ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಾರಾಯಣ ನೇತ್ರಾಲಯದ ವೈದ್ಯ ಡಾ.ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಸಂಜೆ 6 ಗಂಟೆ ಹೊತ್ತಿಗೆ ವ್ಯಾಯಾಮ ಮಾಡುತ್ತಿದ್ದ ವೇಳೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಬದುಕುಳಿಯಲಿಲ್ಲ.
ಶುಕ್ರವಾರ ಎಂದಿನಂತೆ ಬೆಳಗ್ಗೆಯಿಂದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸಂಜೆ 6 ಗಂಟೆ ಹೊತ್ತಿಗೆ ಮನೆಗೆ ಹೋಗಿ, ಸ್ವಲ್ಪ ವಿಶ್ರಾಂತಿ ಬಳಿಕ ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾದರು
ಡಾ.ಭುಜಂಗ ಶೆಟ್ಟಿ ದೇಶ ವಿದೇಶದಲ್ಲೂ ಪ್ರಸಿದ್ಧರಾಗಿದ್ದರು. ವಿಶೇಷವಾಗಿ ನೇತೃ ದಾನದ ಕುರಿತು ಅರಿವು ಮೂಡಿಸಲು ಅಪಾರ ಕೆಲಸ ಮಾಡುತ್ತಿದ್ದರು. ರಿವರ್ಸ್ ಡಯಾಬಿಟೀಸ್ ಅಳವಡಿಸಿಕೊಂಡು ತಮ್ಮ ದೇಹವನ್ನೇ ಪ್ರಯೋಗಕ್ಕೆ ಗುರಿಪಡಿಸುವ ಮೂಲಕ ಮಧುಮೇಹವನ್ನು ಸಂಪೂರ್ಣವಾಗಿ ಡಾ.ಭುಜಂಗಶೆಟ್ಟಿ ಅವರು ಗೆದ್ದಿದ್ದರು.
ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದಲ್ಲಿ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಖ್ಯಾತ ನೇತ್ರತಜ್ಞ ಭುಜಂಗ ಶೆಟ್ಟಿ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ
ಖ್ಯಾತ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
“ಭುಜಂಗ ಶೆಟ್ಟಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ರಾಜ್ಯ ಕಂಡ ಶ್ರೇಷ್ಠ ವೈದ್ಯರಲ್ಲಿ ಒಬ್ಬರು. ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾ ಬಹಳ ದೂರದೃಷ್ಟಿ ಹೊಂದಿದ್ದ ವೈದ್ಯರಾಗಿದ್ದರು.
ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು.
ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೆ 2010 ರಲ್ಲಿ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.
ಭುಜಂಗ ಶೆಟ್ಟಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ