
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟಿಕೆಟ್ ಘೋಷಣೆಯ ನಂತರ ಬೆಳಗಾವಿ ಬಿಜೆಪಿಯಲ್ಲಿ ಬುಗಿಲೆದ್ದಿರುವ ಬಂಡಾಯ ಶಮನ ಮಾಡಲು ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಶನಿವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ಬೆಳಗಾವಿಯ 7 ಕ್ಷೇತ್ರಗಳಲ್ಲಿ ತೀವ್ರ ಬಂಡಾಯ ಕಾಣಿಸಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗಾಗಲೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿಯಾಗಿದೆ. ಮಾಜಿ ಸಚಿವ ಶಶಿಕಾಂತ ನಾಯಕ ಕೂಡ ಕಾಂಗ್ರೆಸ್ ಸೇರಿದ್ದಾರೆ. ಶಾಸಕ ಅನಿಲ ಬೆನಕೆ ಕಾಂಗ್ರೆಸ್ ಸೇರಲು ಯತ್ನಿಸಿದ್ದು, ಸಫಲವಾಗಲಿಲ್ಲ. ಪಕ್ಷೇತರರಾಗಿ ಕಣಕ್ಕಿಳಿಯುವ ಸ್ಧ್ಯತೆ ಇದೆ.
ರಾಮದುರ್ಗದ ಶಾಸಕ ಮಹಾದೇವಪ್ಪ ಯಾದವಾಡ ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಅಲ್ಲಿ ಇನ್ನೂ 6 ಜನರು ಅಸಮಾಧಾನಗೊಂಡಿದ್ದಾರೆ. ಖಾನಾಪುರದಲ್ಲಿ ಅರವಿಂದ ಪಾಟೀಲ ಮತ್ತು ಡಾ.ಸೋನಾಲಿ ಸರ್ನೋಬತ್ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಪದಾಧಿಕಾರಿಗಳು ಸಿಡಿದೆದ್ದಿದ್ದಾರೆ.
ಬೆನಕೆ ಬೆಂಬಲಿಗರು ಶುಕ್ರವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ ಮತ್ತು ಸಂಸದ ಈರಣ್ಣ ಕಡಾಡಿ ಅವರನ್ನು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಧರ್ಮೇಂದ್ರ ಪ್ರಧಾನ ಶನಿವಾರ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅವರು ಯಾವ ರೀತಿಯಲ್ಲಿ ಅಸಮಾಧಾನಿತರಲ್ಲಿ ಸಮಾಧಾನಪಡಿಸಲಿದ್ದಾರೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ