ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಅತಿವೃಷ್ಠಿ/ಪ್ರವಾಹ ಉಂಟಾಗಿದ್ದು, ಹಾನಿಗೊಳಗಾದ ಮನೆಗಳ ಸ್ಥಳಗಳನ್ನು ಮಹಜರು ಮಾಡಿ ವಸತಿ ನಿಗಮದ ಪೋರ್ಟಲ್‌ನಲ್ಲಿ ಮಾಹಿತಿ ಅಳವಡಿಸಿ, ತಕ್ಷಣವೇ ಪರಿಹಾರ ಒದಗಿಸಬೇಕು. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಪೋರ್ಟಲ್‌ನಲ್ಲಿ ಹಾನಿ ಕುರಿತ ದತ್ತಾಂಶ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಆ.13) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಂಪೂರ್ಣ ಹಾನಿಯಾಗಿರುವ ಮನೆಗಳ ಕುರಿತು ಮಾಹಿತಿ ಲಭ್ಯವಿದೆ. ಹಾನಿಯಾದ ಮನೆಗಳಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು. ಪರಿಹಾರ ವಿತರಣೆಯಲ್ಲಿ ಯಾವುದೇ ರೀತಿಯ ವಿಳಂಬ ತೋರಬಾರದು. ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಸರ್ಕಾರದ ಮಾರ್ಗಸೂಚಿ ಅನ್ವಯ ಮನೆ ಹಾನಿಗಳನ್ನು ಸಮೀಕ್ಷೆ ನಡೆಸಿ, ಹಾನಿಯಾಗಿರುವ ವರ್ಗಗಳನ್ನು ನಮೂದಿಸಬೇಕು. ಬೆಳಗಾವಿ ತಾಲ್ಲೂಕಿನಲ್ಲಿ ಹಾನಿಯಾಗಿರುವ 4 ಮನೆಗಳಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನು ಹಾನಿಯಾಗಿರುವ ಬಾಕಿ ಮನೆಗಳ ಕುರಿತು ಮಾಹಿತಿ ದಾಖಲಿಸಿ, ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಪರಿಹಾರ ವಿತರಣೆಗೆ ಕ್ರಮ ವಹಿಸಬೇಕು ಎಂದರು.
ಮನೆ ಹಾನಿಗಳ ಮಾಹಿತಿ; ಪೋರ್ಟಲ್ ನಲ್ಲಿ ಅಳವಡಿಸಲು ಸೂಚನೆ
ಹುಕ್ಕೇರಿ ತಾಲ್ಲೂಕಿನಲ್ಲಿ ಮನೆ ಹಾನಿಯಾದ ಅರ್ಹ ಪ್ರಕರಣಗಳನ್ನು ವಸತಿ ನಿಗಮದ ಪೋಟಲ್ ಗಳಲ್ಲಿ ಅಳವಡಿಸಿ, ಕೂಡಲೇ ಪರಿಹಾರ ವಿತರಿಸಬೇಕು. ಹಾನಿಗೊಳಗಾದ ಮನೆಗಳನ್ನು ವರ್ಗವಾರು ವಿಂಗಡನೆ ಮಾಡಿಕೊಂಡು ಎ, ಬಿ2 ಸೇರಿದಂತೆ ಎಲ್ಲ ವರ್ಗಗಳನ್ನು ವಸತಿ ನಿಗಮದ ಪೋರ್ಟಲ್ ನಲ್ಲಿ ದಾಖಲಿಸಬೇಕು ಎಂದು ಹುಕ್ಕೇರಿ ತಹಶೀಲ್ದಾರಗಳಿಗೆ ವಿಡಿಯೋ ಸಂವಾದದ ಮೂಲಕ ಸೂಚನೆ ನೀಡಿದರು.
ಅತಿವೃಷ್ಠಿ/ಪ್ರವಾಹದಿಂದ ಹಾನಿಯಾದ ಮಳೆಹಾನಿ, ಬೆಳೆಗಳ ಹಾನಿ, ಸಾರ್ವಜನಿಕ ಆಸ್ತಿಗಳ ಹಾನಿಯ ಪರಿಹಾರ ಕಾರ್ಯಗಳು ವಿಳಂಬವಾಗಬಾರದು. ಈ ಕುರಿತು ಸಮರ್ಪಕವಾಗಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ರಾಜೀವ ಗಾಂಧಿ ವಸತಿ ನಿಗಮದ ಪೋರ್ಟಲ್ ನಲ್ಲಿ ಅಳವಡಿಸಲು ತಾಂತ್ರಿಕ ತೊಂದರೆ ಎದುರಾದರೆ ಅಂತಹ ಮನೆಗಳ ಕುರಿತು ವರದಿಯನ್ನು ಸಹ ನೀಡಬೇಕು ಎಂದು ತಿಳಿಸಿದರು.
ಬೆಳೆಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸೂಚನೆ
ಹುಕ್ಕೇರಿ, ಅಥಣಿ, ಚಿಕ್ಕೋಡಿಯಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆಹಾನಿ ವರದಿ ಸಲ್ಲಿಸಬೇಕು. ಆಯಾ ತಹಶೀಲ್ದಾರ್ ಗಳು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಮಾನ್ವಯದೊಂದಿಗೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಂಡಗಳನ್ನು ರಚಿಸಿ, ಒಂದು ವಾರದೊಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮಳೆ ಹಾನಿಯಿಂದ ವಿವಿಧ ಭಾಗಗಳಲ್ಲಿ ಒಟ್ಟು 100 ಕಿ.ಮೀ ಹಾಳಾಗಿರುವ ಬಗ್ಗೆ ಮಾಹಿತಿಯಿದೆ. ರಸ್ತೆಗಳು ಹಾಳಾಗಿರುವ ಕುರಿತು ಸಮೀಕ್ಷೆ ನಡೆಸಿ ಪೂರ್ಣ ಮಾಹಿತಿ ನೀಡಬೇಕು. ರಸ್ತೆಗಳ ನಿರ್ಮಾಣ, ದುರಸ್ಥಿ ಕಾರ್ಯ ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಅಧಿಕಾರಿಗಳು ತ್ವರಿತ ವರದಿ ನೀಡಬೇಕು:
ಎಲ್ಲ ಅಧಿಕಾರಿಗಳು ಮನೆ ಹಾನಿಗಳ ಕುರಿತು ಪಾರದರ್ಶಕ ವರದಿ ನೀಡಬೇಕು. ಈ ಹಿಂದಿನ ಸಾಲಿನಲ್ಲಿ ಮನೆಗಳು ಹಾನಿಯಾದಲ್ಲಿ ಅವುಗಳನ್ನು ಮಾಹಿತಿ ಕೂಡ ನೀಡಿ, ಆಯಾ ಸಾಲಿನಲ್ಲಿ ಹಾನಿಯಾಗಿರುವ ನಮೂದಿಸಬೇಕು. ಎಲ್ಲ ತಾಲೂಕಾಧಿಕಾರಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅದೇ ರೀತಿಯಲ್ಲಿ ಹಾನಿಯಾದ ಅಂಗನವಾಡಿ, ಶಾಲೆಗಳ ಕಟ್ಟಡಗಳ ದುರಸ್ಥಿ ಕಾರ್ಯ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳ ಪರಿಶೀಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ನಿರ್ದೇಶನ ನೀಡಿದರು.
ಮಳೆ ಹಾನಿ ಪರಿಹಾರ ಕ್ರಮಗಳಲ್ಲಿ ಪ್ರತಿ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಮಾಹಿತಿ ಅಳವಡಿಕೆಗೆ ವಿಳಂಬ ಮಾಡದೇ ಶೀಘ್ರ ಪರಿಹಾರ ಒದಗಿಸಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಜಿ.ಪಂ ಸಿ.ಇ.ಒ ರಾಹುಲ್ ಶಿಂಧೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ ಬಸರಗಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಬೆಳಗಾವಿ ತಹಶೀಲ್ದಾರ ಬಸವರಾಜ ನಾಗರಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ್ ದಿವಿಟರ, ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಎಲ್ಲ ತಹಶೀಲ್ದಾರಗಳು, ತಾಲ್ಲೂಕು ಪಂಚಾಯತ್ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ