LatestUncategorized

*ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕ ಭಗವಾನ್ ಕೊನೆಯುಸಿರೆಳೆದಿದ್ದಾರೆ. ಭಗವಾನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದರ ಜೊತೆ ಕೆಲಸ ಮಾಡಿದ್ದ ಭಗವಾನ್ ಅಗಲಿಕೆ ಸ್ಯಾಂಡಲ್ ವುಡ್ ಗೆ ಆಘಾತ ತಂದಿದೆ.

Related Articles

ಬಿ.ದೊರೈ ರಾಜ್ ಹಾಗೂ ಭಗವಾನ್ ಒಟ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಹಾಗಾಗಿ ಈ ಜೋಡಿ ದೊರೈ ಭಗವಾನ್ ಎಂದೇ ಹೆಸರಾಗಿತು. 2000ದಲ್ಲಿ ದೊರೈ ರಾಜ್ ವಿಧಿವಶರಾಗಿದ್ದರು. ಈ ಜೋಡಿ ಒಟ್ಟಾಗಿ 27 ಸಿನಿಮಾ ನಿರ್ದೇಶನ ಮಾಡಿತ್ತು.

ಡಾ.ರಾಜ್ ಕುಮಾರ್ ಅವರ 30ಕ್ಕೂ ಹೆಚ್ಚು ಸಿನಿಮಾಗಳನ್ನು ಭಗವಾನ್ ನಿರ್ದೇಶನ ಮಾಡಿದ್ದರು. ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದ್ದವು. ಕನ್ನಡಕ್ಕೆ ಬಾಂಡ್ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ ಹೆಗ್ಗಳಿಕೆ ಭಗವಾನ್ ಅವರಿಗೆ ಸೇರುತ್ತದೆ. 1968ರಲ್ಲಿ ತೆರೆಕಂದ ಡಾ.ರಾಜ್ ಕುಮಾರ್ ಅಭಿನಯದ ಜೇಡರ ಬಲೆ ಕನ್ನಡದ ಮೊದಲ ಬಾಂಡ್ ಶೈಲಿಯ ಸಿನಿಮಾ. ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿತ್ತು.

ಭಗವಾನ್ ನಿಧನಕ್ಕೆ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದೆ. ಹಿರಿಯ ನಿರ್ದೇಶಕನ ಅಗಲಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಸಂತಾಪ:

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ ಎಸ್.ಕೆ. ಭಗವಾನ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

‘ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಖ್ಯಾತಿ ಗಳಿಸಿದ್ದ ಭಗವಾನ್ ಅವರ ನಿಧನದ ಸುದ್ದಿ ಕೇಳಿ ಬಹಳ ಬೇಸರ ತಂದಿದೆ. ನಿರ್ದೇಶನದ ಜತೆಗೆ ನಿರ್ಮಾಪಕರಾಗಿಯೂ ಹಲವು ಉತ್ತಮ ಚಿತ್ರಗಳನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಡಾ. ರಾಜಕುಮಾರ್ ನಟಿಸಿರುವ ಕಸ್ತೂರಿ ನಿವಾಸ, ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಆಪರೇಷನ್ ಡೈಮಂಡ್ ರಾಕೆಟ್, ಅನಂತ ನಾಗ್ ನಟನೆಯ ಬಯಲು ದಾರಿ, ಚಂದನದ ಗೊಂಬೆ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.

ಹಿರಿಯ ನಿರ್ದೇಶಕ ದೊರೈರಾಜ್ ಅವರ ಜತೆಗೂಡಿ 50 ಕ್ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿ ಚಿತ್ರರಂಗದಲ್ಲಿ ದೊರೈ-ಭಗವಾನ್ ಎಂದೇ ಖ್ಯಾತನಾಮರಾಗಿದ್ದರು. ವರನಟ ಡಾ.ರಾಜಕುಮಾರ್ ಅವರ ಅನೇಕ ಸಿನಿಮಾಗಳನ್ನು ಮಾಡಿದ್ದ ಭಗವಾನ್ ಅವರು ಅವರ ಸಿನಿ ಪಯಣದ ಪ್ರಮುಖ ಭಾಗವಾಗಿದ್ದರು.

ರಾಜಕುಮಾರ್, ವಿಷ್ಣವರ್ಧನ್, ಅನಂತನಾಗ್, ಶಂಕರ್ ನಾಗ್, ಅಂಬರೀಷ್, ಆರತಿ, ಜಯಂತಿ, ಕಲ್ಪನಾ, ಮಂಜುಳಾ, ಮಾಲಾಶ್ರೀ ಸೇರಿದಂತೆ ಅನೇಕ ತಾರೆಯರನ್ನು ಒಳಗೊಂಡು ಯಶಸ್ವಿ ಚಿತ್ರಗಳನ್ನು ಮಾಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಶಿವಕುಮಾರ್ ಅವರು ಸ್ಮರಿಸಿದ್ದಾರೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಅವರ ಬಂಧು ಮಿತ್ರರಿಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಿಲ್ಲು-ಬಾಣ ಚಿಹ್ನೆ ಪಡೆಯಲು ₹ 2000 ಕೋಟಿ ವ್ಯಯಿಸಲಾಗಿದೆ – ಸಂಜಯ ರಾವುತ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button