Belagavi NewsBelgaum NewsKarnataka News

*ಕಲಿಕಾ ಗುಣಮಟ್ಟ ಹೆಚ್ಚಿಸಲು ಜಿಲ್ಲಾ ಕಾರ್ಯದರ್ಶಿ ವಿಫುಲ ಬನ್ಸಲ್ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಸಾಧಾರಣವಾಗಿದ್ದು, ಕಲಿಕಾ ಗುಣಮಟ್ಟ‌ ಸುಧಾರಣೆಗೆ ಯೋಜನೆಗಳನ್ನು ರೂಪಿಸಬೇಕು. ಮಳೆ‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದೇ ಪರ್ಯಾಯ ಕಟ್ಟಡದ ವ್ಯವಸ್ಥೆ ಮಾಡಿ ಮಕ್ಕಳ ಹಾಜರಾತಿ ಬಗ್ಗೆಯೂ ಗಮನ ಗಮನಹರಿಸಬೇಕು ಎಂದು ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್  ತಿಳಿಸಿದರು.

ಜಿಲ್ಲಾ‌ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಆ.1) ನಡೆದ ವಿವಿಧ‌ ಇಲಾಖೆಗಳ ಪ್ರಗತಿ‌ ಪರಿಶೀಲನಾ‌ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನುದಾನಿತ ಶಾಲೆಗಳಲ್ಲಿಯೂ ಸಹ ಪರೀಕ್ಷಾ ಫಲಿತಾಂಶ ಕುಂಠಿತವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು   ಅನುದಾನಿತ ಶಾಲೆಗಳಲ್ಲಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದ್ದು, ರೈತರಿಗೆ ಅಗತ್ಯದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ನಿಗಾವಹಿಸಬೇಕು. ಮುಂಗಾರು ಹಂಗಾಮು ಪ್ರಾರಂಭವಾದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆಯಾಗಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಬಗ್ಗೆ ದೂರುಗಳು ಬಂದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

Home add -Advt

ಮಳೆಯಿಂದಾಗಿ ಜನ-ಜಾನುವಾರುಗಳ ಜೀವಹಾನಿಯಾದಲ್ಲಿ ಶೀಘ್ರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು.  

ನಾಗಮೋಹನದಾಸ ಅವರ ವರದಿಯಂತೆ ಈಗಾಗಲೇ ಪರಿಶಿಷ್ಟ ಜಾತಿಗಳ (ಒಳ ಮೀಸಲಾತಿ) ಸಮಗ್ರ ಗಣತಿ ಕಾರ್ಯ ಜಿಲ್ಲೆಯಲ್ಲಿ ಜರುಗತ್ತಿದೆ. ನ್ಯೂನತೆಗಳಿಗೆ ಆಸ್ಪದ ನೀಡದೇ ಈ ಗಣತಿ ಕಾರ್ಯವನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು ಎಂದು ಬನ್ಸಲ್ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಸತಿ ಶಾಲೆಗಳಿಗಾಗಿ ಸರಕಾರದ‌ ವತಿಯಿಂದ‌‌ ಸಾಕಷ್ಟು ಅನುದಾನ ಒದಗಿಸಲಾಗುತ್ತಿದೆ. ವಸತಿ ಶಾಲೆಗಳಲ್ಲಿನ ಮಕ್ಕಳ ಪರೀಕ್ಷಾ ಫಲಿತಾಂಶ ಹಾಗೂ ಕಲಿಕಾ ಗುಣಮಟ್ಟ ಸುಧಾರಣೆಗೆ ಯೋಜನೆ ರೂಪಿಸಿಕೊಳ್ಳಬೇಕು. ವಸತಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಕಡೆ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ತಿಳಿಸಿದರು.

ನಗರದಲ್ಲಿ 24*7 ಕುಡಿಯುವ ನೀರು ಪೂರೈಕೆ‌ ಕಾಮಗಾರಿಯನ್ನು ಆಗಸ್ಟ್ ಮಾಹೆಯ ಅಂತ್ಯದವರೆಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ನಗರದಲ್ಲಿ ಮೇಲ್ಸೆತುವೆ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಉತ್ತಮವಾಗಿದ್ದು, ಬೀಜ, ರಸಗೊಬ್ಬರಗಳ ಕೊರತೆಯಾಗಿಲ್ಲ. ಕಳೆದ ವರ್ಷಕ್ಕಿಂತ ಗೋವಿನ ಜೋಳ ಬೆಳೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಜಿಲ್ಲೆಯಲ್ಲಿನ ಬೆಳೆಗಳ ಸಮಗ್ರ ಮಾಹಿತಿ ಪಡೆಯಲಾಗಿದೆ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳು ಹಾನಿಯಾಗಿರುವ ಕುರಿತು ಯಾವುದೇ ವರದಿ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ವಿವರಿಸಿದರು.

ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಳಗಿರುವ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಮಳೆ ಹಾನಿಯಾದ ವರದಿ ಬಂದಕೂಡಲೇ ತಕ್ಷಣ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯಿಂದ ಹಾನಿ ಪ್ರಮಾಣ ಹೆಚ್ಚಾಗಿಲ್ಲ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮಾಹಿತಿ ನೀಡಿದರು.

ತೋಟಗಾರಿಕೆ ಬೆಳೆಗಳ ವಿಮೆ ಪಾವತಿಸಲು ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದೆ. ಕಳಪೆ ಬೀಜಗಳನ್ನು ಮಾರಾಟ ಮಾಡಿದಲ್ಲಿ ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಹೇಳಿದರು.

ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಈ ವರ್ಷ ಮಕ್ಕಳಿಗೆ ಕಲಿಕಾ ಪ್ರಕ್ರಿಯೆ ಹೆಚ್ಚಿಸಲು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಮಹಾನಗರ ಪಾಲಿಕೆ ಆಯುಕ್ತರಾದ ಶುಭ.ಬಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ನಾಯಕ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ ಸೇರಿದಂತೆ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button