
ವಿಮಾ ಪಾವತಿ ಅವಧಿ ಆಗಸ್ಟ್ 20 ರವರೆಗೆ ವಿಸ್ತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅವಧಿಯನ್ನು ವಿಸ್ತರಣೆ ಮಾಡಲು ಕೇಂದ್ರ ಹಣಕಾಸು ಸಚಿವರು ಒಪ್ಪಿಗೆ ನೀಡಿದ್ದು, ಆ ಪ್ರಕಾರ ಬ್ಯಾಂಕುಗಳು ರೈತರಿಂದ ಕಂತು ಭರಿಸಿಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕುಗಳು ಹಾಗೂ ವಿಮಾ ಕಂಪೆನಿಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ವಿಮಾ ಪಾವತಿ ಅವಧಿಯನ್ನು ಆಗಸ್ಟ್ 20 ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆ ಪ್ರಕಾರ ಬ್ಯಾಂಕುಗಳು ಹಾಗೂ ಬೆಳೆವಿಮಾ ಕಂಪನಿಗಳು ರೈತರಿಂದ ಕಂತುಗಳನ್ನು ಭರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ರೈತರಿಗೆ ಬೆಳೆವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ಕಾಯ್ದೆ ಕಟ್ಟಳೆಗಳಿಗೆ ಕಟ್ಟು ಬೀಳದೆ ಮಾನವೀಯತೆ ಆಧಾರದ ಮೇಲೆ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರವಾಹ ಹಾಗೂ ಮಳೆಯಿಂದಾಗಿ ಸಂಕಷ್ಟದಲ್ಲಿರುವ ರೈತರು, ನೇಕಾರರು, ಸಣ್ಣ ಕೈಗಾರಿಕಾ ಘಟಕಗಳು ಸೇರಿದಂತೆ ಯಾರೇ ಆಗಲಿ ವಿಮಾ ಪರಿಹಾರ ಕೋರಿದಾಗ ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ಸಚಿವ ಅಂಗಡಿ ಅವರು ತಿಳಿಸಿದರು.
31 ರವರೆಗೆ ಅವಧಿ ವಿಸ್ತರಣೆಗೆ ಮನವಿ:
ಅನೇಕ ಗ್ರಾಮಗಳು ಹಾಗೂ ಬ್ಯಾಂಕುಗಳು ಕೂಡ ಮುಳುಗಡೆಯಾಗಿದ್ದರಿಂದ ಬೆಳೆವಿಮೆ ಕಂತು ಪಾವತಿಸುವ ಅವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದರೆ ಪ್ರವಾಹ ಬಾಧಿತ ಪ್ರದೇಶಗಳಲ್ಲಿನ ರೈತರು ಹಾಗೂ ಬ್ಯಾಂಕುಗಳಿಗೂ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.
ವಿಸ್ತರಣೆ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಆದೇಶ ಬಾರದಿರುವುದರಿಂದ ಬ್ಯಾಂಕುಗಳು ಗೊಂದಲದಲ್ಲಿವೆ. ಆದಾಗ್ಯೂ ಈ ಬಗ್ಗೆ ಸ್ಪಷ್ಟನೆ ಪಡೆಯುವುದಾಗಿ ತಿಳಿಸಿದರು. ಬಹುತೇಕ ಬ್ಯಾಂಕಿನ ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ನೇಕಾರರು ಕೂಡ ಮಗ್ಗಗಳು ಮತ್ತು ಕಚ್ಚಾಸಾಮಗ್ರಿಗಳನ್ನು ಕಳೆದುಕೊಂಡು ಕಷ್ಟದಲ್ಲಿದ್ದಾರೆ ಅವರಿಗೆ ನೀಡಬೇಕಾದ ವಿಮಾ ಪರಿಹಾರಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅದೇ ರೀತಿ ಸಣ್ಣ ಕೈಗಾರಿಕೆಗಳು, ರೈತರು ಖರೀದಿಸಿರುವ ಟ್ರ್ಯಾಕ್ಟರ್ ವಿಮೆಗಳನ್ನು ಕೂಡ ಪಾವತಿಸಬೇಕು ಎಂದರು.
ಪ್ರವಾಹಕ್ಕೆ ಸಿಲುಕಿ ಜೀವರಕ್ಷಣೆಗೆ ಮನೆಗಳನ್ನು ತೊರೆದಿರುವ ರೈತರು ಹಾಗೂ ಇತರರು ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಗಳನ್ನು ಕಳೆಕೊಂಡಿರುವುದರಿಂದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಕೂಡ ತಮ್ಮ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಮರುಪಾವತಿಗೆ ಒತ್ತಾಯಿಸದಂತೆ ಡಿಸಿ ಎಚ್ಚರಿಕೆ:
ರೈತರು ಈಗಾಗಲೇ ಅನೇಕ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು ಮರುಪಾವತಿಸುವಂತೆ ಯಾವುದೇ ಕಾರಣಕ್ಕೂ ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ರೈತರು ಸೇರಿದಂತೆ ಇತರೆ ಸಾಲಗಾರರಿಂದ ಸ್ವಾಧೀನಪಡಿಸಿಕೊಂಡಿರುವ ಆಸ್ತಿಪಾಸ್ತಿಗಳ ಹರಾಜು ಮಾಡುವುದಾಗಲಿ ಅಥವಾ ಹೊಸದಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ತಿಳಿಸಿದರು.
ಪರಿಹಾರ ಚೆಕ್ ಗಳನ್ನು ಅಕೌಂಟ್ ಪೇಯಿ ಚೆಕ್ ನೀಡಲಾಗಿದ್ದು, ಅಂತಹ ಚೆಕ್ ಗಳನ್ನು ತಕ್ಷಣ ನಗದೀಕರಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಯಾವುದೇ ರೀತಿಯ ವಿಮೆ ಅಥವಾ ಪರಿಹಾರ ಹಣವನ್ನು ಸಾಲ ಪಾವತಿಗೆ ತೆಗೆದುಕೊಂಡರೆ ಅಂತಹ ಬ್ಯಾಂಕುಗಳ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳು ಪ್ರವಾಹದಲ್ಲಿ ಪಠ್ಯಪುಸ್ತಕ, ಆಧಾರ್ ಕಾರ್ಡ, ಪಾಸ್ ಬುಕ್ ಮತ್ತಿತರ ದಾಖಲೆಗಳನ್ನು ಕಳೆದುಕೊಂಡಿದ್ದು, ಅವರ ವಿದ್ಯಾರ್ಥಿ ವೇತನ ಕೂಡ ಖಾತೆಗೆ ಜಮೆಯಾಗುವುದರಿಂದ ಅದನ್ನು ನಗದೀಕರಿಸಲು ಬ್ಯಾಂಕುಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮಲಕ್ಷ್ಮಣ ಅರಸಿದ್ದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ