ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹಾಗೂ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಭೇಟಿ ವಿಚಾರ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸಚಿವ ಅಶ್ವತ್ಥನಾರಾಯಣ, ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ. ಹಗರಣಗಳಿಂದ ರಕ್ಷಣೆ ಪಡೆಯಲು ಭೇಟಿಯಾಗಿರುತ್ತಾರೆ. ಕಾಂಗ್ರೆಸ್ ನವರು ತಮ್ಮ ವಿರುದ್ಧ ಏನೂ ಮಾತನಾಡದಿರಲಿ ಎಂಬ ಕಾರಣಕ್ಕೆ ನಮ್ಮ ನಾಯಕರನ್ನು ಭೇಟಿಯಾಗಿದ್ದಾರೆ. ಇದೆಲ್ಲ ರಾಜಕೀಯ ಕೇಳಿದರೆ ವೈಯಕ್ತಿಕ ಭೇಟಿ ಅಷ್ಟೇ ಎನ್ನುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್, ಅಶ್ವತ್ಥನಾರಾಯಣ ನನ್ನನ್ನು ಭೇಟಿಯಾಗಿಲ್ಲ. ನಾನು ಕಳೆದ 6 ತಿಂಗಳಿಂದ ಸಚಿವರನ್ನು ಭೇಟಿಯಾಗಿಲ್ಲ, ಅವರ ಚೇಂಬರ್ ಗೂ ಹೋಗಿಲ್ಲ. ಅಶ್ವತ್ಥನಾರಾಯಣ ಅವರಿಗೆ ನನ್ನಿಂದ ಏನು ರಕ್ಷಣೆ ಸಿಗುತ್ತೆ? ಅಥವಾ ಡಿ.ಕೆ.ಶಿವಕುಮಾರ್ ಆಗಲಿ, ಸಿದ್ದರಾಮಯ್ಯ ಅವರಾಗಲಿ ರಕ್ಷಣೆ ಕೊಡುತ್ತಾರಾ? ಇಲ್ಲ ಹಾಗಿರುವಾಗ ಕಾಂಗ್ರೆಸ್ ನಾಯಕರನ್ನು ಅವರ್ಯಾಕೆ ಭೇಟಿಯಾಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿಲ್ಲ. ಭೇಟುಯಾಗಬಾರದು ಅಂತ ಏನೂ ಇಲ್ಲ. ಅವರ ಮಗಳು ಹಾಗೂ ನನ್ನ ಚಿಕ್ಕ ಮಗ ಇಬ್ಬರೂ ಕ್ಲಾಸ್ ಮೇಟ್. ಅವರ ಮನೆಯವರು ನಮ್ಮ ಮನೆಯವರು ನಾವು ಎಲ್ಲರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ಊಟಕ್ಕೆ ಕರೆದರೆ ಮನೆಗೂ ಹೋಗಿ ಬರುತ್ತೇವೆ. ಆದರೆ ಕಳೆದ 6 ತಿಂಗಳಿಂದ ನಾನು ಅಶ್ವತ್ಥನಾರಾಯಣ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಅಶ್ವತ್ಥನಾರಾಯಣ, ಎಂ.ಬಿ.ಪಾಟೀಲ್ ಅವರನ್ನು ನಾನು ಭೇಟಿಯಾಗಿದ್ದೇನೆ ಎಂಬುದು ಸುಳ್ಳು ಸುದ್ದಿ. ನಾನು ರಕ್ಷಣೆಗಾಗಿ ಅವರನ್ನು ಭೇಟಿಯಾಗುವ ಅವಶ್ಯಕತೆ ಇಲ್ಲ. ಡಿ.ಕೆ.ಶಿಗೆ ಮಾನ ಮರ್ಯಾದೆ ಇಲ್ಲ. ಶಿವಕುಮಾರ್ ಎಂದರೇ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಶಿವಕುಮಾರ್. ಅನಗತ್ಯವಾಗಿ ನನ್ನ ವಿರುದ್ಧ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ 7 ಸ್ಥಾನಗಳಿಗೆ ಚುನಾವಣೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ