Politics

*ಮಳೆಗಾಲದಲ್ಲಿ ಅವಘಡಗಳ ಬಗ್ಗೆ ಎಚ್ಚರಿಕೆ‌ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ*

ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ

ಪ್ರಗತಿವಾಹಿನಿ ಸುದ್ದಿ: ಮುಂಗಾರು ಮಳೆಯಲ್ಲಿ ನೆರೆ ಸೇರಿದಂತೆ ಮತ್ತಿತರ ಅವಘಡಗಳಿಂದ ಜನ ಜಾನುವಾರುಗಳಿಗೆ ಸಾವು ನೋವುಗಳು ಆಗದಂತೆ ಹಾಗೂ ಆಸ್ತಿ ಹಾನಿ‌ ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.

ಉಡುಪಿ ಜಿಲ್ಲಾ ಪಂಚಾಯತ್ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಈ ಬಾರಿ ಹವಾಮಾನ ಇಲಾಖೆ, ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಸಿಡಿಲು ಬಡಿತದಿಂದ ಈಗಾಗಲೇ ಮೂರು ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಿಂದ ಹಾನಿಗೊಳಗಾದವರಿಗೆ ಬೇಗ ಪರಿಹಾರ ಒದಗಿಸಬೇಕು ಎಂದು ಆದೇಶಿಸಿದರು.

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಗೆ ಸಿಇಒಗೆ ಸೂಚನೆ ನೀಡಿದ ಸಚಿವರು, ಉಡುಪಿ ನಗರ ಪ್ರದೇಶದಲ್ಲಿ ಮಳೆ ನೀರು ಸರಾಗವಾಗಿ ಹರಿಯದ ಸಮಸ್ಯೆ ಕಳೆದಬಾರಿ ಉಂಟಾಗಿದ್ದು, ಈ ಬಾರಿ ಅಂತಹ ಅನಾಹುತ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ಹೇಳಿದರು.

ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಆದಷ್ಟು ಶೀಘ್ರ ಆದ್ಯತೆ ಮೇಲೆ ಕೈಗೊಳ್ಳಬೇಕು. ಕುಡಿಯುವ ನೀರಿನೊಂದಿಗೆ ಮಳೆ ನೀರು ಸೇರಿದಂತೆ ಕಲುಷಿತ ನೀರು ಮಿಶ್ರಣ ಗೊಳ್ಳದಂತೆ ಕ್ರಮವಹಿಸಬೇಕು.‌ ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಿಂದಾಗ್ಗೆ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗ್ರಾಮೀಣ ಭಾಗದ ಜನರು ಹಳ್ಳಕೊಳ್ಳ ದಾಟಲು ಕಾಲುಸಂಕಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಬಾರಿ ಆದ್ಯತೆ ಮೇರೆಗೆ ಕಾಲು ಸಂಕಗಳನ್ನು ನಿರ್ಮಿಸಬೇಕು. ಈ ಬಾರಿ‌ ಜಿಲ್ಲೆಯಲ್ಲಿ 35,509 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಅಗತ್ಯ ಇರುವ ಬಿತ್ತನೆ ಬೀಜಗಳನ್ನು ರಸಗೊಬ್ಬರ, ದಾಸ್ತಾನುಗಳನ್ನು ಇಟ್ಟುಕೊಂಡು, ರೈತರಿಗೆ ಸಮರ್ಪಕವಾಗಿ ವಿತರಿಸಲು ಸಚಿವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ M4 ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆ ಕೇಳಿ ಬರುತ್ತಿದೆ. ಹೊರ ಜಿಲ್ಲೆಗಳಲ್ಲಿ ಈ ಭತ್ತದ ತಳಿಯ ಬೀಜಗಳು ಲಭ್ಯವಿದ್ದರೆ, ತರಿಸಿಕೊಡಬೇಕು. ಕಡಲಕೊರೆತ ತಡೆಗೆ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

  • ಡಿಡಿಪಿಐಗೆ ಅಭಿನಂದನೆ:

  • ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಳೆದ ಬಾರಿ 17ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ಬಾರಿ ಮೊದಲ ಸ್ಥಾನ‌ ಅಲಂಕರಿಸಿದೆ. ಇದಕ್ಕೆ ಶಿಕ್ಷಣ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. 143 ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶ ಬಂದಿದೆ. ಶಾಲೆಗಳ‌ ದುರಸ್ತಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸೂಚಿಸಿದರು.
  • ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರ:
  • ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸುಭದ್ರವಾಗಿದೆ ಎಂದು ಸಚಿವರು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕಾ ಬಾಯಲ್, ಡಿಎಫ್ಓಗಳಾದ ಗಣಪತಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button