ವೀರಶೈವ ಮಹಾಸಭೆಯಿಂದ ಸಾಮಗ್ರಿಗಳ ವಿತರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇತ್ತೀಚಿಗೆ ಭಾರಿ ಮಳೆಯಲ್ಲಿ ಪ್ರವಾಹಕ್ಕೀಡಾಗಿ ಮನೆಗಳನ್ನು ಕಳೆದುಕೊಂಡ ಚಿಕ್ಕೋಡಿ ತಾಲೂಕಿನ ಯಡೂರು ಹತ್ತಿರವಿರುವ ಚಂದೂರ ಹಾಗೂ ಟೆಕ್ ಗ್ರಾಮಗಳ ನಿರಾಶ್ರಿತ ಕೇಂದ್ರಗಳಿಗೆ ಬೆಳಗಾವಿ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಪದಾಧಿಕಾರಿಗಳು ಅಗತ್ಯವಸ್ತುಗಳ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಧೈರ್ಯ ತುಂಬಿದ ಜಿಲ್ಲಾ ಘಟಕದ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಅವರು ಪ್ರಕೃತಿಯಿಂದ ಆಕಸ್ಮಿಕವಾದ ಈ ಅವಘಡಕ್ಕೆ ರಾಜ್ಯದ ಜನತೆ ಕಂಬನಿ ಮಿಡಿಯುತ್ತಿದೆ, ಮನೆಗಳನ್ನು ಕಳೆದುಕೊಂಡ ನಮ್ಮವರಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯ, ಸುಮಾರು ೧ ಲಕ್ಷ ೧೫ ಸಾವಿರ ರೂಪಾಯಿಗಳ ಹಾಸಿಗೆ ಹೊದಿಕೆ ಹಾಗೂ ಆಹಾರ ಸಾಮಗ್ರಿಗಳನ್ನು ನಾವು ಸಂತ್ರಸ್ತರ ಮನೆಬಾಗಿಲಿಗೆ ಹೋಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಹಾಸಭೆಯ ಪದಾಧಿಕಾರಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಮಾತನಾಡುತ್ತ ’ಪ್ರಕೃತಿ ರುದ್ರನರ್ತನಕ್ಕೆ ಅಮಾಯಕ ಜನರು ತೊಂದರೆ ಪಡುವಂತಾಗಿರುವುದು ದುರ್ದೈವದ ಸಂಗತಿ. ಸರ್ಕಾರ ಹಾಗೂ ಸಂಘಸಂಸ್ಥೆಗಳು ಅವರಿಗೆ ನೆರವಿನ ಹಸ್ತವನ್ನು ನೀಡಬೇಕು. ಮೊದಲಿನಂತೆ ಅವರ ಬದುಕು ರೂಪಗೊಳ್ಳಲಿ, ಸಂತ್ರಸ್ತರೊಂದಿಗೆ ನಾವಿದ್ದೇವೆ ಎಂದು ಗ್ರಾಮಸ್ಥರಿಗೆ ಮಾನಸಿಕ ಸ್ಥೈರ್ಯ ತುಂಬಿದರು.
ಚಿಕ್ಕೋಡಿ ಅ.ಭಾ.ವೀ.ಮಹಾಸಭೆ ತಾಲೂಕಾ ಘಟಕದ ಅಧ್ಯಕ್ಷರಾದ ಮಹೇಶ ಭಾತೆ ಸಂತ್ರಸ್ತರಿಗೆ ಸಾಮಗ್ರಿಗಳನ್ನು ವಿತರಿಸುವಲ್ಲಿ ನೆರವಾದರು. ಶೈಲಜಾ ಸಂಸುದ್ದಿ, ಮಹಾನಂದಾ ಕರಲಿಂಗಣ್ಣವರ, ರಜನಿ ವಾಲಿ ಹಾಗೂ ಹಲವಾರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ