Latest

ಶಾಸಕರ ಪುತ್ರರಾದರೂ ಗ್ರಾಪಂ ನಿಂದಲೇ ರಾಜಕೀಯಕ್ಕೆ ಬಂದಿದ್ದ ಧರ್ಮೇಗೌಡ

ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು – ರೈಲ್ವೆಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ರಾಜಕೀಯದಲ್ಲಿ ದಿಢೀರ್ ಏಳಿಗೆ ಕಂಡವರಲ್ಲ. ತಂದೆ ಶಾಸಕರಾಗಿದ್ದರೂ ನೇರವಾಗಿ ಶಾಸಕ ಸ್ಥಾನಕ್ಕೆ ಹೋಗದೆ ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕೀಯ ಶುರು ಮಾಡಿ ವಿಧಾನ ಪರಿಷತ್ ಉಪ ಸಭಾಪತಿ ಹುದ್ದೆಗೇರಿದವರು.

ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾದ ಎಸ್.ಎಲ್.ಧರ್ಮೇಗೌಡ, ಚಿಕ್ಕಮಗಳೂರು ತಾಲೂಕು ಬಿಳೇಕಲ್ಲಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಮಂಡಲ ಪಂಚಾಯಿತಿ ಪ್ರಧಾನರಾಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ್ದರು.

ನಂತರ ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ, ಉದ್ದೇಬೋರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ, ಹಾಸನ ಹಾಲು ಒಕ್ಕೂಟದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜನತಾ ಬಜಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಎಸ್.ಎಲ್. ಧರ್ಮೇಗೌಡ ಅವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಹಿನ್ನೆಲೆಯವರು. ಅವರ ಕುಟುಂಬ ರಾಜಕೀಯವಾಗಿ ಶಕ್ತಿಶಾಲಿಯಾಗಿತ್ತು. ಆರ್ಥಿಕವಾಗಿಯೂ ಅವರು ಒಳ್ಳೆಯ ಸ್ಥಿತಿಯಲ್ಲಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಮಟ್ಟದಿಂದ ವಿವಿಧ ಸ್ತರಗಳ ರಾಜಕೀಯದಲ್ಲಿ ಅನುಭವಿ ಎನಿಸಿದ್ದರು. ನಿನ್ನೆ ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಸಂತೋಷದಿಂದಲೇ ಅವರು ಪಾಲ್ಗೊಂಡಿದ್ದರು.

ನಿನ್ನೆ ತಡರಾತ್ರಿ ಕಡೂರು ತಾಲೂಕು ಬಳಿ ರೈಲ್ವೆ ಹಳಿಯಲ್ಲಿ ಅವರ ರುಂಡ ಮುಂಡ ಬೇರ್ಪಟ್ಟ ದೇಹ ಪತ್ತೆಯಾಗಿದೆ. ಸಖರಾಯಪಟ್ಟಣದಿಂದ ಸಂಜೆ 6:30ಕ್ಕೆ ಖಾಸಗಿ ಡ್ರೈವರ್ ಜೊತೆ ಕಾರಿನಲ್ಲಿ ಹೊರಟ ಅವರು ಕಡೂರು ತಾಲೂಕು ಗುಣಸಾಗರ ಬಳಿ ಕಾರು ನಿಲ್ಲಿಸಿದ್ದಾರೆ. ತಮ್ಮಎಸ್ಕಾರ್ಟ್ ಸಿಬ್ಬಂದಿಯನ್ನು ಅಲ್ಲಿಯೇ ಬಿಟ್ಟು ಖಾಸಗಿ ಡ್ರೈವರ್ ಜೊತೆ ಅವರು ಹೊರಟಿದ್ದರು. ಒಬ್ಬ ವ್ಯಕ್ತಿಯ ಜೊತೆ ಸ್ವಲ್ಪ ಕೆಲಸ ಇದ್ದು ಹೋಗಿ ಬರುತ್ತೇನೆ ಎಂದು ಹೇಳಿ ಹೋದರೆನ್ನಲಾಗಿದೆ.

ಇತ್ತೀಚೆಗೆ ವಿಧಾನಪರಿಷತ್​ನಲ್ಲಿ ನಡೆದ ಗಲಾಟೆ ಘಟನೆ ಧರ್ಮೇಗೌಡ ಅವರ ಮನಸಿಗೆ ಘಾಸಿ ತಂದಿತ್ತು. ಸಭಾಪತಿ ಪೀಠದ ಮೇಲೆ ಕುಳಿತಿದ್ದ ಅವರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಇದು ಅವರಿಗೆ ಬಹಳ ನೋವು ತಂದಿತ್ತು. ತಮ್ಮ ಆಪ್ತವಲಯದಲ್ಲಿ ಸಾಕಷ್ಟು ನೋವು ತೋಡಿಕೊಂಡಿದ್ದರು. ಡೆತ್​ನೋಟ್​ನಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ, ಘಟನೆಯಿಂದ ಬಹಳ ನೋವಾಗಿತ್ತು ಎಂದಿದ್ಧಾರೆ. ಡೆತ್ ನೋಟ್​ನಲ್ಲಿ ತಮ್ಮ ಪತ್ನಿ, ಮಗ ಮತ್ತು ಮಗಳ ಕ್ಷಮೆ ಕೂಡ ಅವರು ಯಾಚಿಸಿದ್ಧಾರೆ.

ರೈಲಿಗೆ ತಲೆಕೊಟ್ಟು ವಿಧಾನಪರಿಷತ್ ಉಪಸಭಾಪತಿ ಆತ್ಮಹತ್ಯೆಗೆ ಶರಣು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button