*ವಿಜಯೇಂದ್ರಗೆ ಬಿಜೆಪಿಯ ಲೀಡರ್ ಶಿಪ್ ನೀಡಿದ್ದೇ ಹಾಸ್ಯಾಸ್ಪದ: ಸಚಿವ ಗುಂಡೂರಾವ್ ವಾಗ್ದಾಳಿ*
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಷಡ್ಯಂತ್ರ; ಸಮರ್ಥವಾಗಿ ಎದುರಿಸುತ್ತೇವೆ ಎಂದ ಸಚಿವ ದಿನೇಶ್ ಗುಂಡೂರಾವ್
ಪ್ರಗತಿವಾಹಿನಿ ಸುದ್ದಿ: ಬಿಜೆಪಿ ನಾಯಕರು ದೇಶದಲ್ಲಿ ರಾಜ್ಯಪಾಲರುಗಳನ್ನು ದುರುಪಯೋಗ ಪಡೆಸಿಕೊಂಡು ವಿರೋಧ ಪಕ್ಷಗಳನ್ನು ಮುಗಿಸಬೇಕು ಎನ್ನುವ ಹೇಡಿತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ನೂರು ಪುಟಗಳ ದೂರು ನೀಡಿದ್ದಾರೆ. ರಾಜ್ಯಪಾಲರು ಅದನ್ನು ಪೂರ್ಣ ಓದಿ ನೋಡಲು ಸಮಯಬೇಕು. ಆದರೆ ರಾಜ್ಯಪಾಲರು ಕೇವಲ ಎರಡು ಗಂಟೆಯಲ್ಲಿ ಓದಿ ಸಿದ್ದರಾಮಯ್ಯನವರಿಗೆ ನೋಟಿಸ್ ಕೊಟ್ಟಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಕಿಡಿಕಾರಿದರು.
ಬಿಜೆಪಿಗೆ ಕಾನೂನು ಎನ್ನುವುದೇ ಇಲ್ಲ. ಶೇ.95ರಷ್ಟು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಂಡಿದ್ದು ಬಿಜೆಪಿ. ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿದರು. ಈಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಂಧಿಸಲು ರಾಜಭವನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹರಿಹಾಯ್ದರು.
ವಿಜಯೇಂದ್ರ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಯಾವ ರೀತಿ ದುರುಪಯೋಗ ಪಡೆಸಿಕೊಂಡಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದಯಾತ್ರೆ ಮಾಡುವ ಉದ್ದೇಶವೇ ಸರಿ ಇಲ್ಲ. ಮುಡಾ 50-50 ಸ್ಕೀಮ್ ತೆಗೆದುಕೊಂಡು ಬಂದವರೇ ಬಿಜೆಪಿಯವರು. ಅದನ್ನು ರದ್ದು ಮಾಡಿದ್ದು ಕಾಂಗ್ರೆಸ್ ಸರಕಾರ. ಸಿದ್ದರಾಮಯ್ಯ ಕಳಂಕ ರಹಿತ ರಾಜಕಾರಣಿ ಅವರ ವಿರುದ್ಧ ಕಪ್ಪು ಚುಕ್ಕೆ ಮಾಡಲು ಬಿಜೆಪಿ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಮುಡಾ ನಿವೇಶನಗಳು ಜೆಡಿಎಸ್ ಶಾಸಕರಿಗೂ ಹಂಚಿಕೆಯಾಗಿದೆ. ಅದಕ್ಕೆ ಹೋರಾಟದಿಂದ ಹಿಂದೇಟು ಹಾಕಿದ್ದ ಜೆಡಿಎಸ್, ಬಿಜೆಪಿ ಹೈಕಮಾಂಡ್ ಸೂಚನೆ ಮೆರೆಗೆ ಹೋರಾಟ ಮಾಡುತ್ತಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರನ್ನು ಸಿಲುಕಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರಕಾರಿ ದಾಖಲೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಂತ್ರಿಗಳ ಫೈಲ್ ಕೂಡ ವಿಜಯೇಂದ್ರ ಬಳಿ ಹೋಗಿ ಬರಬೇಕಾಗಿತ್ತು. ಅಂತಹ ಪರಿಸ್ಥಿತಿ ಇತ್ತು. ಈಗ ವಿಜಯೇಂದ್ರ ಬಿಜೆಪಿಯ ಲೀಡರ್ ಶಿಪ್ ಪಡೆದುಕೊಂಡಿದ್ದಕ್ಕಿಂತ ಹಾಸ್ಯಾಸ್ಪದ ಬೇರೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಮೈಸೂರು ಪಾದಯಾತ್ರೆ ಮಾಡುವ ನೈತಿಕತೆ ವಿಜಯೇಂದ್ರಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಮುಡಾ ಪಾದಯಾತ್ರೆ ಕೇವಲ ರಾಜಕೀಯ ದುರುದ್ದೇಶದಿಂದ ಕೂಡಿದೆ. ಇದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ರಾಜ್ಯಪಾಲರ ಮೇಲೆ ನಮಗೆ ಗೌರವ ಇದೆ. ಆದರೆ ಅವರನ್ನು ಬಿಜೆಪಿಯವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಇದು ಸರಿಯಲ್ಲ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಲ ಕುಗ್ಗಿಸಲು ಬಿಜೆಪಿ ಹುನ್ನಾರ ನಡೆಸಿದೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುತ್ತಿದ್ದಾರೆ. ವ್ಯವಸ್ಥಿತವಾಗಿ ಜೆಡಿಎಸ್ ಸರ್ವನಾಶ ಮಾಡುವ ಕುತಂತ್ರ ಮಾಡುತ್ತಿದ್ದಾರೆ. ಮುಡಾ ಪಾದಯಾತ್ರೆಯ ಬಗ್ಗೆ ಜೆಡಿಎಸ್ ಶಾಸಕರೆ ಬೇಡ ಎನ್ನುತ್ತಿದ್ದಾರೆ ಎಂದು ತಿಕ್ಷ್ಮಣವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಡಿಯೂರಪ್ಪ, ವಿಜಯೇಂದ್ರ ಹಾಗೆ ರಾಜಕೀಯ ಮಾಡಿಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ. ರಾಜಕೀಯವಾಗಿ ಇದನ್ನು ಸದೃಢವಾಗಿ ಸಿದ್ದರಾಮಯ್ಯ ಎದುರಿಸಿ ಮತ್ತಷ್ಟು ಗಟ್ಟಿಶಾಲಿಯಾಗಿ ಮುಂದುವರೆಯುತ್ತಾರೆ ಎಂದರು.
ಈ ವೇಳೆ ಶಾಸಕರಾದ ಬಾಬಾಸಾಹೇಬ ಪಾಟೀಲ್, ಆಸೀಫ್ ಸೇಠ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ