Karnataka NewsLatest

ಡಾ. ಚಿದಾನಂದಮೂರ್ತಿ ಅವರ ಬೆಳಗಾವಿ ನಂಟು

ಪ್ರಕಾಶ ಗಿರಿಮಲ್ಲನವರ

ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಅವರಿಗೆ ಬೆಳಗಾವಿ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಕಾಳಜಿ ಇತ್ತು. ಅವರು ಅನೇಕ ಸಂದರ್ಭಗಳಲ್ಲಿ ಬೆಳಗಾವಿಗೆ ಬಂದಿದ್ದಾರೆ. ಬೆಳಗಾವಿ ಜಿಲ್ಲೆಯ ಸಂಸ್ಕೃತಿಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ಅವರು ಬರೆದ ’ಶಿವಾಜಿ-ಮಲ್ಲಮ್ಮಾಜಿ ಸಮರೋತ್ಸವ’ ಎಂಬ ಪುಸ್ತಕ ಕನ್ನಡಿಗರ ಸಾಂಸ್ಕೃತಿಕ ದಾಖಲೆಯ ಚಾರಿತ್ರಿಕ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಳಗಾವಿ ಜಿಲ್ಲೆಯ ಬೆಳವಡಿ ಸಂಸ್ಥಾನದ ಮಲ್ಲಮ್ಮ ಶಿವಾಜಿಯೊಂದಿಗೆ ಮಾಡಿದ ಹೋರಾಟ, ಮತ್ತು ಯಾದವಾಡದಲ್ಲಿ ಶಿವಾಜಿ ಮಲ್ಲಮ್ಮನನ್ನು ಗೌರವಿಸಿದ ಒಂದು ಅಪರೂಪದ ಶಿಲ್ಪ ಕುರಿತು ಮೊಟ್ಟಮೊದಲು ಚಾರಿತ್ರಿಕವಾದ ದಾಖಲೆಯನ್ನು ನೀಡಿದವರು ಡಾ. ಚಿದಾನಂದಮೂರ್ತಿ ಅವರು.

ಶಿವಾಜಿ ಮಹಾರಾಜರ ಸೊಸೆ ತಾರಾಬಾಯಿ ಶೇಷೋ ಪಂಡಿತ ಎಂಬ ಲೇಖಕನ ಮೂಲಕ ಬರೆಯಿಸಿದ ’ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ’ ಪುಸ್ತಕದಲ್ಲಿ ಶಿವಾಜಿಯ ಸಾಹಸಗಾಥೆಯ ಜೊತೆಗೆ ಮಲ್ಲಮ್ಮನ ಸೈನಿಕರೊಂದಿಗೆ ನಡೆದ ಆಕಸ್ಮಿಕ ಯುದ್ಧ, ಮಲ್ಲಮ್ಮನ ಗಂಡ ಈಶಪ್ರಭುವಿನ ಮರಣ, ನಂತರ ಮಲ್ಲಮ್ಮ-ಶಿವಾಜಿ ಹೋರಾಟ, ಹೋರಾಟದ ನಂತರ ಶಿವಾಜಿ ಮಲ್ಲಮ್ಮನನ್ನು ಸಹೋದರಿ ಎಂದು ಪರಿಭಾವಿಸಿದ ಐತಿಹಾಸಿಕ ಘಟನೆಯನ್ನು ದಾಖಲಿಸಲಾಗಿತ್ತು. ಈ ಕೃತಿಯ ಆಧಾರದ ಮೇಲೆ ಡಾ. ಚಿದಾನಂದಮೂರ್ತಿ ಅವರು ಪುಸ್ತಕವನ್ನು ಬರೆದು, ಕನ್ನಡಿಗರಿಗೆ ಪರಿಚಯಿಸುವ ಕಾರ್ಯ ಮಾಡಿದ್ದರು.

ಕನ್ನಡ ಶಕ್ತಿ ಕೇಂದ್ರದ ಚಟುವಟಿಕೆ

ಡಾ. ಚಿದಾನಂದಮೂರ್ತಿ ಅವರು ೧೯೮೬ರಲ್ಲಿ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ’ಕನ್ನಡ ಮರಾಠಿ ಸಾಂಸ್ಕೃತಿಕ ಸಂಬಂಧ’ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಬೆಳಗಾವಿಯಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಗೆ ಡಾ. ಯು. ಆರ್. ಅನಂತಮೂರ್ತಿ ಅವರನ್ನು ಕರೆಸಿದ್ದರು. ಬೆಳಗಾವಿಯಿಂದಲೇ ಅವರ ಕನ್ನಡ ಶಕ್ತಿ ಕೇಂದ್ರದ ಚಟುವಟಿಕೆಗಳು ಪ್ರಾರಂಭವಾಗಿದ್ದು ವಿಶೇಷ.
ಬೆಳಗಾವಿಯಲ್ಲಿ ಮರಾಠಿಗರ ಹಾವಳಿ ಹೆಚ್ಚಾದಾಗ, ಡಾ. ಚಿದಾನಂದಮೂರ್ತಿ ಅವರು ಬೆಳಗಾವಿಗೆ ಬಂದು ಲಿಂಗರಾಜ ಮೈದಾನದಲ್ಲಿ ಒಂದು ಕಾರ್ಯಕ್ರಮ ಆಯೋಜಿಸಿ, ಬೆಳಗಾವಿ ಕನ್ನಡಿಗರಿಗೆ ಸಮಸ್ತ ಕರ್ನಾಟಕದ ಬೆಂಬಲವಿದೆ, ಯಾವುದಕ್ಕೂ ಹೆದರುವ ಅಗತ್ಯವಿಲ್ಲವೆಂದು ಸ್ವಾಭಿಮಾನದ ಮಾತುಗಳನ್ನಾಡಿ ಹೋಗಿದ್ದರು. ಬೆಳಗಾವಿ ಗಡಿ ಸಮಸ್ಯೆ ಎದ್ದಾಗಲೆಲ್ಲ ಮೊಟ್ಟಮೊದಲು ತೀಕ್ಷ್ಣವಾದ ಪ್ರತಿಕ್ರಿಯೆ ನೀಡುವ ಒಬ್ಬ ನಿಜವಾದ ಕನ್ನಡ ಕಳಕಳಿಯ ಮನುಷ್ಯ ಡಾ. ಮೂರ್ತಿಯವರು ಎಂದರೆ ಅತಿಶಯೋಕ್ತಿಯಲ್ಲ.

ಸಾಂಸ್ಕೃತಿಕ ಸ್ಪರ್ಶ

ಬೆಂಗಳೂರು ರಾಜಧಾನಿಯಲ್ಲಿ ಕನ್ನಡ ಸಂಘಟನೆಗಳು ಎಂದರೆ ಒಂದು ರೀತಿಯ ’ಹುಂಬ ಸಂಘಟನೆಗಳು’ ಎಂಬ ಹಣೆಪಟ್ಟಿ ಕಟ್ಟಿಕೊಂಡ ಸಂದರ್ಭದಲ್ಲಿ, ಕನ್ನಡ ಸಂಘಟನೆಗಳಿಗೆ ಸಾಂಸ್ಕೃತಿಕ ಸ್ಪರ್ಶ ನೀಡುವ ಕಾರ್ಯವನ್ನು ಡಾ. ಚಿದಾನಂದಮೂರ್ತಿ ಅವರು ಮಾಡಿದರು. ಕನ್ನಡ ಶಕ್ತಿ ಕೇಂದ್ರ ಎಂಬ ಸಂಘಟನೆಯ ಮೂಲಕ ಕನ್ನಡವನ್ನು ಕಟ್ಟುವ ಮಾರ್ಗವನ್ನು ಅವರು ತೋರಿಸಿಕೊಟ್ಟರು. ಕನ್ನಡ ಶಕ್ತಿ ಕೇಂದ್ರದ ಅನೇಕ ಕಾರ್ಯಕ್ರಮಗಳನ್ನು ಬೆಳಗಾವಿಯಲ್ಲಿಯೂ ಆಯೋಜಿಸಿದ ಶ್ರೇಯಸ್ಸು ಅವರದು.

೧೯೯೮-೯೯ರಲ್ಲಿ ಡಾ. ಚಿದಾನಂದಮೂರ್ತಿ ಅವರು ಹಂಪಿ ತುಂಗಭದ್ರಾ ನದಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದರು. ಕನ್ನಡದ ಸಲುವಾಗಿಯೇ ಅವರು ಆ ಪ್ರಯತ್ನ ಮಾಡಿದ್ದರು. ತಮ್ಮ ನೋವು ಅಳಲನ್ನು ಒಂದು ಕಿರು ಹೊತ್ತಿಗೆಯ ಮೂಲಕ ಪ್ರಕಟಿಸಿದರು. ಆ ಕಿರುಹೊತ್ತಿಗೆಯನ್ನು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಶ್ರೀಮಠದಿಂದ ಹತ್ತು ಸಾವಿರ ಪ್ರತಿ ಪ್ರಕಟಿಸಿ, ಕನ್ನಡಿಗರಿಗೆ ಮುಟ್ಟಿಸುವ ಕಾರ್ಯ ಮಾಡಿದ್ದರು.

ಪುಸ್ತಕಗಳಿಗೆ ಮುನ್ನುಡಿ

ಚಿದಾನಂದಮೂರ್ತಿ ಅವರ ಕನ್ನಡ ಕಳಕಳಿ ಅನನ್ಯವಾದುದು. ಕನ್ನಡದ ಕೆಲಸಗಳು ಎಲ್ಲೆ ನಡೆಯಲಿ, ಅವುಗಳನ್ನು ಮುಕ್ತ ಮನದಿಂದ ಪ್ರಶಂಸಿಸಿ, ಹಾರೈಸುತ್ತಿದ್ದರು.
ಬೆಳಗಾವಿ ನಾಗನೂರು ರುದ್ರಾಕ್ಷಿಮಠದಲ್ಲಿ ಅಸ್ತಿತ್ವಕ್ಕೆ ಬಂದ ಲಿಂಗಾಯತ ಸಂಶೋಧನ ಕೇಂದ್ರದ ಮೂಲಕ ಡಾ. ಎಸ್. ಆರ್. ಗುಂಜಾಳ ಅವರು ಮತ್ತು ನಾನು ಸಿದ್ಧಪಡಿಸಿದ ’ಸಂಶೋಧನ ಲೇಖನ ಸೂಚಿ’ ಕೃತಿಗೆ ಮುನ್ನುಡಿ ಬರೆದು ಶುಭ ಹಾರೈಸಿದ್ದರು. ವಿದ್ವತ್ತಿನ ಇಂಥ ಕೆಲಸಗಳು ಸದಾಕಾಲ ನಡೆಯುತ್ತಿರಬೇಕೆಂದು ಆಶಿಸಿದ್ದರು. ಹಾಗೆಯೇ ಡಾ. ಸರಜೂ ಕಾಟ್ಕರ್ ಅವರು ಬರೆದ ’ಶಿವಾಜಿ ಮೂಲ ಕನ್ನಡ ನೆಲ’ ಕೃತಿಗೂ ಡಾ. ಚಿಮೂ ಅವರು ಮುನ್ನುಡಿ ಬರೆದಿದ್ದಾರೆ.

ಡಾ. ಚಿದಾನಂದಮೂರ್ತಿ ಅವರಿಗೆ ಮರಾಠಿ ಪದಗಳ ಅರ್ಥ ಬೇಕಾದಾಗಲೆಲ್ಲ ಇಲ್ಲಿಯ ವಿದ್ವಾಂಸರಿಗೆ ಫೋನ್ ಮಾಡಿ ಕೇಳುತ್ತಿದ್ದರು. ಪುಸ್ತಕಗಳ ವಿವರ ಕುರಿತು ಅನೇಕ ಸಂದರ್ಭಗಳಲ್ಲಿ ನನಗೆ ಫೋನ್ ಮಾಡಿ ವಿವರಣೆ ಪಡೆಯುತ್ತಿದ್ದರು. ತಾತ್ವಿಕವಾದ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಮರೆತು ಸ್ನೇಹಜೀವನಕ್ಕೆ, ಮಾನವೀಯ ಅಂತಃಕರಣಕ್ಕೆ ಅವರು ಹೆಚ್ಚು ಬೆಲೆ ಕೊಡುತ್ತಿದ್ದರು.

ಲಿಂಗಾಯತ-ವೀರಶೈವ ಹೋರಾಟದ ಸಂದರ್ಭದಲ್ಲಿ ಅವರು ವೀರಶೈವ-ಹಿಂದೂ ಪರವಾಗಿ ನಿಂತಿದ್ದರು. ಆದರೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ನೇತೃತ್ವ ವಹಿಸಿದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳವರ ’ಭಾರತೀಯ ತತ್ವಶಾಸ್ತ್ರ’ ಕೃತಿಗೆ ಇತ್ತೀಚಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಗಳ ಕನ್ನಡ ಸೇವೆಯನ್ನು ಮನಃಪೂರ್ವಕವಾಗಿ ಶ್ಲಾಘಿಸಿ, ಶ್ರೀಗಳ ವಿದ್ವತ್ತಿನ ಕುರಿತು ತುಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ವಿದ್ವಾಂಸರೊಂದಿಗೆ ನಿಕಟ ಸಂಬಂಧ

ನಾಡ ಹಬ್ಬದ ಕಾರ್ಯಕ್ರಮಗಳಿಗೆ, ಕೆ.ಎಲ್.ಇ. ಸಂಸ್ಥೆಯ ಕಾರ್ಯಕ್ರಮಗಳಿಗೆ ಅವರು ಬಂದು ಭಾಷಣ ಮಾಡಿ, ಕನ್ನಡಿಗರ ಸ್ವಾಭಿಮಾನವನ್ನು ಬಡೆದೆಬ್ಬಿಸುವ ಕಾರ್ಯ ಮಾಡಿದ್ದರು.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಡಾ. ಎಸ್. ಎಸ್. ಅಂಗಡಿ ಅವರು’ಡಾ. ಚಿದಾನಂದಮೂರ್ತಿ ಅವರ ಕನ್ನಡ ಸಂಶೋಧನೆ-ಸಾಹಿತ್ಯ’ ಕುರಿತು ಏಳು ಪುಸ್ತಕಗಳನ್ನು ರಚಿಸಿದ್ದಾರೆ.
ವೀರಶೈವ-ಲಿಂಗಾಯತ ಹೋರಾಟ ನಡೆದ ಸಂದರ್ಭದಲ್ಲಿ ಅವರು ನನ್ನೊಂದಿಗೆ ಅನೇಕ ಸಲ ಪತ್ರವ್ಯವಹಾರಗಳನ್ನು ಮಾಡಿದ್ದರು. ಫೋನ್ ಮೂಲಕ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದರು.

ಅವರು ’ಹಿಂದೂ-ವೀರಶೈವ’ ಪುಸ್ತಕ ಬರೆಯುವ ಕಾಲಕ್ಕೆ ಅನೇಕ ಆಕರಗಳನ್ನು ನಾನು ನಾಗನೂರು ರುದ್ರಾಕ್ಷಿಮಠದ ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯದಿಂದ ಪೂರೈಸಿದ್ದೆ. ೧೯೯೯ ಡಿಸೆಂಬರ್ ೮ ರಂದು ಬೆಳಗಾವಿಯಲ್ಲಿ ಜರುಗಿದ ಐದನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿ ಭಾಗವಹಿಸಿ, ಶರಣ ಸಾಹಿತ್ಯ ಚಿಂತನೆಯ ಕುರಿತು ಕೆಲವು ಹೊಸ ವಿಚಾರಗಳನ್ನು ಪ್ರತಿಪಾದಿಸಿದ್ದರು.

ಅವರು ೧೯೯೯ರಲ್ಲಿ ಬರೆದ ’ವಚನ ಶೋಧ’ ಎಂಬ ಕೃತಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಶಿವಬಸವ ಸ್ವಾಮಿಗಳ ದತ್ತಿ ಅನುದಾನದಿಂದ ಪ್ರಕಟಗೊಂಡಿತ್ತು. ಈ ವಚನ ಶೋಧದಲ್ಲಿ ಕೆಲವು ಅಪರೂಪದ ಉದ್ಧರಣೆ ಪಟಲಗಳನ್ನು ಪ್ರಕಟಿಸಿದ್ದಾರೆ. ಆ ಉದ್ದರಣೆಯ ಪಟಲಗಳನ್ನು ಅವರು ನಾಗನೂರು ಮಠದ ಗ್ರಂಥಾಲಯದಿಂದಲೇ ಸಂಗ್ರಹಿಸಿದ್ದರು. ಹೀಗೆ ಬೆಳಗಾವಿ ಅವರ ನಂಟು ಅನನ್ಯವಾಗಿತ್ತು.
ಬೆಳಗಾವಿಯ ಅನೇಕ ಹಿರಿಕಿರಿಯ ವಿದ್ವಾಂಸರೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದ ಡಾ. ಚಿದಾನಂದಮೂರ್ತಿ ಅವರ ನಿಧನದಿಂದ ಕನ್ನಡ ಸಾರಸ್ವತಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button