*ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ತಿರುವು: ಕೇರಳ ಯೂಟ್ಯೂಬರ್ ಗೆ SIT ನೋಟಿಸ್*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ಗೆ ಕೇರಳದ ಯೂಟ್ಯೂಬರ್ ಲಿಂಕ ಇರುವುದೂ ಬೆಳಕಿಗೆ ಬಂದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ ಕೇರಳದ ಯೂಟ್ಯೂಬರ್ ಕೂಡ ಸುಳ್ಳು ಮಾಹಿತಿಗಳನ್ನು ತನ್ನ ಯೂಟ್ಯೂಬ್ ಚಾನಲ್ ಗೆ ಅಪ್ ಲೋಡ್ ಮಾಡಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಯೂಟ್ಯೂಬರ್ ಸಮೀರ್ ಎಂಡಿ, ಅಭಿಷೇಕ್ ಬಳಿಕ ಇದೀಗ ಕೇರಳ ಯೂಟ್ಯೂಬರ್ ಮುನಾಫ್ ಎಂಬಾತನಿಗೂ ಎಸ್ ಐಟಿ ನೋಟಿಸ್ ನೀಡಿದೆ. ಈತ ಧರ್ಮಸ್ಥಳದ ಬಂಗ್ಲಗುಡ್ಡಕ್ಕೆ ತನ್ನ ಕಾರಿನಲ್ಲಿ ತೆರಳಿ, ಅಲ್ಲಿ ಮರವೊಂದರ ಕೆಳಗಿದ್ದ ಬುರುಡೆಯನ್ನು ಎತ್ತಿಕೊಂಡು ಬ್ಯಾಗ್ ಗೆ ತುಂಬಿರುವ ದೃಶ್ಯವನ್ನು ತನ್ನ ಯೂಟ್ಯೂಬ್ ಚಾನಲ್ ಗೆ ಅಪ್ ಲೋಡ್ ಮಾಡಿದ್ದ. ಅಲ್ಲಿ ಬುರುಡೆ ಬಂದಿದ್ದು ಹೇಗೆ ಮೊದಲೇ ಅಲ್ಲಿ ಬುರುಡೆ ತಂದಿಟ್ಟು ಬಳಿಕ ಅಪಪ್ರಚಾರ ನಡೆಸಲು ಸ್ಥಳಕ್ಕೆ ತೆರಳಿ ಅಲ್ಲಿ ಬುರುಡೆ ಸಿಕ್ಕಿದ್ದಾಗಿ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಿದ್ದ. ಇದೀಗ ಎಸ್ ಐಟಿ ಅಧಿಕಾರಿಗಳು ಮುನಾಫ್ ಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಶಿರೂರು ಗುಡ್ಡ ಕುಸಿತದ ವೇಳೆ ಲಾರಿಯೊಂದು ನದಿಯಲ್ಲಿ ಕೊಚ್ಚಿ ಹೋಗಿತ್ತು. ಕೇರಳ ಮೂಲದ ಚಾಲಕ ಅರ್ಜುನ್ ಕೂಡ ಮೃತಪಟ್ಟಿದ್ದರು. ಮೃತ ಅರ್ಜುನ್ ಅವರ ಲಾರಿ ಮಾಲೀಕ ಈ ಮುನಾಫ್. ಈತ ಯೂಟ್ಯೂಬ್ ಚಾನಲ್ ಕೂಡ ನಡೆಸುತ್ತಿರುವುದು ಇದೀಗ ಬಯಲಾಗಿದೆ.