ಪ್ರಗತಿವಾಹಿನಿ ಸುದ್ದಿ, ಮುಂಬಯಿ: ದೇಶ ಡಿಜಿಟಲೀಕರಣದಲ್ಲಿ ದಾಪುಗಾಲುಗಳನ್ನು ಇರಿಸುತ್ತ ಸಾಗಿದೆ. ಇದು ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು ಡಿಜಿಟಲೀಕರಣದ ಸಾರ್ವತ್ರೀಕರಣವಾಗುತ್ತಿರುವುದಂತೂ ನಿಜ. ಆದರೆ ಇದರಲ್ಲಿ ಭಿಕ್ಷಾಟನೆಯೂ ಇಷ್ಟೊಂದು ಅಡ್ವಾನ್ಸ್ಡ್ ಸ್ವರೂಪ ಪಡೆಯುವುದನ್ನು ಯಾರೂ ಊಹಿಸಿರಲಿಲ್ಲ. ಹಾಗೆ ಡಿಜಿಟಲ್ ಭಿಕ್ಷಾಟನೆ ಮಾಡುತ್ತಿರುವ ಯುವ ಭಿಕ್ಷುಕ ಭಾರೀ ಪ್ರಚಾರಕ್ಕೆ ಒಳಗಾಗಿದ್ದಾನೆ.
ಕೈಯ್ಯಲ್ಲಿ ಕ್ಯೂಆರ್ ಕೋಡ್ ಹಿಡಿದುಕೊಂಡೇ ರೈಲುಗಳಲ್ಲಿ ಹಾಡು ಹೇಳುತ್ತ ದಾನಿ ಮಹಾಶಯರನ್ನು ಗಾಳ ಹಾಕುವ ಈ ಚಾಲಾಕಿ ಯುವಕನ ಕಂಡವರು ಒಮ್ಮೆ ಇದು ತಮಾಷೆಯೋ, ನಿಜವೋ ಎಂಬ ದ್ವಂದ್ವಕ್ಕೆ ಸಿಲುಕುತ್ತಿರುವುದು ಸಹಜ. ಚಿಕ್ಕದೊಂದು ಚಾಕಲೆಟ್ ಖರೀದಿಸಿದರೂ ಜೇಬಿನಿಂದ ಬ್ರಹ್ಮಾಸ್ತ್ರದಂತೆ ಮೊಬೈಲ್ ಫೋನ್ ತೆಗೆದು ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುವ ಈ ಯುಗದಲ್ಲಿ ನಗದು, ಅದರಲ್ಲೂ ಚಿಲ್ಲರೆ ಇಟ್ಟುಕೊಂಡು ತಿರುಗುವವರು ತೀರ ವಿರಳ. ಅದಕ್ಕಾಗಿ ಈ ಯುವಕ ತನ್ನ ಭಿಕ್ಷಾಟನೆ ವೃತ್ತಿಯನ್ನೇ ಅಪ್ ಗ್ರೇಡ್ ಮಾಡಿಬಿಟ್ಟಿದ್ದಾನೆ. ಈತನ ವಿಡಿಯೊ ಈಗ ವೈರಲ್ ಆಗಿದೆ.
ಸಾಮಾನ್ಯ ಭಿಕ್ಷುಕರು ಬಂದಾಗ ಜೇಬೆಲ್ಲ ಜಾಲಾಡಿ ಮಾಯಾಜಾದೂವಿನಂತೆ ಯಾವುದೋ ಮೂಲೆಯಿಂದ ಒಂದೋ, ಎರಡೋ ರೂಪಾಯಿ ನಾಣ್ಯ ತೆಗೆದು ಕೈಗೆ ಇಟ್ಟು ಸಾಗಹಾಕುವವರೇ ಹೆಚ್ಚು. ಆದರೆ ಈತನ ಕ್ಯಾಶ್ ಲೆಸ್ ಭಿಕ್ಷಾಟನೆಗೆ ಅನೇಕ ಜನ ಕನಿಷ್ಠ 5, 10 ರೂ. ಆನ್ ಲೈನ್ ನಲ್ಲೇ ಬಿಡುತ್ತಿದ್ದಾರಂತೆ.
ಭಿಕ್ಷೆ ಬೇಡುವುದು ಕಾನೂನು ಬಾಹಿರ ಹೌದು. ಆದರೆ ಡಿಜಿಟಲ್ ಭಿಕ್ಷಾಟನೆ ಆ ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎಂಬ ಬಗ್ಗೆ ಇನ್ನು ಮುಂದೆ ಕಾನೂನು ಪಂಡಿತರಷ್ಟೇ ತಲೆಕೆಡಿಸಿಕೊಳ್ಳಬೇಕಿದೆ. ಏನೇ ಆಗಲಿ, ಇದು ಪಕ್ಕಾ ಡಿಜಿಟಲ್ ಯುಗ ಎಂಬುದನ್ನು ಸಾಕ್ಷೀಕರಿಸಲು ಭಿಕ್ಷಾಟನೆಯೂ ಹಿಂದೆ ಬೀಳದಿರುವುದಕ್ಕೆ ಹಲವರು ಹುಬ್ಬೇರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ