*ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬನ್ಸಾಲ್ ಸೂಚನೆ*
![](https://pragativahini.com/wp-content/uploads/2025/02/IMG_20250211_134100_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಜಲಜೀವನ ಮಿಷನ್ ಅನುಷ್ಠಾನ, ಶಾಲಾ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ, ಶಾಲೆಯಿಂದ ಹೊರಗುಳಿಯುವ ಮಕ್ಕಳು; ಜಾನುವಾರು ಗಣತಿ ಸೇರಿದಂತೆ ಸರಕಾರದ ಪ್ರತಿಯೊಂದು ಯೋಜನೆ/ಕಾರ್ಯಕ್ರಮಗಳ ಅನುಷ್ಠಾನದ ಬಳಿಕ ಅದರ ಸಾಧಕ-ಬಾಧಕಗಳು ಮತ್ತು ಸವಾಲುಗಳು ಹಾಗೂ ಹೊಸ ವಿಷಯಗಳ ಕುರಿತು ಸಂಬಂಧಿಸಿದ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ವಿಶ್ಲೇಷಣೆ ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತರಾದ ವಿಪುಲ್ ಬನ್ಸಾಲ್ ನಿರ್ದೇಶನ ನೀಡಿದರು.
ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮಂಗಳವಾರ((ಫೆ.11) ಜರುಗಿದ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಿರುವ ಕಡೆಗಳಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿರುವ ಬಗ್ಗೆ ಸಮೀಕ್ಷೆ ನಡೆಸುವಂತೆ ತಿಳಿಸಿದರು.
ಇದಲ್ಲದೇ ಜಲಜೀವನ ಮಿಷನ್ ಅನುಷ್ಠಾನಗೊಳಿಸಿದ ಬಳಿಕ ಜನರು ಹೇಗೆ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೊದಲಿನಂತೆಯೇ ನೀರು ಸಂಗ್ರಹಿಸುತ್ತಿದ್ದಾರೆಯೇ ಹಾಗೂ ಮೀಟರ್ ಹೇಗೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೊಂದರೆಯಾಗುವ ಬಗ್ಗೆ ಮುಂಚಿತವಾಗಿಯೇ ಪರಿಶೀಲಿಸಬೇಕು.
ಮಳೆಗಾಲದಲ್ಲಿ ಡೆಂಗ್ಯೂ ಸೇರಿದಂತೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳ ನಿಯಂತ್ರಣ ತಡೆಗೆ ಕೂಡ ಸಮಗ್ರ ಯೋಜನೆ ರೂಪಿಸಿಕೊಳ್ಳಬೇಕು.
ಬಾಣಂತಿ ಸಾವು ಪ್ರಕರಣಗಳ ಬಗ್ಗೆ ಎಲ್ಲೆಡೆ ವರದಿಯಾಗುತ್ತಿರುವುದರಿಂದ ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡಿ ಸಾವುಗಳನ್ನು ತಡೆಗಟ್ಟಬೇಕು ಎಂದು ವಿಫುಲ್ ಬನ್ಸಾಲ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಂಗಡಣೆ; ಕಸ ವಿಲೇವಾರಿ ಸಮರ್ಪಕವಾಗಿ ನಡೆಸಬೇಕು. ಅಗತ್ಯಬಿದ್ದರೆ ಇನೊಂದು ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಜಮೀನು ಮೀಸಲಿಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ವಿಶ್ಲೇಷಿಸಬೇಕು. ಇದಲ್ಲದೇ ಪಾಲಕರ ಇಚ್ಛೆಗನುಸಾರವಾಗಿ ಪ್ರವೇಶ ಕಲ್ಪಿಸಬೇಕು. ಸರಕಾರದ ಮಾರ್ಗಸೂಚಿ ಪ್ರಕಾರ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಿಸಬೇಕು ಎಂದು ಬನ್ಸಾಲ್ ಹೇಳಿದರು.
ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳ ಜಾಗೆಯು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಯ ಹೆಸರಿನಲ್ಲಿರಬೇಕು. ಈ ಇಲಾಖೆಗಳ ವಿದ್ಯಾರ್ಥಿಗಳಿಗೆ ಸರಕಾರ ಸಕಲ ಸೌಲಭ್ಯ ನೀಡುತ್ತಿರುವುದರಿಂದ ಇತರೆ ಶಾಲೆಗಳಿಗಿಂತ ವಸತಿನಿಲಯಗಳ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ವಸತಿನಿಲಯಗಳ ವಾರ್ಡನ್ ಹಾಗೂ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ವಿಪುಲ್ ಬನ್ಸಾಲ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಕ್ತ ಹೆಪ್ಪುಗಟ್ಟುವಿಕೆ ಮತ್ತಿತರ ವೈದ್ಯಕೀಯ ಕಾರಣಗಳಿಂದ ಬಾಣಂತಿಯರ ಸಾವು ಸಂಭವಿಸುತ್ತಿರುವುದು ಕಂಡುಬಂದಿದೆ. ಆದಾಗ್ಯೂ ಯಾವುದೇ ಸಾವು ಸಂಭವಿಸಿದಂತೆ ಅಗತ್ಯ ಎಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ವಿವರಿಸಿದರು.
ಜಿಲ್ಲೆಯ ಶೇ.42 ರಷ್ಟು ಗ್ರಾಮಗಳು ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಬಂದಿರುತ್ತವೆ.
ಜಲಜೀವನ ಮಿಷನ್ ಯೋಜನೆ ಅನುಷ್ಠಾನದ ಬಳಿಕ ಉಂಟಾಗಿರುವ ಬದಲಾವಣೆಯ ಕುರಿತು ಅಧ್ಯಯನ ಮಾಡಲು ವಿಶ್ವಬ್ಯಾಂಕ್ ವತಿಯಿಂದ ತಂಡ ನಿಯೋಜಿಸಲಾಗಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ವಿವರಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ಅನುಕೂಲವಾಗುವಂತೆ ಬಳಕೆ ಮಾಡಿಕೊಳ್ಳುವ ಕುರಿತು ಚಿಂತನೆ ನಡೆದಿದೆ. ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಿಕೊಂಡು ಇದನ್ನು ಜಾರಿಗೊಳಿಸಬಹುದು ಎಂದರು.
ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕಸ ಸಂಗ್ರಹಣಾ ಹಾಗೂ ಸಾಗಾಣಿಕೆಗೆ ವಾಹನಗಳು ಲಭ್ಯವಿರುವುದರಿಂದ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸಭೆಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ ವೈದ್ಯರ ಮತ್ತು ಸಿಬ್ಬಂದಿಯ ಕೊರತೆ ನೀಗಿಸುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐಪಿ.ಗಡಾದ ಹೇಳಿದರು.
ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ದಿನೇಶ್ ಕುಮಾರ್ ಮೀನಾ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಬಿ., ಸ್ಮಾರ್ಟ್ ಸಿಟಿ ವ್ಯವಸ್ಥಾಪ ನಿರ್ದೇಶಕರಾದ ಸಯೀದಾ ಅಫ್ರಿನ್ ಬಾನು ಬಳ್ಳಾರಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಅಡವಿಮಠ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ ಕೂಲೇರ್, ಡಿಡಿಪಿಐ ಲೀಲಾವತಿ ಹಿರೇಮಠ, ಆಹಾರ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ