ಇಂದೇ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ವಿಚಾರಣೆಗೆ ಇಂದೇ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ.
ಇಂದು ಮಧ್ಯಾಹ್ನ 1 ಗಂಟೆಗೆ ನವದೆಹಲಿಯಲ್ಲಿ ವಿಚಾರಣೆ ಎದುರಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಆದರೆ ಪೂರ್ವನಿಗದಿತ ಕೆಲವು ಕಾರ್ಯಕ್ರಮವಿರುವುದರಿಂದ ಮತ್ತು ವಕೀಲರನ್ನು ಸಂಪರ್ಕಿಸಬೇಕಿರುವುದರಿಂದ ಹಾಜರಾಗಲು ಸ್ವಲ್ಪ ತಡವಾಗಲಿದೆ ಎಂದು ಶಿವಕುಮಾರ ತಿಳಿಸಿದ್ದಾರೆ.
ನಾನೇನು ಕೊಲೆ ಮಾಡಿಲ್ಲ, ಅತ್ಯಾಚಾರ ಮಾಡಿಲ್ಲ. ವಿಚಾರಣೆಗೆ ಹಾಜರಾಗುತ್ತೇನೆ ಎಂದು ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ. ಕಳೆದ 2 ವರ್ಷದಿಂದ ಬೇನಾಮಿ ಆಸ್ತಿ ತನಿಖೆ ಹೆಸರಲ್ಲಿ ತಮ್ಮ ರಕ್ತ ಹೀರಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
84 ವರ್ಷದ ತಾಯಿಯ ಆಸ್ತಿಯನ್ನೂ ಬೇನಾಮಿ ಆಸ್ತಿ ಹೆಸರಿಗೆ ಸೇರಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ನನಗಿದೆ. ಯಾರಿಗೂ ಮೋಸ ಮಾಡಿಲ್ಲ. ಉದ್ದೇಶಪೂರ್ವಕವಾಗಿ ತಮ್ಮನ್ನು ಹಿಂಸಿಸಲಾಗುತ್ತಿದೆಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ ನವದೆಹಲಿಗೆ
ಜಾರಿ ನಿರ್ದೇಶನಾಲಯದ ನೋಟೀಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಶಿವಕುಮಾರ ಇಂದು ಮಧ್ಯಾಹ್ನ ನವದೆಹಲಿಗೆ ತೆರಳಲಿದ್ದಾರೆ. ಕುಟುಂಬ ಸಮೇತ ಅವರು ದೆಹಲಿಗೆ ತೆರಳುವುದಕ್ಕೆ ವಿಮಾನ ಟಿಕೆಟ್ ಪಡೆದಿದ್ದಾರೆ ಎಂದು ಗಾತ್ತಾಗಿದೆ.
ವಿಚಾರಣೆ ನಡೆಸಲಿರುವ ಜಾರಿ ನಿರ್ದೇಶನಾಲಯ ಅವರನ್ನೂ ಬಂಧಿಸಲೂ ಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಹಾಜರಾಗುವ ಮುನ್ನವೇ ಮೇಲ್ಮನವಿ ಸಲ್ಲಿಸಲು ಮತ್ತು ನಿರೀಕ್ಷಣಾ ಜಾಮೀನು ಪಡೆಯಲು ಅವರು ಪ್ರಯತ್ನ ನಡೆಸುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ