*ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ*: *ಪ್ರದೀಪ್ ಈಶ್ವರ್ ವಿರುದ್ಧ ಸುಧಾಕರ್ ಬಣ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಚಿಕ್ಕಬಳ್ಳಾಪುರ ಕಾಂಗ್ರೆಸ್ನಲ್ಲಿನ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ನಡುವಿನ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಎಐಸಿಸಿ ವೀಕ್ಷಕರ ಸಮ್ಮುಖದಲ್ಲೇ ಸುಧಾಕರ್ ಬೆಂಬಲಿಗರು ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಸಭೆಯನ್ನು ಬಹಿಷ್ಕರಿಸಿದ್ದಾರೆ.
ಚಿಕ್ಕಬಳ್ಳಾಪುರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದೆ. ‘ವೋಟ್ ಬಚಾವೋ, ದೇಶ್ ಬಚಾವೋ’ ಸಭೆ ನಡೆಸಲು ಎಐಸಿಸಿ ವೀಕ್ಷಕಿಯಾಗಿ ಆಗಮಿಸಿದ್ದ ದೀಪ್ತಿ ಮೇರಿ ವರ್ಗೀಸ್ ಮತ್ತು ಕಾಂಗ್ರೆಸ್ ನಾಯಕರ ಎದುರೇ ಸುಧಾಕರ್ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರ ಗಮನಕ್ಕೂ ಈ ವಿಚಾರವನ್ನು ತಂದಿದ್ದೇವೆ. ಆದರೂ ಪ್ರದೀಪ್ ಈಶ್ವರ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸುಧಾಕರ್ ಬೆಂಬಲಿಗರು ಪ್ರಶ್ನಿಸಿದ್ದಾರೆ. ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ಹೈಕಮಾಂಡ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಒಂದು ಕಡೆ ಮಾಜಿ ಸಚಿವ ಎಂ.ಸಿ. ಸುಧಾಕರ್ ಬೆಂಬಲಿಗರು, ಮತ್ತೊಂದು ಕಡೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಕುಳಿತಿದ್ದರು. ಇಬ್ಬರು ನಾಯಕರ ಬೆಂಬಲಿಗರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದರಿಂದ ಆರಂಭದಿಂದಲೇ ರಾಜಕೀಯ ಕುತೂಹಲ ಮೂಡಿತ್ತು. ಎಐಸಿಸಿ ವೀಕ್ಷಕಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಸುಧಾಕರ್ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಶಾಸಕ ಪ್ರದೀಪ್ ಈಶ್ವರ್ ನಡೆಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ ಎಂಬುದು ಸುಧಾಕರ್ ಬೆಂಬಲಿಗರ ಪ್ರಮುಖ ಆರೋಪವಾಗಿದೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಬೇರೆಯವರಿಗೆ ಅಧಿಕಾರ ಮತ್ತು ಹುದ್ದೆಗಳನ್ನು ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ. ಎಐಸಿಸಿ ವೀಕ್ಷಕರ ಎದುರೇ ನಡೆದ ಈ ಬೆಳವಣಿಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ನ ಆಂತರಿಕ ಭಿನ್ನಮತವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




