ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ಅವರ ನಿಧನದ ಸುದ್ದಿ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಮನಮೋಹನ್ ಸಿಂಗ್ ರವರು ತಮ್ಮ ಶಾಂತ ಸ್ವಭಾವ, ಆಳವಾದ ಜ್ಞಾನ ಮತ್ತು ಅಪ್ರತಿಮ ದೃಷ್ಟಿಕೋನದಿಂದ ದೇಶದ ಆರ್ಥಿಕತೆ ಹಾಗೂ ಆಡಳಿತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದಿದ್ದರು.
ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ ಸಲ್ಲಿಸಿದ ಸೇವೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೇರಿಸಿತ್ತು.
ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದ ಮನಮೋಹನ್ ಸಿಂಗ್ ಅವರು ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿಗಳನ್ನ ಕೂಡ ಪಡೆದಿದ್ದರು. ಸತತ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಅವರು, ಈ ಹುದ್ದೆ ಅಲಂಕರಿಸಿದ ಸಿಖ್ ಸಮುದಾಯದ ಮೊದಲ ವ್ಯಕ್ತಿ ಎನಿಸಿದ್ದರು.
ಅವರ ಕಾರ್ಯವೈಖರಿಯು ಪ್ರಜಾಪ್ರಭುತ್ವದ ಮಹತ್ವವನ್ನು ಮನವರಿಕೆ ಮಾಡಿಸುವಂತಿತ್ತು. ಪ್ರತಿಭಾವಂತರಾಗಿ, ಸದಾ ಜನಸಾಮಾನ್ಯರ ಆತ್ಮೀಯತೆಯನ್ನು ಕಾಪಾಡಿಕೊಂಡಿದ್ದರು. ಈ ದುಃಖದ ಕ್ಷಣದಲ್ಲಿ, ಅವರ ಕುಟುಂಬ, ಸ್ನೇಹಿತರ ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಸಾಧನೆ ಮತ್ತು ಮೌಲ್ಯಗಳು ಎಲ್ಲರ ಮನಸ್ಸಿನಲ್ಲಿ ಸದಾ ಜೀವಂತ.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಆಧಾರ್ ಜಾರಿ, ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಕಾಯ್ದೆ, ಅಮೆರಿಕ ಜೊತೆ ನಾಗರಿಕ ಪರಮಾಣು ಒಪ್ಪಂದ ಸೇರಿದಂತೆ ಹಲವು ಮಹತ್ವಪೂರ್ಣ ಯೋಜನೆಗಳು ಇವರ ಕಾಲದಲ್ಲಿ ಜಾರಿಯಾಗಿದ್ದವು ಎಂದು ಸಚಿವರು ಸ್ಮರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ