Kannada NewsKarnataka NewsLatestPolitics

*ಜೈಲಿನಲ್ಲಿದ್ದಾಗಲೇ ಸಿಎಂ ಆಗುವ ಸಂಕಲ್ಪ ಮಾಡಿದ್ದೆ*: *ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ನನ್ನ ಬದುಕು ತೆರೆದ ಪುಸ್ತಕ. ನಾನು ಜೈಲಿನಲ್ಲಿದ್ದಾಗಲೇ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗಬೇಕು ಎಂದು ಯೋಚಿಸಿದ್ದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ಲೇಖಕಿ ವೈ.ಎನ್. ರಮ್ಯಾ ಬರೆದಿರುವ ಡಿ.ಕೆ. ಶಿವಕುಮಾರ್ ಕುರಿತಾದ ‘ಚಲಿಸುವ ಬಂಡೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿ ಸ್ಥಾನಕ್ಕೇರಲು ನಡೆಸಿದ ಹೋರಾಟ ಹಾಗೂ ಎದುರಿಸಿದ ಸವಾಲುಗಳನ್ನು ನೆನಪಿಸಿಕೊಂಡಿದ್ದಾರೆ..

35 ವರ್ಷಗಳ ಹಿಂದೆಯೇ ಜ್ಯೋತಿಷಿಯೊಬ್ಬರು ತಾನು ಮುಖ್ಯಮಂತ್ರಿ ಆಗುವ ಬಗ್ಗೆ ಹೇಳಿದ್ದರು. ತಾನು ಸುಮ್ಮನೆ ಈ ಸ್ಥಾನಕ್ಕೆ ಬಂದಿಲ್ಲ. ಹಲವು ನಾಯಕರನ್ನು ಬೆಳೆಸಿಕೊಂಡು ಈ ಹಂತ ತಲುಪಿದ್ದೇನೆ. ಜೈಲಿನಲ್ಲಿದ್ದಾಗಲೇ ಪಕ್ಷವನ್ನು ಅಧಿಕಾರಕ್ಕೆ ತಂದು ತಾನು ಮುಖ್ಯಮಂತ್ರಿ ಆಗುವ ಯೋಜನೆ ರೂಪಿಸಿದ್ದೆ ಎಂದು ತಮ್ಮ ರಾಜಕೀಯ ಸಂಕಲ್ಪವನ್ನು ವಿವರಿಸಿದರು.

ಬಂಗಾರಪ್ಪ, ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ತಮ್ಮ ಪಾತ್ರ ಏನಿತ್ತು ಎಂಬುದರ ಕುರಿತು ಸಾಕಷ್ಟು ಹೇಳುವುದಿದೆ. ಮುಂದೊಂದು ದಿನ ಅದನ್ನು ದಾಖಲಿಸುವುದಾಗಿ ಹೇಳುವ ಮೂಲಕ ಕುತೂಹಲ ಮೂಡಿಸಿದರು.

ತಾನು ಮುಖ್ಯಮಂತ್ರಿ ಆಗಿರುವುದನ್ನು ಪ್ರತಿಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ತಮ್ಮ ವಿರುದ್ಧ ನಕಾರಾತ್ಮಕ ವಿಷಯಗಳನ್ನು ಹುಡುಕಲಾಗುತ್ತಿದೆ. ಕೆಲವರಿಗೆ ಸುಳ್ಳೇ ಮನೆದೇವರಾಗಿದೆ. ಆದರೆ ತಾನು ತಾಳ್ಮೆಯಿಂದ ಇದ್ದು, ಯಾರಿಗೂ ಮೋಸ ಮಾಡುವ ಉದ್ದೇಶ ಹೊಂದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ತಾನು ಎಂದಿಗೂ ಕೇಡು ಬಯಸಿಲ್ಲ, ಮುಂದೆಯೂ ಬಯಸುವುದಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸರ್ಕಾರ ರಚಿಸಿದ್ದ ಸಂದರ್ಭದಲ್ಲೂ ಅವರಿಗೆ ಕೆಡುಕು ಬಯಸಿರಲಿಲ್ಲ. ಆದರೆ ಈಗ ಕುಮಾರಸ್ವಾಮಿ ಅವರಿಗೆ ತಮ್ಮನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.

ತಾನು ಮುಖ್ಯಮಂತ್ರಿ ಆಗಿದ್ದರೂ ತನ್ವೀರ್ ಸೇಠ್ ಅವರನ್ನು ಸಚಿವರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ನೋವು ಮತ್ತು ವ್ಯಥೆ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಅದೃಷ್ಟದ ಮೇಲೆ ನಂಬಿಕೆ ಇಡುವ ಬದಲು ಶ್ರಮದ ಮೇಲೆ ನಂಬಿಕೆ ಇಡಬೇಕು. ಈ ಸ್ಥಾನಕ್ಕೆ ಬರಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಎಲ್ಲರೂ ತನ್ನಂತೆಯೇ ಯಶಸ್ವಿಯಾಗಲು ಸಾಧ್ಯವಿಲ್ಲ. ಆಡಳಿತದಲ್ಲಿ ಯಾರಿಗೂ ಕೆಡುಕು ಬಯಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇನ್ನೂ ತಮ್ಮ ರಾಜಕೀಯ ಜೀವನದಲ್ಲಿ ಎದುರಿಸಿದ ಆರೋಪಗಳು, ಅವಮಾನಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗ ಮನಬಿಚ್ಚಿ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ತಮ್ಮ ಥಿಯೇಟರ್ ವಿರುದ್ಧ ಕೇಳಿಬಂದಿದ್ದ ಗಂಭೀರ ಆರೋಪಕ್ಕೂ ತಿರುಗೇಟು ನೀಡಿದ್ದಾರೆ.

ತಮ್ಮ ಥಿಯೇಟರ್‌ನಲ್ಲಿ ಬ್ಲೂಫಿಲಂ ತೋರಿಸಲಾಗುತ್ತಿತ್ತು ಎಂದು ಕೆಲವರು ಆರೋಪಿಸಿದ್ದರು. ಆದರೆ, ಆ ಥಿಯೇಟರ್‌ಗೆ ಇಂದಿರಾಗಾಂಧಿ ಅವರ ಹೆಸರಿಟ್ಟಿದ್ದೆ. ಅಂತಹ ಸ್ಥಳದಲ್ಲಿ ಆ ರೀತಿಯ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಹಳೆಯ ಆರೋಪಕ್ಕೆ ತಿರುಗೇಟು ನೀಡಿದರು.

“ನನ್ನ ಬದುಕು ತೆರೆದ ಪುಸ್ತಕ. ಕೆಲವರು ನನ್ನನ್ನು ರೌಡಿ, ಚಾಕು ಚೂರಿ ಎಂದು ಕರೆದರು. ಈಗ ಏನೆಂದು ಕರೆಯುತ್ತಾರೆ ಹೇಳಿ?” ಎಂದು ಪ್ರಶ್ನಿಸಿದ ಅವರು, ತಮ್ಮ ಶೈಕ್ಷಣಿಕ ಜೀವನದ ಘಟನೆಯೊಂದನ್ನೂ ನೆನಪಿಸಿಕೊಂಡರು.

48ನೇ ವಯಸ್ಸಿನಲ್ಲಿ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದ ದಿನ ತಮ್ಮ ಜೀವನದ ಅತ್ಯಂತ ಸಂತೋಷದ ಹಾಗೂ ಐತಿಹಾಸಿಕ ದಿನವಾಗಿತ್ತು. ಪದವಿ ಪ್ರಮಾಣಪತ್ರ ಪಡೆಯಲು ವೇದಿಕೆ ಹತ್ತಲು ಎಲ್ಲರೂ ಪ್ರಯತ್ನಿಸಿದರೂ, ಅಂದು ಬಿಜೆಪಿಯ ಶಂಕರಮೂರ್ತಿ ಅವರು ವೇದಿಕೆ ಹತ್ತಲು ಅವಕಾಶ ನೀಡದೆ ಅವಮಾನಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ತಮಗೆ ಸನ್ಮಾನಗಳಿಂದ ದೂರವಿರುವುದೇ ಇಷ್ಟ. ತಮ್ಮ ಬಗ್ಗೆ ಪುಸ್ತಕ ಬರೆಯುವ ವ್ಯಾಮೋಹವೂ ಇಲ್ಲ. ಜನರು ‘ಬಂಡೆ’ ಸೇರಿದಂತೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಆದರೆ ತಾನು ಯಾವಾಗಲೂ ಡಿ.ಕೆ. ಶಿವಕುಮಾರ್ ಅಷ್ಟೇ ಎಂದು ಹೇಳಿದರು.

Related Articles

Back to top button