ಗೃಹ ಸಚಿವರನ್ನು ವಜಾ ಮಾಡಿ, ಷಢ್ಯಂತ್ರ ಬಹಿರಂಗಗೊಳಿಸಿ – ಹೆಬ್ಬಾಳಕರ್, ಹಟ್ಟಿಹೊಳಿ ಆಗ್ರಹ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಂಗಳೂರಿನಲ್ಲಿ ನಡೆದ ಆಕಸ್ಮಿಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಕೋಮು ಸೌಹಾರ್ಧತೆ ಕೆಡಿಸುವ ಯತ್ನ ನಡೆಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು. ಜೊತೆಗೆ, ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎನ್ನುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದ್ದಾರೆ.
ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ಬೈಕ್- ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಜಗಳ ನಡೆದು ಆಕಸ್ಮಿಕವಾಗಿ ನಡೆದ ಕೊಲೆ ಪ್ರಕರಣವನ್ನು ಗೃಹ ಸಚಿವರು ತಿರುಚಲು ಯತ್ನಿಸಿದ್ದಾರೆ. ಇಡೀ ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರಿಂದ ಇಂತಹ ಆಘಾತಕಾರಿ ಹೇಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದ್ದಂತೆ ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಸಚಿವರನ್ನು ತಕ್ಷಣ ವಜಾಗೊಳಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ಅಶಾಂತಿ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತ ಬಂದಿದೆ. ಗೃಹ ಸಚಿವರ ಹೇಳಿಕೆಯೂ ಇದರ ಮುಂದುವರಿದ ಭಾಗದಂತೆ ಕಾಣುತ್ತಿದೆ. ಇಡೀ ಘಟನೆಯ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮತ್ತಷ್ಟು ಅಪಾಯಕಾರಿ ಸನ್ನಿವೇಶನ್ನು ಎದುರಿಸಬೇಕಾದೀತು ಎಂದು ಹೆಬ್ಬಾಳಕರ್ ಮತ್ತು ಹಟ್ಟಿಹೊಳಿ ಎಚ್ಚರಿಸಿದ್ದಾರೆ.
ಲವ್ ಜಿಹಾದ್ ಆರೋಪಕ್ಕೆ ಬಿಗ್ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ