Kannada NewsLatest

ಡಾಕ್ಟರ್ ಪ್ರಿಯಾಂಕಾ ರೆಡ್ಡಿ ಪ್ರಕರಣ: ಬೆಳಗಾವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಂದು ಸಂಜೆ ಬೆಳಗಾವಿಯ ವೈದ್ಯಕೀಯ ಕಾಲೇಜ್ ಮುಂದೆ ಸೇರಿದ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಎಐಡಿಎಸ್ ಓ ನೇತೃತ್ವದಲ್ಲಿ ಮೊನ್ನೆ ಹೈದರಾಬಾದ್ ನಲ್ಲಿ ನಡೆದ ಡಾಕ್ಟರ್ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ  ಹಾಗೂ ದೇಶದಲ್ಲಿ ಸರಣಿಯಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಬರ್ಬರ ದಾಳಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿಎಸ್ ಓ ವಿದ್ಯಾರ್ಥಿ ಸಂಘಟನೆಯ ಮಹಾಂತೇಶ್, ಸರಣಿಯಾಗಿ ನಡೆಯುತ್ತಿರುವ ಈ ಘಟನೆಗಳು ನಿಜಕ್ಕೂ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಭಾವನೆಯನ್ನು ಸೃಷ್ಟಿಸಿದೆ. ಎಲ್ಲಾ ಘಟನೆಗಳು ಕೂಡ ಸಮಾಜದಲ್ಲಿ  ಸಾಂಸ್ಕೃತಿಕ, ನೈತಿಕ ಅಧಃಪತನ ವನ್ನು ಪ್ರತಿಬಿಂಬಿಸುತ್ತಿವೆ. ಒಂದೆಡೆಗೆ ವಿದ್ಯಾರ್ಥಿ ಯುವ ಜನರ ಮೇಲೆ ಎಡಬಿಡದೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಿಂದ ಅಶ್ಲೀಲತೆಯ ದಾಳಿ ನಡೆಯುತ್ತಿದ್ದರೆ, ಇನ್ನೊಂದು ಕಡೆಗೆ ಡ್ರಗ್ಸ್ ಮಧ್ಯಪಾನ ಮುಂತಾದವುಗಳಿಗೆ ಯುವಜನತೆ ಬಲಿಯಾಗುತ್ತಿದ್ದಾರೆ ಎಂದರು.

ಮತ್ತೊಂದು ಕಡೆ ಸಮಾಜದಲ್ಲಿನ ಆದರ್ಶಗಳ ಕೊರತೆ ಯುವಜನತೆಯನ್ನು ದಾರಿ ತಪ್ಪಿಸುತ್ತವೆ. ಹಿಂದೆ  ಹೊಸ ಮೌಲ್ಯ ವೈಜ್ಞಾನಿಕ ಚಿಂತನೆಗಳನ್ನು ಹೊತ್ತು ತಂದ ನವೋದಯ ಕಾಲದಲ್ಲಿ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್, ಜ್ಯೋತಿಬಾ ಪುಲೆ ಮುಂತಾದವರು ಸಮಾಜವನ್ನು ಮುನ್ನಡೆಸಿದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಖುದಿರಾಮ್ ಬೋಸ್, ನೇತಾಜಿ, ಭಗತ್ ಸಿಂಗ್ ರಂತಹ ಧೀಮಂತ ನಾಯಕರು ಯುವಜನರ ಮೇಲೆ ಪ್ರಭಾವ ಬೀರಿದ್ದರು. ಆದರೆ ಇವತ್ತು ಅಂತಹ ನಾಯಕರ ಕೊರತೆ ಇದೆ. ನಮ್ಮನ್ನಾಳುವ ಬಹುತೇಕ ರಾಜಕಾರಣಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎಂದು ಅಭಿಪ್ರಾಯಪಟ್ಟರು.

ಈ ವಾತಾವರಣ ಬದಲಾಯಿಸಲು ಕಠಿಣ ಕಾನೂನು ಕ್ರಮ, ಅಶ್ಲೀಲತೆಯ ನಿಷೇಧ ಹಾಗೂ ಮುಖ್ಯವಾಗಿ ಪರ್ಯಾಯ ಸಾಂಸ್ಕೃತಿಕ ಚಳುವಳಿಯ ಅಗತ್ಯತೆ ಇದೆ ಎಂದು ಹೇಳಿದರು.

ನೆರೆದಿದ್ದ ವಿದ್ಯಾರ್ಥಿಗಳು ದೀಪ ಬೆಳಗುವುದರ ಮೂಲಕ ಸಾಂಸ್ಕೃತಿಕ ಚಳುವಳಿಯನ್ನು ಮುಂದುವರೆಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಜಿಎಸ್ ಸನ್ಮತಿ, ಪ್ರಣವ್ ರಾಹುಲ್, ನಿಖಿಲ್, ಶಿವಪ್ರಸಾದ್, ಕೃಷ್ಣ, ರಾಜೀವ್, ಅಕ್ಷತಾ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button