Belagavi NewsBelgaum NewsKannada NewsKarnataka News

*ಡಾ.ಮಹಾಂತ ಶಿವಯೋಗಿಗಳ ಜನ್ಮದಿನ; ವ್ಯಸನ ಮುಕ್ತ ದಿನಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾದಕ ವಸ್ತುಗಳ ಸೇವನೆಯಿಂದಾಗಿ ಹಾಳಾದ ಸಂಸಾರಗಳನ್ನು ಉಳಿಸುವ ಸಲುವಾಗಿ ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಡಾ.ಮಹಾಂತ ಶಿವಯೋಗಿಗಳು ಮುಂದಾಗಿದ್ದರು. ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುವ “ಮಹಾಂತ ಜೋಳಿಗೆ” ಕಾರ್ಯವು ಇಡೀ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಪ್ರಸಿದ್ಧಿ ಪಡೆಯಿತು ಎಂದು ಹಿರಿಯ ಸಾಹಿತಿಗಳಾದ ರಾಮಕೃಷ್ಣ ಮರಾಠೆ ಅವರು ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಇಳಕಲ್ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ (ಆ.1) ನಡೆದ ವ್ಯಸನಮುಕ್ತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಬೆಳೆಯುತ್ತಿರುವ ಸಮಾಜಕ್ಕೆ ಮದ್ಯಪಾನ ಮಾರಕ ಎಂಬುದನ್ನು ಅರಿತ ಮಹಾತ್ಮಾ ಗಾಂಧೀಜಿಯವರು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಧ್ಯಪಾನ ವಿರೋಧಿಸಿ ಅಭಿಯಾನವನ್ನು ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ಡಾ.ಮಹಾಂತ ಶಿವಯೋಗಿಗಳು ಸಮಾಜದ ಸ್ವಾಸ್ಥ್ಯ ಕಾಪಾಡಿ, ಅನಾಚಾರವನ್ನು ತಡೆಗಟ್ಟಲು ಹಗಲಿರುಲು ಶ್ರಮಿಸಿದರು. ಸಮಾಜದಲ್ಲಿನ ಅನಾಚಾರವನ್ನು ತಡೆಗಟ್ಟಲು ಸ್ವತಃ ಸಾಮಿಜಿಗಳು ಮನೆ ಮನೆಗೆ ತೆರಳಿ ಜನರ ದುಶ್ಚಟಗಳನ್ನು ತಮ್ಮ ಜೊಳಿಗೆಗೆ ಹಾಕಿಸಿಕೊಂಡು ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು.

ಡಾ.ಮಹಾಂತ ಶಿವಯೋಗಿಗಳ ಆದರ್ಶಗಳನ್ನು ಇಂದಿನ ಯುವ ಜನತೆ ಅರಿತು ಪಾಲಿಸುವುದರ ಮೂಲಕ ದುಶ್ಚಟಗಳನ್ನು ತೊರೆದು ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಾಹಿತಿಗ ಡಾ.ರಾಮಕೃಷ್ಣ ಮರಾಠೆ ಅವರು ತಿಳಿಸಿದರು.

Home add -Advt

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು, ಸಮಾಜ ಹಾಗೂ ದೇಶವನ್ನು ಹಾಳು ಮಾಡುವ ದುರ್ವ್ಯಸನಗಳು, ದುಶ್ಚಟಗಳು ಹಾಗೂ ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು. ಅವರ ಬದುಕು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಡಿಪಾಗಿತ್ತು. ಅಂತಹ ಶ್ರೀಗಳ ಆಶಯದಂತೆ ವ್ಯಸನಮುಕ್ತ ಸಮಾಜ‌ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಇಂದಿನ ಯುವ ಸಮೂಹ ಡಾ. ಮಹಾಂತ ಶಿವಯೋಗಿಗಳ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ದುಶ್ಚಟಗಳನ್ನು ಮೈಗೂಡಿಸಿಕೊಳ್ಳದೇ ಆದರ್ಶ ವ್ಯಕ್ತಿಗಳಾಗಬೇಕು. ತಂಬಾಕು ಅಥವಾ ಸಿಗರೇಟು ಸೇವನೆಯ ಜಾಹೀರಾತುಗಳಿಗೆ ಮರುಳಾಗದೇ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ ದೊಡ್ಡಮನಿ ಅವರು ಮಾತನಾಡಿ, ತಂಬಾಕು ಸೇವನೆಯು ಶರೀರವನ್ನು ನಿಧಾನವಾಗಿ ಹಾಳು ಮಾಡುತ್ತದೆ. ತಂಬಾಕಿನಲ್ಲಿರುವ ನಿಕೋಟಿನ ಎಂಬ ಪದಾರ್ಥವು ತಂಬಾಕು ಸೇವನೆಯ ಅಂಟಿಕೊಳ್ಳುವಂತೆ ಮಾಡುತ್ತದೆ. ಭಾರತದಲ್ಲಿ ವರ್ಷದಲ್ಲಿ ಸರಿಸಮಾರು 7 ಲಕ್ಷ ಜನರು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಸಾವನ್ನಪ್ಪುತ್ತಿದ್ದು, ಅದರಲ್ಲಿ 4 ಲಕ್ಷ ಜನರು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಯುವಕರು ಹೆಚ್ಚಿನವರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು, ವ್ಯಸನಮುಕ್ತ ದಿನಾಚರಣೆಯು ಸಮಾಜಕ್ಕೆ ಡಾ.ಮಹಾಂತ ಶಿವಯೋಗಿಗಳು ಕೊಟ್ಟ ಅದ್ಭುತ ಕೊಡುಗೆ. ಅಕ್ಷರಗಳ ಉಂಡು ಸಂಸ್ಕಾರವಂತರಬೇಕು ಅದಕ್ಕೆ ಅಡ್ಡಿಯಾಗಿರುವ ವ್ಯಸನಗಳನ್ನು ತ್ಯಜಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಿವೃತ್ತ ರೇಷ್ಮೆ ಇಲಾಖೆ ನೌಕರ ಶ್ರೀಕಾಂತ ಅಗಸಗಿ ಅವರು ಮಾತನಾಡಿ, “ನಾನಾ ವ್ಯಸನಗಳಿಗೆ ಅಂಟಿಕೊಂಡು ಎಲ್ಲರಿಗೂ ಬೇಡವಾದ ವ್ಯಕ್ತಿಯಾಗಿದ್ದ ನನಗೆ ಒಂದು ಹಂತದಲ್ಲಿ ಬದುಕು ಬೇಡವಾಗಿತ್ತು. ಆದರೆ ಮಹಾಂತ ಶ್ರೀಗಳ ಜೋಳಿಗೆಗೆ ದುಶ್ಚಟವನ್ನು ಹಾಕುವ ಮೂಲಕ ವ್ಯಸನಮುಕ್ತನಾದ ಬಳಿಕ ನನ್ನ ಬಾಳು ಹಸನಾಯಿತು” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಇಡೀ ರಾಷ್ಟ್ರದ ಗಮನಸೆಳೆದ ಇಳಕಲ್ ಮಹಾಂತ ಶಿವಯೋಗಿಗಳ ಜನ್ಮದಿನ(ಆಗಸ್ಟ್ 1)ವನ್ನು ಸರಕಾರವು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿದೆ ಎಂದು ಹೇಳಿದರು.
ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಪಣತೊಡುವದರ ಮೂಲಕ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಗುರುನಾಥ ಕಡಬೂರ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವಾರ್ತಾ ಇಲಾಖೆಯ ಸಿಬ್ಬಂದಿ ಅನಂತ ಪಪ್ಪು, ವಿಜಯಕುಮಾರ್ ಬೆಟಗೇರಿ, ಎಂ.ಎಲ್.ಜಮಾದಾರ ಸೇರಿದಂತೆ ವಿವಿಧ ಸಿಬ್ಬಂದಿ ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತೆಯರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Back to top button