ಡಿ.ಕೆ.ಶಿವಕುಮಾರ ಇಡಿ ಕಸ್ಟಡಿ ಇಂದು ಅಂತ್ಯ: ಮುಂದೇನು?

ಡಿ.ಕೆ.ಶಿವಕುಮಾರ ಇಡಿ ಕಸ್ಟಡಿ ಇಂದು ಅಂತ್ಯ: ಮುಂದೇನು?

ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರ ಕಸ್ಟಡಿ ಇಂದು ಅಂತ್ಯವಾಗಲಿದೆ. ಕಳೆದ 10 ದಿನಗಳಿಂದ ಅವರು ಜಾರಿನಿರ್ದೇಶನಾಲಯದ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದರು.

ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದು, ನ್ಯಾಯಾಲಯದ ಮುಂದಿನ ಆದೇಶ ಕುತೂಹಲ ಮೂಡಿಸಿದೆ. ಪುನಃ ಇಡಿ ಕಸ್ಟಡಿಗೆ ನೀಡಲಾಗುತ್ತದೆಯೋ, ನ್ಯಾಯಾಂಗ ಬಂಧನ ವಿಧಿಸಲಾಗುತ್ತದೆಯೋ ಅಥವಾ ಜಾಮೀನು ನೀಡಲಾಗುತ್ತದೆಯೋ ಎನ್ನುವ ಪ್ರಶ್ನೆಗೆ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಉತ್ತರ ಸಿಗಲಿದೆ. ಇಲ್ಲಿಯವರೆಗಿನ ಇಡಿ ವಿಚಾರಣೆಯ ಸ್ಥಿತಿಗತಿ ಅವಲೋಕಿಸಿ ನ್ಯಾಯಾಲಯ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ.

ನಿನ್ನೆ ಇಡಿ ಡಿ.ಕೆ.ಶಿವಕುಮಾರ ಅವರ ಮಗಳ ವಿಚಾರಣೆ ನಡೆಸಿದ್ದು, ಇಂದೂ ಕೂಡ ಮುಂದುವರಿಯುವ ಸಾಧ್ಯತೆ ಇದೆ. ಡಿ.ಕೆ.ಶಿವಕುಮಾರ ಪತ್ನಿ, ತಾಯಿ ಮತ್ತು ಕೆಲವು ಹತ್ತಿರದ ಸಂಬಂಧಿಗಳ ವಿಚಾರಣೆಯನ್ನೂ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಹಲವಾರು ಅವರ ಒಡನಾಡಿಗಳ ಹೆಸರೂ ವಿಚಾರಣೆಯ ಪಟ್ಟಿಯಲ್ಲಿದೆ ಎನ್ನಲಾಗಿದೆ.

ಜಾತಿ -ರಾಜಕಾರಣ

ಡಿ.ಕೆ.ಶಿವಕುಮಾ ಬಂಧನಕ್ಕೆ ಈಗಾಗಲೆ ರಾಜಕೀಯ ಮತ್ತು ಜಾತಿ ವಿಷಯ ಕೂಡ ತಗಲುಹಾಕಿಕೊಂಡಿದೆ. ಬಿಜೆಪಿ ಉದ್ದೇಶಪೂರ್ವಕವಾಗಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಅನೇಕ ಕಡೆ ಪ್ರತಿಭಟನೆಗಳು ಕೂಡ ನಡೆದಿವೆ.

ಜೊತೆಗೆ ಡಿ.ಕೆ.ಶಿವಕುಮಾರ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಒಕ್ಕಲಿಗ ಸಮುದಾಯದವರೂ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಒಕ್ಕಲಿಗರ ಸುದ್ದಿಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಸಮಾಜದ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ ವಿಚಾರಣೆ ನಡೆಸುವುದಕ್ಕೆ ವಿರೋಧವಿಲ್ಲ. ಆದರೆ ಬಂಧನ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲ ಆರೋಪಗಳನ್ನೂ ಅಲ್ಲಗಳೆದಿರುವ ಬಿಜೆಪಿ, ತನಗೂ ಡಿ.ಕೆ.ಶಿವಕುಮಾರ ವಿಚಾರಣೆಗೂ ಯಾವುದೇ ಸಂಬಂಧವಿಲ್ಲ ಎಂದಿದೆ.

ಒಟ್ಟಾರೆ ಡಿ.ಕೆ.ಶಿವಕುಮಾರ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದ್ದು, ಇದು ಇನ್ನೂ ಯಾವ್ಯಾವ ತಿರುವು ಪಡೆಯುತ್ತದೆ? ಮತ್ತೆ ಯಾರ್ಯಾರು ವಿಚಾರಣೆಗೆ ಒಳಪಡಲಿದ್ದಾರೆ ಕಾದು ನೋಡಬೇಕಿದೆ.

ಈ ಮಧ್ಯೆ, ನವದೆಹಲಿಯಲ್ಲಿ ಡಿ.ಕೆ.ಶಿವಕುಮಾರ ಅವರ ಅಪಾರ ಅಭಿಮಾನಿಗಳು ಜಮಾಯಿಸುತ್ತಿದ್ದು, ಭಾರಿ ಪ್ರಮಾಣದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿ.ಕೆ.ಶಿವಕುಮಾರ ಅವರಿಗೆ ಜಾಮೀನು ಸಿಕ್ಕಿದರೆ ಅವರೆಲ್ಲ ಸಂಭ್ರಮ ಆಚರಿಸುವ ಸಾಧ್ಯತೆ ಇದೆ. ಜಾಮೀನು ಸಿಗದೆ ಹೋದಲ್ಲಿ ಗಲಾಟೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button