Kannada NewsKarnataka NewsLatest

ಬೆಳಗಾವಿಯ ಬ್ಯಾಂಕ್ ಮ್ಯಾನೇಜರ್ ಸೈಕಲ್ ಸವಾರಿ

Pragativahini Exclusive

Positive story

 

 ನಿತ್ಯ ಸೈಕಲ್ ಮೇಲೆ ಕಚೇರಿಗೆ ಹೋಗಿ ಬರುವ ಡಿವಿಸನಲ್ ಮ್ಯಾನೇಜರ್ – ಅಪರೂಪದ ದಂಪತಿ

 

M.K.Hegde

ಎಂ.ಕೆ.ಹೆಗಡೆ, ಬೆಳಗಾವಿ – ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯ ಮತ್ತು ಇಂಧನ ಬೆಲೆ ಏರುತ್ತಿರುವ ಸಂದರ್ಭದಲ್ಲಿ ವಾಹನಗಳ ಸಂಖ್ಯೆ ವಿಪರೀತ ಹೆಚ್ಚುತ್ತಿರುವ ಕುರಿತು ಹಲವರು ಕಳವಳ ವ್ಯಕ್ತಪಡಿಸುತ್ತಾರೆ.

ಆದರೆ ಯಾರೊಬ್ಬರೂ ಇದಕ್ಕೆ ತಮ್ಮ ಕೊಡುಗೆ ಏನು ಎನ್ನುವುದನ್ನು ಯೋಚಿಸುವುದಿಲ್ಲ.
 ಇಂತಹ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಇಡೀ ಸಮಾಜಕ್ಕೆ ಆದರ್ಶರಾಗಿದ್ದಾರೆ. ಯಾರು ಏನಂದುಕೊಳ್ಳುತ್ತಾರೋ ಎನ್ನುವುದನ್ನೂ ಚಿಂತಿಸದೆ ಮಾನವ ಜನಾಂಗಕ್ಕೆ ತಮ್ಮ ಕೊಡುಗೆ ನೀಡಲು ಮುಂದಾಗಿದ್ದಾರೆ.
ಸಂಗಮೇಶ ಪಡನಾಡ

ಬೆಳಗಾವಿಯ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾಗಿರುವ ಸಂಗಮೇಶ ಪಡನಾಡ ಅವರು ನಿತ್ಯ ತಮ್ಮ ಮನೆಯಿಂದ ಕಚೇರಿಗೆ ಸೈಕಲ್ ಮೇಲೆ ಹೋಗಿ ಬರುತ್ತಾರೆ. ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಹೋಗುವುದಕ್ಕೂ ಸೈಕಲ್ ಬಳಸುತ್ತಿದ್ದಾರೆ. ತೀರಾ ಅನಿವಾರ್ಯವಾದರೆ ಮಾತ್ರ ಅಂತಹ ಸಂದರ್ಭದಲ್ಲಿ ವಾಹನ ಬಳಸುತ್ತೇನೆ ಎಂದು ಶಪಥ ಮಾಡಿದ್ದಾರೆ.

ಡಿವಿಸನಲ್ ಮ್ಯಾನೇಜರ್ ಎಂದರೆ ಸಹಜವಾಗಿ ಬ್ಯಾಂಕ್ ಅವರಿಗೆ ವಾಹನ ಸೌಲಭ್ಯ ಒದಗಿಸುತ್ತದೆ. ಉಚಿತ ವಾಹನ, ಉಚಿತ ಇಂಧನ, ಉಚಿತ ವಾಹನ ಚಾಲಕ ಇರುತ್ತಾರೆ. ಆದರೆ ಎಲ್ಲ ಸೌಲಭ್ಯಗಳಿದ್ದಾಗ್ಯೂ ಇವರು ಸೈಕಲ್ ತುಳಿಯುತ್ತಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಸಂಗಮೇಶ ಪಡನಾಡ ಮೂಲತಃ ವಿಜಯಪುರದವರು. ಬೆಂಗಳೂರು, ಹಾಸನ, ಕೊಡಗುಗಳಲ್ಲಿ ಕೆಲಸ ಮಾಡಿದ್ದಾರೆ. ಒಂದೂವರೆ ಕಿಮೀ ಗಿಂತ ಕಡಿಮೆ ಮತ್ತು 10 ಕಿಲೋ ಗಿಂತ ಕಡಿಮೆ ಭಾರ ಕೈಯಲ್ಲಿದೆ ಎಂದಾದರೆ ನಡೆದುಕೊಂಡೇ ಹೋಗುವ ಅಭ್ಯಾಸವನ್ನು ಸಂಗಮೇಶ 15 ವರ್ಷಗಳಿಂದಲೂ ರೂಢಿಸಿಕೊಂಡು ಬಂದಿದ್ದಾರೆ.
ಬೆಳಗಾವಿಯಲ್ಲಿ ಕಳೆದ 6 ತಿಂಗಳಿನಿಂದ ಆಗಾಗ ಕಚೇರಿಗೆ ಸೈಕಲ್ ಮೇಲೆ ಹೋಗುವ ರೂಢಿ ಇಟ್ಟುಕೊಂಡಿದ್ದರು. ಆದರೆ ಈಗ ನಿರಂತರವಾಗಿ ಸೈಕಲ್ ನಲ್ಲೇ ಹೋಗಿ ಬರುತ್ತಾರೆ.
 ಸಂಗಮೇಶ್ ಅವರು ಬೆಳಗಾವಿಯ ಹನುಮಾನ್ ನಗರ (ಕುವೆಂಪು ನಗರ)ದಲ್ಲಿ ಮನೆ ಮಾಡಿದ್ದಾರೆ. ಅಲ್ಲಿಂದ ಶ್ರೀಕೃಷ್ಣ ದೇವರಾಯ (ಕೊಲ್ಲಾಪುರ) ವೃತ್ತದಲ್ಲಿರುವ ಕಚೇರಿಗೆ (ಅಂದಾಜು 5 ಕಿಮೀ) ನಿತ್ಯ ಸೈಕಲ್ ನಲ್ಲಿ ಓಡಾಡುತ್ತಾರೆ. ಹಲವು ದಿನ ಮಧ್ಯಾಹ್ನ ಊಟಕ್ಕೂ ಮನೆಗೆ ಬಂದು ಹೋಗುತ್ತಾರೆ. ಮನೆಯಿಂದ ಕಚೇರಿ ತಲುಪಲು ಕೇವಲ 10 -12 ನಿಮಿಷ ಸಾಕು ಎನ್ನುತ್ತಾರೆ ಸಂಗಮೇಶ್.

500 ಕಿಮೀ ಸೈಕಲ್ ಸಂಚಾರ

ಮ್ಯಾರಥಾನ್ ಒಂದರಲ್ಲಿ ಭಾಗವಹಿಸಿದ್ದ ಸಂಗಮೇಶ್

ಸಂಗಮೇಶ್ ಅವರಿಗೆ ಈಗ 40 ವರ್ಷ ವಯಸ್ಸು. ಕಳೆದ ಸೆಪ್ಟಂಬರ್ ನಲ್ಲಿ ಅರಣ್ಯ ಇಲಾಖೆ ಹೆಮ್ಮಡಗಾದಿಂದ ಚಿಕ್ಕಮಗಳೂರಿಗೆ (500 ಕಿಮೀ) ಸೇವ್ ಎಲಿಫಂಟ್ ಕಾರಿಡಾರ್ ಎನ್ನುವ ಕಾರ್ಯಕ್ರಮದಡಿ ಸೈಕಲ್ ರ್ಯಾಲಿ ಆಯೋಜಿಸಿತ್ತು. ಅದರಲ್ಲಿ ಅವರು ಭಾಗವಹಿಸಿದ್ದರು. ಆಗ ಅವರಿಗೆ ಹೊಸ ಯೋಚನೆ ಬಂತು. ನಾವು ದಿನನಿತ್ಯದ ಕೆಲಸಗಳನ್ನೂ ಸೈಕಲ್ ನಲ್ಲೇ ಏಕೆ ಮಾಡಬಾರದು ಎಂದು. ವಾಪಸ್ ಬಂದ ನಂತರ ಇದನ್ನು ರೂಢಿಸಿಕೊಂಡಿದ್ದಾರೆ. ಹೊರಗಡೆ ಬ್ರ್ಯಾಂಚ್ ವಿಸಿಟ್ ಇದ್ದರೆ ಮಾತ್ರ ಕಚೇರಿ ವಾಹನ ಬಳಸುತ್ತಾರೆ.

ಪ್ರಗತಿವಾಹಿನಿ ಜೊತೆ ಮಾತನಾಡಿದ ಸಂಗಮೇಶ್, ಬೆಳಗಾವಿಯಲ್ಲಿ ಸೈಕಲ್ ಮೇಲೆ ಓಡಾಡಲು ಎಲ್ಲ ರೀತಿಯ ಅನುಕೂಲಗಳಿವೆ. ನಗರ ಬಹಳ ದೊಡ್ಡದೂ ಅಲ್ಲ. ನಗರದ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಗರಿಷ್ಟ 8-10 ಕಿಮೀ ಅಷ್ಟೆ. ವಾತಾವರಣವೂ ಉತ್ತಮವಾಗಿದೆ. ವಿಪರೀತ ಬಿಸಿಲಿಲ್ಲ. ಬಹಳ ಧೂಳೂ ಇಲ್ಲ. ಹಾಗಾಗಿ ಅತ್ಯಂತ ಖುಷಿಯಿಂದ ನಾನು ಓಡಾಡುತ್ತಿದ್ದೇನೆ ಎಂದರು.

ವಾಹನದಲ್ಲಿ ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ ಮನೆ ತಲುಪಿದರೂ ಕಚೇರಿಯ ಯೋಚನೆಯಿಂದ ಹೊರಗೆ ಬರುತ್ತಿರಲಿಲ್ಲ. ಮನೆಯವರೊಂದಿಗೆ ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ಈಗ ಹಾಗಲ್ಲ, ಸೈಕಲ್ ನಲ್ಲಿ ಮನೆ ತಲುಪುವಷ್ಟರಲ್ಲಿ ಕಚೇರಿಯ ಎಲ್ಲ ಸ್ಟ್ರೆಸ್ ನಿಂದ ಹೊರಬಂದಿರುತ್ತೇನೆ. ಮನೆಗೆ ತಲುಪುವಷ್ಟರಲ್ಲಿ ಹೊಸ ಉಲ್ಲಾಸ ಬಂದಿರುತ್ತದೆ. ಕಚೇರಿಯ ಎಲ್ಲ ಜಂಜಾಟವನ್ನೂ ಮರೆತಿರುತ್ತೇನೆ. ಹಾಗಾಗಿ ಹೆಂಡತಿಯೂ ತುಂಬಾ ಖುಷಿಯಾಗಿದ್ದಾಳೆ ಎನ್ನುತ್ತಾರೆ ಸಂಗಮೇಶ್.

ಪತ್ನಿಯದ್ದೂ ವಾಕ್ ಟು ಆಫೀಸ್

ಸಂಗಮೇಶ್ ಅವರ ಪತ್ನಿ ವೀಣಾ ಬಿದರಿ ಬೆಳಗಾವಿಯಲ್ಲಿ ಡಿಸ್ಟ್ರಿಕ್ಟ್ ಟ್ರೆಜರರಿ ಸಹಾಯಕ ನಿರ್ದೇಶಕಿ. ಅವರಿಗೂ ಕಚೇರಿಯ ವಾಹನ ಸೌಲಭ್ಯ ಬಳಸಿಕೊಳ್ಳಲು ಅವಕಾಶವಿದೆ. ಆದರೆ ಮನೆಯಿಂದ ಸುಮಾರು ಮೂರೂವರೆ ಕಿಮೀ ನಡೆದುಕೊಂಡೇ ಹೋಗುತ್ತಿದ್ದರು. ಇತ್ತೀಚೆಗೆ ಸಮಯದ ಹೊಂದಾಣಿಕೆ ಕಷ್ಟವಾಗಿರುವುದರಿಂದ ಹೋಗುವಾಗ ವಾಹನದಲ್ಲಿ ಹೋಗುತ್ತಾರೆ. ಬರುವಾಗ ನಡೆದುಕೊಂಡೇ ಬರುತ್ತಾರೆ.

ಈಗ ಹೆಂಡತಿಗೂ ಸೈಕಲ್ ಕೊಡಿಸುವ ಯೋಚನೆಯಲ್ಲಿ ಸಂಗಮೇಶ್ ಇದ್ದಾರೆ. ಅವರೂ ಸೈಕಲ್ ನಲ್ಲಿ ಹೋಗಿ ಬರಲು ತುಂಬಾ ಉತ್ಸುಕರಾಗಿದ್ದಾರೆ.

ಸೈಕಲ್ ಮೇಲೆ ಓಡಾಡಲು ಯಾವುದೂ ರಿಸ್ಕ್ ಇಲ್ಲ, ನಿಜವಾಗಿಯೂ ಬೇರೆ ವಾಹನಗಳಿಗಿಂತಲೂ ಸುರಕ್ಷಿತ. ನನಗೆ ಸ್ವಲ್ಪವೂ ಮುಜುಗರವಿಲ್ಲ ಎನ್ನುತ್ತಾರೆ ಸಂಗಮೇಶ್.

 

ಸಂಗಮೇಶ್ ಪಡನಾಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಸಂದೇಶ ಹೀಗಿದೆ –

A small n humble initiative by me:
I have started cycle to work …… its my contribution to reduce carbon footprint…..initially it feels little awkward as fellow colleagues will look at it differently…..whatever it is….i will continue to cycle to work……thank you all for the new awakening……
By Sangmesh Padnad, Division Manager, Canara Bank.

 

ಸಂಗಮೇಶ ಪಡನಾಡ ಅವರ ಒಡನಾಡಿಯಾಗಿರುವ ಡಾ.ಮಹಾಂತೇಶಬಿರಾದಾರ ಅವರು ನೀಡಿರುವ  ಪ್ರತಿಕ್ರಿಯೆ –

 ಈ ಸಂದೇಶವನ್ನು ಮಿತ್ರ ಸಂಗಮೇಶ ಪಡನಾಡ ನಿನ್ನೆ ಗ್ರೂಪ್ ನಲ್ಲಿ ಹಾಕಿದಾಗ ನಾನು ಪದೇಪದೆ ಓದಿದೆ.
ನಿಜವಾಗಿಯೂ ಇದು ಇವರು ಹಾಕಿದ್ದಾ? ಅಥವಾ ತಮಾಷೆಗಾಗಿ ಮಾತ್ರವೇ ಎಂದು ಗೊಂದಲದಲ್ಲಿದ್ದ ನಾನು ಕೊನೆಗೆ ಇಂದು ಅವರಿಗೆ ಕರೆ ಮಾಡಿ ಕನಫರ್ಮ್ ಮಾಡಿಕೊಂಡೆ.
ಅವರು ಹೇಳಿದ್ದು.. “ಇಲ್ಲ ಇನ್ನು ಮುಂದೆ ನಾನು ದಿನಾಲು ಕಚೇರಿಗೆ ಹೋಗಿ ಬರುವಾಗ ಸೈಕಲ್ ಬಳಸುತ್ತೇನೆ, ಮಧ್ಯಾಹ್ನ ಊಟಕ್ಕೂ ಮರಳಿ ಸೈಕಲ್ ಮೇಲೆ ಬಂದು ಹೋಗುತ್ತೇನೆ.
ತೀರಾ ಅನಿವಾರ್ಯವಾದಾಗ ಮಾತ್ರ ವಾಹನ ಬಳಸುತ್ತೇನೆ. ಇದು ನನ್ನ ದೃಢ ನಿರ್ಧಾರ” ಎಂದರು.
ವಾಹನಗಳನ್ನು ಬಳಸುವುದು ಹಿಂದೆ ಸಾಧನವಾಗಿದ್ದರೆ ಇಂದು ಅದು ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಟ್ಟಿದೆ.
ನಾವು ನಡೆದುಕೊಂಡು ಹೋದರೆ ಅಪಮಾನ ಎಂದು ನಮಗೆ ನಾವೇ ಭಾವಿಸುತ್ತೇವೆ, ಸೈಕಲ್ ಮೇಲೆ ಹೋದರಂತೂ ಇವನು  ದಿವಾಳಿಯಾಗಿದ್ದಾನೆ ಎನ್ನುತ್ತಾರೆ.
ನಮ್ಮ ಹಳ್ಳಿಕಡೆ ಹೊರಗಡೆ ಬಯಲು ಶೌಚಕ್ಕೆ ಹೋಗಲು ವಾಹನ ಬಳಸುತ್ತಾರೆ. ನಡೆದುಕೊಂಡು ಹೋಗಲು ಸಾಧ್ಯವಿರುವ ಎಲ್ಲ ಜಾಗಗಳಿಗೂ ನಾವು ವಾಹನಗಳನ್ನು ಬಳಸುತ್ತಿದ್ದೇವೆ. ಪರಿಣಾಮ ಗೊತ್ತಿಲ್ಲ, ಅದರ ಅರಿವು ನಮಗಿಲ್ಲ. ನಾವು ಬಳಸುವ ತೈಲ  ಹೊರಚೆಲ್ಲುವ ಮಾಲಿನ್ಯದಿಂದ
ಪರಿಸರದ ಮೇಲಿನ ಪ್ರಭಾವ ಏನಿದ್ದರೆ ನಮಗೇನು ಎಂಬ ಮನಸ್ಥಿತಿ ನಮ್ಮದು.
ಹಿಂದೆ ನಾನು ಡೆನ್ಮಾರ್ಕ್ ನ ರಾಜಧಾನಿ ಕೋಪನ್ ಹೆಗನ್ ನಗರಕ್ಕೆ ಹೋಗಿದ್ದಾಗ  ರಸ್ತೆ ತುಂಬ ಸೈಕಲ್ ನಲ್ಲಿ ಸಂಚರಿಸುವವರು ಸಾವಿರಾರು ಸಂಖ್ಯೆಯಲ್ಲಿದ್ದರು. ಅದನ್ನು ನೋಡಿದ ನನಗೆ ಆಶ್ಚರ್ಯ.
ಕೋಟು, ಬೂಟು ಹಾಕಿಕೊಂಡು ಬ್ಯಾಗು ನೇತಾಡಿಸಿಕೊಂಡು ಜಾಲಿಯಾಗಿ ಸೈಕಲ್ ಮೇಲೆ ಓಡಾಡುತ್ತಿದ್ದ ಪರಿಯನ್ನು ನಾನು ಅಚ್ಚರಿಯಿಂದ ಗಮನಿಸಿದ್ದೆ. ನಮ್ಮ ದೇಶದಲ್ಲಿ ಹಾಗೇನಾದರೂ ಮಾಡಿದರೆ ಹುಚ್ಚ ಎನ್ನುತ್ತಾರೆ ಎಂದು ತಮಾಷೆ ಮಾಡಿದ್ದೆ.
ಇದೀಗ ಅಂತಹ ಹುಚ್ಚುತನಕ್ಕೆ ನನ್ನ ಮಿತ್ರರು ಕೈಹಾಕಿದ್ದಾರೆ. ಕೆಲವರು ಇದನ್ನು ಗೇಲಿ ಮಾಡಬಹುದು. ಅವರು ಮಾತ್ರ  ಗಂಭೀರವಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ವಿಜಯಪುರ ಸೈನಿಕ ಶಾಲೆಯಲ್ಲಿ ಶಿಸ್ತಿನ ಶಿಕ್ಷಣ ಪೂರೈಸಿದ, ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಪರಿಸರದ ಪಾಠ ಕಲಿತುಕೊಂಡು ಸದ್ಯ ಬೆಳಗಾವಿಯ ಕೆನರಾ ಬ್ಯಾಂಕಿನ ವಿಭಾಗೀಯ ಅಧಿಕಾರಿಯಾಗಿರುವ ಮಿತ್ರ ಸಂಗಮೇಶ ಪಡನಾಡ ಇನ್ನು ಮುಂದೆ ತಮ್ಮ ಕಚೇರಿಗೆ ಸೈಕಲ್ ಮೇಲೆಯೇ ಅಲೆದಾಡುತ್ತಾರೆ.
ಸರಳವಾಗಿರುವ ಬದುಕನ್ನು ಆಸ್ತಿ, ಅಂತಸ್ತು, ಅಹಂಗಳ ಒಳಗೆ ಬಿದ್ದು ನಾವು ಜಟಿಲವಾಗಿಸಿದ್ದೇವೆ.
ಹುದ್ದೆ, ಅಧಿಕಾರ, ಹಣ ಎಲ್ಲಾ ಇದ್ದಾಗಲೂ ಸರಳತೆಗೆ ಮಾದರಿಯಾಗುವ ಮೂಲಕ ಪರಿಸರ ಪ್ರೀತಿ ಮೆರೆದಿರುವ ಮಿತ್ರ ಸಂಗಮೇಶ್ ಅವರಿಗೆ ಅಭಿನಂದನೆಗಳು.
-ಡಾ.ಮಹಾಂತೇಶಬಿರಾದಾರ

ಸಂಗಮೇಶ್ ಅವರ ಈ ಸಾಹಸವನ್ನು ನೀವೂ ಪ್ರೋತ್ಸಾಹಿಸಿ. ಅವರೊಂದಿಗೆ ಮಾತನಾಡಲು ಮೊಬೈಲ್ ಸಂಖ್ಯೆ – 9620152609.

ಪ್ರಗತಿವಾಹಿನಿಗೆ ನಿಮ್ಮ ಪ್ರತಿಕ್ರಿಯೆ ಕಳಿಸಿ – 8197712235 (ವಾಟ್ಸಪ್).

 

( ಈ ಸುದ್ದಿಯನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ಶೇರ್ ಮಾಡಿ. ಬೇರೆಯವರಿಗೂ ಪ್ರೇರಣೆಯಾಗಲಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button