Latest

ತುಳಸಿ ವಿವಾಹ; ಆಚರಣೆ, ವಿಧಾನ, ಹಿನ್ನೆಲೆ

ಪ್ರಗತಿವಾಹಿನಿ ವಿಶೇಷ: ನವೆಂಬರ್ 2ರಿಂದ 8ರವರೆಗೆ ತುಳಸಿ ವಿವಾಹ ಆಚರಿಸಲಾಗುತ್ತದೆ. ಈ ಆಚರಣೆಯ ಹಿನ್ನೆಲೆ, ವಿಧಾನ, ವಿಶೇಷಗಳ ವಿವರ ಇಲ್ಲಿದೆ.

ತಿಥಿ :
ಈ ವಿಧಿಯನ್ನು ಕಾರ್ತಿಕ ಶುಕ್ಲ ದ್ವಾದಶಿಯಿಂದ ಹುಣ್ಣಿಮೆಯ ವರೆಗಿನ ಯಾವುದಾದರೊಂದು ದಿನ ಮಾಡುತ್ತಾರೆ.

ಪೂಜೆ :
ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ. ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.

Home add -Advt

ವೈಶಿಷ್ಟ್ಯ :
ತುಳಸಿ ವಿವಾಹದ ಬಳಿಕ ಚಾತುರ್ಮಾಸದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತಗೊಳಿಸುತ್ತಾರೆ. ಚಾತುರ್ಮಾಸದಲ್ಲಿ ಯಾವ ಪದಾರ್ಥಗಳನ್ನು ವರ್ಜ್ಯ ಮಾಡಿರುತ್ತಾರೆಯೋ, ಆ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ನಂತರ ತಾವೂ ಸೇವಿಸುತ್ತಾರೆ.

ದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ.

ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು.

ಕಾರ್ತಿಕ ಶುಕ್ಲ ಪಕ್ಷ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು.

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್‌।
ಸಮೂಢಮಸ್ಯ ಪಾಗೇಂಸುರೇ।।

ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ.

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ।
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು।।

ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.

ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.

ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಲಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಲಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಲಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಲಸಿ ವಿವಾಹವನ್ನು ಮಾಡುವರು.

(ಆಧಾರ ಗ್ರಂಥ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)

ಸಂಗ್ರಹ:
ಶ್ರೀ. ವಿನೋದ ಕಾಮತ್, 
ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)

Related Articles

Back to top button