ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರವಾಹದಿಂದ ಜನರು ಸಂಕಷ್ಟಕ್ಕೊಳಗಾಗಿರುವ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಹಬ್ಬ ಮಾಡಲು ಮನಸ್ಸು ಬರಲಿಲ್ಲ. ಹಾಗಾಗಿ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸ ಮಾಡಲು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
3 ದಿನಗಳ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸಕ್ಕೆಂದು ಸಂಜೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯನವರಂತೆ ನಾನು ಸರಕಾರದ ಮೇಲೆ ಚಾಟಿ ಬೀಸಲು ಬಯಸುವುದಿಲ್ಲ. ಸರಕಾರ ಸಂತ್ರಸ್ತರ ಸಲುವಾಗ ಹಗಲು ರಾತ್ರಿ ಕೆಲಸ ಮಾಡಬೇಕೆನ್ನುವುದು ನನ್ನ ವಿನಂತಿ ಎಂದು ಅವರು ಹೇಳಿದರು.
ಈ ಬಾರಿಯ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅದರಲ್ಲೂ ಗೋಕಾಕ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದೇವೆ. ಜನರು ಅಲ್ಲಿನ ಸಾಹುಕಾರರ ದಾಸ್ಯದಿಂದ ಹೊರಬರಬೇಕು. ಇದೇ ಮೊದಲ ಬಾರಿಗೆ ಅಂತಹ ಅವಕಾಶ ಸಿಕ್ಕಿದೆ. ಅವರ ರಕ್ಷಣೆಗೆ ನಾನಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಅವರು (ಜಾರಕಿಹೊಳಿ ಸಹೋದರರು) ಎಂತಹ ಸಾಹುಕಾರರು ನನಗೆ ಅರ್ಥವಾಗುತ್ತಿಲ್ಲ. ಬಡ ರೈತರ ಕಬ್ಬಿನ ಬಿಲ್ ಕೊಡಲು ಆಗುತ್ತಿಲ್ಲ. ಜನರಿಂದ ಸಾಹುಕಾರ ಎಂದು ಹೇಳಿಸಿಕೊಳ್ಳಲು ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಪವರ್ ತೋರಿಸಿದ ಮಾಜಿ ಪವರ್ ಮಿನಿಸ್ಟರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ