ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
6ಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಆಟೋದಲ್ಲಿ ಕರೆದೊಯ್ಯದಂತೆ ಬೆಳಗಾವಿಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ ಚಾಲಕರು 3 ದಿನಗಳ ಮುಷ್ಕರ ಹೂಡಿದ್ದಾರೆ.
ಗುರುವಾರದಿಂದ 3 ದಿನ ಶಾಲಮಕ್ಕಳನ್ನು ಕರೆದೊಯ್ಯದಿರಲು ನಿರ್ಧರಿಸಿದ್ದಾರೆ. ಅಲ್ಲದೆ, ಕಡಿಮೆ ಮಕ್ಕಳನ್ನು ಒಯ್ಯಿರಿ, ಹೆಚ್ಚಿನ ಹಣ ಪಡೆಯಿರಿ ಎಂದು ನಮಗೆ ಪೊಲೀಸರೇ ಹೇಳಿದ್ದಾರೆ ಎಂದು ಆಟೋ ಚಾಲಕರು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ನಾವು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಬೆಳಗಾವಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಚ್ಚ ನ್ಯಾಯಾಲಯ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ಸಂಬಂಧಪಟ್ಟ ಇಲಾಖೆಗಳಾದ ಪೊಲೀಸ್, ಸಾರಿಗೆ, ಶಿಕ್ಷಣ, ಕಾರ್ಮಿಕ, ಲೋಕೋಪಯೋಗಿ ಇಲಾಖೆಗಳಿಗೆ ಸೂಚಿಸಿರುತ್ತದೆ. ಸಹಭಾಗಿತ್ವ ಮತ್ತು ಜಂಟಿ ಕಾರ್ಯಾಚರಣೆಗಳೊಂದಿಗೆ ನ್ಯಾಯಾಲಯದ ಆದೇಶವನ್ನು ಜಾರಿಗೆ ತಂದು ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸುವುದು ಇಲಾಖೆಗಳ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಬೆಳಗಾವಿ ನಗರದಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವಜನಿಕರು ಹಾಗೂ ಕಾರ್ಮಿಕರ ಸಾಗಾಣಿಕೆ ನಿಷೇಧ ಮತ್ತು ಅಟೋ ರಿಕ್ಷಾಗಳಲ್ಲಿ ನಿಯಮಾನುಸಾರ ನಿಗಧಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಮಕ್ಕಳನ್ನು ಸಾಗಾಟ ಮಾಡುತ್ತಿರುವ ಕುರಿತು ವಿಶೇಷ ಜಂಟಿ ಕಾರ್ಯಾಚರಣೆ ಕೈಗೊಂಡು ತಪ್ಪಿತಸ್ಥ ವಾಹನ ಚಾಲಕ/ಮಾಲೀಕರುಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಆದರೆ ಶಾಲಾ ಮಕ್ಕಳನ್ನು ಸಾಗಿಸುವ ಅಟೋರಿಕ್ಷಾ ಚಾಲಕರು ಇದನ್ನು ವಿರೋಧಿಸಿ ಬೆಳಗಾವಿ ನಗರದಲ್ಲಿ 3 ದಿನ ಬಂದ್ ಘೋಷಿಸಿ ತಮ್ಮ ಅಟೋ ರಿಕ್ಷಾದಲ್ಲಿ ಇಂದು ಶಾಲಾ ಮಕ್ಕಳನ್ನು ಒಯ್ಯಲಿಲ್ಲ.
ಇದರೊಂದಿಗೆ ತಪ್ಪಿತಸ್ಥ ಅಟೋರಿಕ್ಷಾ ಚಾಲಕರ ವಿರುದ್ದ ಪ್ರಕರಣಗಳನ್ನು ದಾಖಲಿಸುವಾಗ ನಿಯಮಾನುಸಾರ ಒಂದು ಅಟೋರಿಕ್ಷಾದಲ್ಲಿ ಗರಿಷ್ಠ 6 ಮಕ್ಕಳನ್ನು ಮಾತ್ರ ಸಾಗಿಸುವಂತೆ ಸೂಚಿಸಲಾಗಿದ್ದು, ಆದರೆ ಕೆಲವು ಅಟೋರಿಕ್ಷಾ ಚಾಲಕರು ಪೊಲೀಸರ ಹೇಳಿಕೆಯನ್ನು ತಿರುಚಿ ಅಟೋರಿಕ್ಷಾದಲ್ಲಿ 6 ಮಕ್ಕಳನ್ನು ಮಾತ್ರ ಸಾಗಿಸಬೇಕು. ಬೇಕಾದರೆ ದುಪ್ಪಟ್ಟು ಮೊತ್ತ ಅಂದರೆ 12 ಮಕ್ಕಳನ್ನು ಸಾಗಿಸುವಷ್ಟು ಬಾಡಿಗೆಯನ್ನು ಆ ಪಾಲಕರ ಕಡೆಯಿಂದ ಪಡೆದುಕೊಳ್ಳುವಂತೆ ಪೊಲೀಸರೇ ಹೇಳಿದ್ದಾರೆಂದು ಎಲ್ಲ ಪಾಲಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದಾಗಿ ತಿಳಿದು ಬಂದಿದೆ.
ಪೊಲೀಸ್ ಇಲಾಖೆಯಿಂದ ಈ ರೀತಿಯ ಯಾವುದೇ ಸಲಹೆ ಅಥವಾ ಸೂಚನೆಗಳನ್ನು ನೀಡಿಲ್ಲ. ಕಾರಣ ರಿಕ್ಷಾಚಾಲಕರು ಆ ರೀತಿಯ ಸುಳ್ಳು ಮಾಹಿತಿಯನ್ನು ಹೇಳುತ್ತಿದ್ದಲ್ಲಿ ಸಾರ್ವಜನಿಕರು/ಪಾಲಕರು ಅದಕ್ಕೆ ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಸಾರ್ವಜನಿಕರ ಮತ್ತು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಬೆಳಗಾವಿ ನಗರದಲ್ಲಿ ತಪ್ಪಿತಸ್ಥ ಅಟೋಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಟೋರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕಳುಹಿಸುವ ನಗರದ ಎಲ್ಲ ಪಾಲಕರು ತಮ್ಮ ಮಕ್ಕಳ ಸುರಕ್ಷತಾ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ