*ದರ್ಶನ್ ಭೇಟಿಗೆ ಬಂದ ರಚಿತಾ ರಾಮ್‌ಗೆ ನಿರಾಸೆ*: *ಎರಡು ಗಂಟೆ ಕಾದರೂ ಹೊರಬರಲಿಲ್ಲ ದಾಸ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಲು ಬಂದಿದ್ದ ನಟಿ ರಚಿತಾ ರಾಮ್‌ಗೆ ನಿರಾಸೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಕಾದರೂ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ರಚಿತಾ ರಾಮ್ ಜೈಲಿನಿಂದ ವಾಪಸ್ ತೆರಳಿದ್ದಾರೆ.
ದರ್ಶನ್ ಅವರನ್ನು ಭೇಟಿ ಮಾಡಲು ರಚಿತಾ ರಾಮ್ ಕಾರಾಗೃಹದ ಆವರಣಕ್ಕೆ ಆಗಮಿಸಿದ್ದರು. ನಿಯಮದಂತೆ ಜೈಲಾಧಿಕಾರಿಗಳು ರಚಿತಾ ರಾಮ್ ಭೇಟಿ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು.
ಆದರೆ ಹೊರಗಿನಿಂದ ಬಂದ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ದರ್ಶನ್ ಸ್ಪಷ್ಟವಾಗಿ ತಿಳಿಸಿರುವುದಾಗಿ ಜೈಲು ಮೂಲಗಳು ತಿಳಿಸಿವೆ. ಹೀಗಾಗಿ ರಚಿತಾ ರಾಮ್‌ಗೆ ಭೇಟಿಗೆ ಅನುಮತಿ ದೊರೆಯಲಿಲ್ಲ.
ಸುಮಾರು ಎರಡು ಗಂಟೆಗಳ ಕಾಲ ಜೈಲು ಆವರಣದಲ್ಲಿ ನಿರೀಕ್ಷಿಸಿದ್ದ ರಚಿತಾ ರಾಮ್, ಅಂತಿಮವಾಗಿ ಭೇಟಿಯಾಗಲು ಸಾಧ್ಯವಾಗದೆ ಕಾರಿನಲ್ಲಿ ವಾಪಸ್ ತೆರಳಿದರು.
ಜೈಲು ಮೂಲಗಳ ಪ್ರಕಾರ, ದರ್ಶನ್ ಸದ್ಯ ಪತ್ನಿ ವಿಜಯಲಕ್ಷ್ಮಿ, ಮಗ, ತಾಯಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರನ್ನು ಹೊರತುಪಡಿಸಿ ಇತರ ಆಪ್ತರು ಅಥವಾ ಚಿತ್ರರಂಗದ ಸಹೋದ್ಯೋಗಿಗಳನ್ನು ಭೇಟಿಯಾಗಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಪ್ರಕರಣದ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿರುವುದು ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಈ ಬೆಳವಣಿಗೆಯ ಬಳಿಕ ದರ್ಶನ್ ಹೊರಗಿನ ಭೇಟಿಗಳನ್ನು ನಿರಾಕರಿಸುತ್ತಿರುವುದು ಗಮನ ಸೆಳೆದಿದೆ.
ಕಾನೂನು ಪ್ರಕ್ರಿಯೆ ಹಾಗೂ ಪ್ರಕರಣದ ಬೆಳವಣಿಗೆಗಳ ನಡುವೆ ದರ್ಶನ್ ಯಾರನ್ನೂ ಭೇಟಿ ಮಾಡಲು ಆಸಕ್ತಿ ತೋರುತ್ತಿಲ್ಲ ಎಂಬ ಮಾಹಿತಿ ಜೈಲು ಮೂಲಗಳಿಂದ ಬಂದಿದೆ. ಆದರೆ ದರ್ಶನ್ ಅವರ ವೈಯಕ್ತಿಕ ಮನಸ್ಥಿತಿ ಅಥವಾ ಭೇಟಿಗಳನ್ನು ನಿರಾಕರಿಸುವ ನಿಖರ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




