ಹುಟ್ಟಿದ್ದು ಶಿರಸಿಯಲ್ಲಿ, ಬೆಳೆದಿದ್ದು ಬೆಳಗಾವಿಯಲ್ಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ರಾಷ್ಟ್ರಾದ್ಯಂತ ನಿಧಿ ಸಮರ್ಪಣಾ ಕಾರ್ಯವೂ ಸಾಗಿದೆ.
ಇದೀಗ ರಾಮಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಹೊಣೆಯನ್ನು ವಿಶ್ವಹಿಂದೂ ಪರಿಷತ್ ಸಂಘಟನಾ ಮಂತ್ರಿ ಗೋಪಾಲಜಿ ಅವರಿಗೆ ವಹಿಸಲಾಗಿದೆ. ಅವರು ಅಯೋಧ್ಯೆಯಲ್ಲೇ ಉಳಿದು ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಇಷ್ಟಕ್ಕೂ ಗೋಪಾಲಜಿ ಯಾರು?
ಗೋಪಾಲಜಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಹೊಸ್ತೋಟದ ನಾಗರಕಟ್ಟೆ ಮನೆತನದ ಮಹಾಬಲೇಶ್ವರ ಭಟ್ ಮತ್ತು ಅನ್ನಪೂರ್ಣ ದಂಪತಿಯ 6ನೇ ಪುತ್ರ.
ಪಿಯುಸಿ ಓದುತ್ತಿರುವಾಗಲೇ ಆರ್ ಎಸ್ಎಸ್ ಶಾಖೆ ನಡೆಸುತ್ತಿದ್ದ ಗೋಪಾಲಜಿ, ಬೆಳಗಾವಿಯ ಆರ್ ಎಲ್ ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಎಂಎಸ್ ಸಿಯಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣರಾದ ಅವರಿಗೆ ಅಮೇರಿಕಾದ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಆಫರ್ ಬಂದಿತ್ತು. ಆದರೆ ಅಲ್ಲಿಗೆ ತೆರಳದೆ ವಿಶ್ವಹಿಂದೂ ಪರಿಷತ್ ಪೂರ್ಣಾವಧಿ ಕಾರ್ಯಕರ್ತನಾಗಿ ಸೇವೆ ಆರಂಭಿಸಿದರು. ಕಳೆದ 37 ವರ್ಷದಿಂದಲೂ ವಿಶ್ವಹಿಂದೂ ಪರಿಷತ್ ನಲ್ಲಿ ಪೂರ್ಣಾವಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
1984ರಲ್ಲಿ ಮೈಸೂರು ತಾಲೂಕು ಪ್ರಚಾರಕರಾಗಿ ಸೇವೆ ಆರಂಭಿಸಿ, ನಂತರ ಬೆಳಗಾವಿ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. ಗುಲಬರ್ಗಾ ವಿಭಾಗ ಪ್ರಚಾರಕರಾಗಿ, ಉತ್ತರ ಕರ್ನಾಟಕ ಪ್ರಾಂತ (17 ಜಿಲ್ಲೆ) ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಹುಬ್ಬಳ್ಳಿಯಲ್ಲಿ 20 ಸಾವಿರ ಸ್ವಯಂ ಸೇವಕರನ್ನು ಸೇರಿಸಿ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದರು.
2017ರಲ್ಲಿ ಉಡುಪಿಯಲ್ಲಿ 2500 ಸಂತರ ಸಮಾವೇಶ, ತುಮಕೂರಿನ ಸಿದ್ದಗಂಗಾ ಮಠದಲ್ಲಿ 500 ಮಠಾಧೀಶರ ಚಿಂತನ ಸಭೆಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು.
5 ವರ್ಷದಿಂದ ವಿಶ್ವಹಿಂದೂ ಪರಿಷತ್ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಂಘಟನಾ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಚೆಗೆ ಅವರನ್ನು ಗುಜರಾತ್, ರಾಜಸ್ಥಾನ ರಾಜ್ಯಗಳ ಒಟ್ಟೂ 6 ಪ್ರಾಂತಗಳ ಸಂಘಟನಾ ಮಂತ್ರಿಯಾಗಿ ನೇಮಕಮಾಡಲಾಗಿತ್ತು. ಗುಜರಾತ್ ಒಂದೇ ರಾಜ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ 394 ಕೋಟಿ ರೂ. ನಿಧಿ ಸಂಘ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಇದೀಗ ಗೋಪಾಲಜಿ ಅವರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪೂರ್ಣಗೊಳ್ಳುವವರೆಗೂ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಬೆಳಗಾವಿಯ ಕ್ರೀಸ್ ವೈಸ್ ಟೇಲರ್ ಮತ್ತು ರೆಡಿಮೇಡ್ ಅಂಗಡಿಯ ಮಾಲಿಕ, ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಗೋಪಾಲಜಿ ಅವರ ಸಹೋದರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ