Kannada NewsLatest

ಪ್ರಗತಿ ವರದಿಗಳನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಬೇಕು – ಈರಣ್ಣ ಕಡಾಡಿ ಸೂಚನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸರ್ಕಾರದ ವಿವಿಧ ಇಲಾಖೆಯ ಬಹಳಷ್ಟು ಯೋಜನೆಗಳು ಜನರಿಗೆ ಸುಲಭವಾಗಿ ತಲುಪಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು. ವಿವಿಧ ಕಾಮಗಾರಿಗಳಿಗೆ ಬಳಕೆಯಾಗುವ ಅನುದಾನ ಹಾಗೂ ಹಂತವಾರು ಪ್ರಗತಿ ವರದಿಗಳನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಮಾ.೦೯) ನಡೆದ ೨೦೨೨-೨೩ ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಜಿಲ್ಲಾ ಮಟ್ಟದ (ದಿಶಾ) ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳ ಅನುಷ್ಠಾನ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಂಬಂಧಿತ ಜನಪ್ರತಿನಿಧಿಗಳನ್ನು ಕಡ್ಡಾಯವಾಗಿ ಆಹ್ವಾನಿಸಬೇಕು. ಇದರಿಂದ ಸಾರ್ವಜನಿಕರಿಗೆ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿ ದೊರೆಯುತ್ತದೆ ಹಾಗೂ ವ್ಯಾಪಕ ಪ್ರಚಾರವಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಲ ಸೌಲಭ್ಯಗಳ ಅರ್ಜಿ ವಿಲೇವಾರಿಗೆ ಸೂಚನೆ:

ಸರ್ಕಾರದ ವಿವಿಧ ಯೋಜನೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ಸೌಲಭ್ಯ ವಿತರಣೆ ಮಾಡಬೇಕು. ಈಗಾಗಲೇ ವಿವಿಧ ಯೋಜನೆಗಳಿಗೆ ಬಂದಿರುವ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ಸರ್ಕಾರದ ಯೋಜನೆಗಳಿಗೆ ಬಂದಂತಹ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.

ರಸ್ತೆ ಕಾಮಗಾರಿಗಳ ಪಟ್ಟಿ ಸೂಚನೆ :

ರಸ್ತೆ ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಲು ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿತ್ತು, ಕೂಡಲೇ ಸಲ್ಲಿಸಬೇಕು ಮತ್ತು ರಸ್ತೆ ಕಾಮಗಾರಿಗಳಿಗೆ ನಾಮ ಫಲಕ ಅಳವಡಿಸಿರುವ ಬಗ್ಗೆ ಫೋಟೋ ದಾಖಲೆಗಳನ್ನು ಸಲ್ಲಿಸಬೇಕು. ಈಗಾಗಲೇ ಚಾಲನೆ ಇರುವ ಕಾಮಗಾರಿಗಳ ಅನುದಾನ ಬಳಕೆಯ ಸಮಗ್ರ ಅಂಕಿ ಅಂಶಯಗಳ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಜಿ.ಪಂ ಸಿಇಓ ಹರ್ಷಲ್ ಭೋಯರ್ ಅವರು ತಿಳಿಸಿದರು.

ಘನತ್ಯಾಜ್ಯ ವಿಲೇವಾರಿ:

ಘನ ತ್ಯಾಜ್ಯ ವಿಲೇವಾರಿಗೆ ಈಗಾಗಲೇ ಘಟಕಗಳನ್ನು ಸ್ಥಾಪಿಸಲಾಗಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ ಮಿಷನ್ ಯೋಜನೆಯಡಿ, ವೆಸ್ಟ್ ಮ್ಯಾನೇಜ್ಮೆಂಟ್, ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡಲಾಗುತ್ತಿದೆ. ಕಮ್ಯುನಿಟಿ ಶೌಚಾಲಯ, ವಯಕ್ತಿಕ ಶೌಚಾಲಯ, ರಸ್ತೆ ಚರಂಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ ಅವರು ಮಾಹಿತಿ ನೀಡಿದರು.

ಮಹಿಳಾ ಸೊಸೈಟಿ ಸಂಘಗಳ ಮೂಲಕ ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಸಾರ್ವಜನಿಕರಿಗೆ ಮೂಡಿಸಲಾಗುತ್ತಿದೆ. ಈ ಕುರಿತು ಈಗಾಗಲೇ ಸಂಘದ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸುಮಾರ ೩ ಲಕ್ಷ ಫಲಾನುಭವಿಗಳಿಗೆ ಸಿಲೆಂಡರ್ ವಿತರಣೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ಯೋಜನೆ ಸ್ಥಾಗಿವಾಗಿದೆ. ಬಾಕಿ ಅರ್ಜಿಗಳಿಗೆ ಸಿಲೆಂಡರ್ ಪೂರೈಸಲು ಅನುದಾನ ಈವರೆಗೆ ಬಿಡುಗಡೆಯಾಗಿಲ್ಲ ಮುಂದಿನ ದಿನಗಳಲ್ಲಿ ಉಜ್ವಲ ಯೋಜನೆಗೆ ಅನುದಾನ ಬಿಡುಗಡೆಯದಲ್ಲಿ ವಿತರಣೆ ಮಾಡಲಾಗುವುದು ಎಂದು ಸಂಬಂಧಿತ ಅಧಿಕಾರಿಗಳು ವಿವರಣೆ ನೀಡಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ:

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ೨೦೧೬ ರಲ್ಲಿ ಪ್ರಾರಂಭಗೊಂಡದ್ದು, ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ರೂ. ೯೩೦ ಕೋಟಿ ಅನುದಾನ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದಿಂದ ೪೪೧ ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ೪೧೩ ಕೋಟಿ ಒಟ್ಟು ೮೫೪ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈವರೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಒಟ್ಟು ರೂ. ೮೧೫.೦೨ ಕೋಟಿ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ವಿವರಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು ೧೦೨ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ ಒಟ್ಟು ರೂ. ೬೦೪.೨೮ ಕೋಟಿ ಮೊತ್ತದ ೮೭ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ರೂ.೩೨೫.೭೨ ಕೋಟಿ ಮೊತ್ತದ ೧೫ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ನಗರದ ವಿಶ್ವೇಶ್ವರಯ್ಯ ನಗರದಲ್ಲಿ ಕೆಲವು ಕಾಮಗಾರಿಗಳು ಬಾಕಿ ಇವೆ ಅದೇ ರೀತಿಯಲ್ಲಿ ಬೀದಿ ದೀಪಗಳು ಸಹ ಅಳವಡಿಕೆ ಮಾಡಿಲ್ಲ ಕೂಡಲೇ ಬೀದಿ ದೀಪಗಳ ಅಳವಡಿಕೆ, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಸದೆ ಮಂಗಳಾ ಅಂಗಡಿ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಈಗಾಗಲೇ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣಗೊಂಡಿವೆ. ಕೆಲವು ಭಾಗಗಳಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಜೂನ್ ಅಂತ್ಯದ ವರೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದರು.

ಬೆಳಗಾವಿಯ ವಿಭಾಗದ ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಶಾಲಾ ಕಟ್ಟಡಗಳು ಪೂರ್ಣಗೊಂಡಿವೆ. ಪೀಠೋಪಕರಣ ಸೇರಿದಂತೆ ಯಾವುದೇ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಬಾಕಿ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಚಿಕ್ಕೋಡಿ ವಿಭಾಗದ ಒಟ್ಟು ೯ ಶಾಲೆಗಳ ಕಟ್ಟಡ ಪೂರ್ಣಗೊಂಡಿವೆ. ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ ಶಾಲೆಗೆ ಸರ್ಕಾರದಿಂದ ಅನುದಾನ ಮಂಜೂರು ಆಗಿದೆ. ಮುಂದಿನ ದಿನಗಳಲ್ಲಿ ಶಾಲೆ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಚಿಕ್ಕೋಡಿ ಡಿಡಿಪಿಐ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮೂಲಕ ಪ್ರತಿ ಶಾಲೆಗಳಿಗೆ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಲಾಗುವದು.
ತೊಗರಿಬೇಳೆ ಸೇರಿದಂತೆ ಬೇಡಿಕೆ ಇರುವ ಆಹಾರ ಪದಾರ್ಥಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಪೂರೈಸಿ ಕೊಳ್ಳಲಾಗುವದು. ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನ ಊಟದ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

ಜಲ್ ಜೀವನ್ ಮಿಷನ್ ಕಾಮಗಾರಿಗಳ ಪೂರ್ಗೊಳಿಸಲು ಸೂಚನೆ:

ಬೆಕ್ಕಿನಕೇರಿ, ಕಿಣಯೆ ಸಾಂಬ್ರಾ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯಿದೆ, ಜಲ್ ಜೀವನ ಮಿಷನ್ ಯೋಜನೆಯ ಕಾಮಗಾರಿಗಳು ಬಾಕಿ ಇವೆ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಕೂಡಲೇ ನೀರಿನ ಸಂಪರ್ಕ ಕಲ್ಪಿಸಿ, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಂಸದೆ ಮಂಗಳಾ ಅಂಗಡಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ:

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹಲವಾರು ಅಭಿವೃದ್ದಿ ಯೋಜನೆ ಜಾರಿಗೆ ತರಲಾಗಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಮೂಲಕ ಮೊದಲ ಬಾರಿ ಗರ್ಭಿಣಿಯರಿಗೆ ೬ ಸಾವಿರ ರೂಪಾಯಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಗರ್ಭಿಣಿಯರಿಗೆ ಸೀಮಂತ ಜೊತೆಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೋಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಗರ್ಭಿಣಿ ಮಹಿಳೆಯರು ಅಪೌಷ್ಟಿಕತೆಯಿಂದ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಈ ಕುರಿತು ಅಭಿಯಾನದ ಮೂಲಕ ನಿರಂತರ ಜಾಗೃತಿ ಮೂಡಿಸಲು, ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎಂ. ಬಸವರಾಜ ಅವರು ತಿಳಿಸಿದರು.

ಅನುದಾನ ಬಳಕೆ ಸಮರ್ಪಕವಾಗಿರಲಿ:

ವಿವಿಧ ಯೋಜನೆಗಳ ಅನುದಾನಗಳ ಬಳಕೆ ಸಮರ್ಪಕವಾಗಿರಬೇಕು. ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆ ಎದುರಾದಲ್ಲಿ ಮಾಹಿತಿ ನೀಡಬೇಕು. ಇದಕ್ಕೆ ಜನಪ್ರತಿನಿಧಿಗಳಿಂದ ಸಹಕಾರ ನೀಡಲಾಗುವದು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ, ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಹಾಂತೇಶ ಮುರಗೋಡ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button