ಕಳನ್ನು ರಕ್ಷಿಸಿ, ಧಾರವಾಡಕ್ಕೆ ಕರೆದೊಯ್ದಿದ್ದಾರೆ.
ಆರೋಪಿಯನ್ನು ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕೆ ಮಕ್ಕಳಿಬ್ಬರನ್ನು ಕಿಡ್ನ್ಯಾಪ್ ಮಾಡಿದ್ದ ಎಂಬುದು ತನಿಖೆ ಬಳಿಕ ಬಯಲಾಗಬೇಕಿದೆ.




