ಪ್ರಗತಿವಾಹಿನಿ ಸುದ್ದಿ: 76ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ನೆರವೇರಿಸಿದ ಮಾನ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸುದ್ದಿಗೋಷ್ಠಿಯನ್ನು ನಡೆಸಿದರು.
ಪ್ರಮುಖ ಅಂಶಗಳು:
ಸಮಾಜದ ಅಂಕು-ಡೊಂಕುಗಳನ್ನು, ನ್ಯೂನತೆಗಳನ್ನು ಸರಿ ಮಾಡುವ ಮಾಧ್ಯಮದವರ ಪಾತ್ರ ಅಪಾರವಾದುದು. ತುಮಕೂರಿನಲ್ಲಿ 76ನೇ ಗಣರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳು.
ರಾಜ್ಯದಲ್ಲಿ ತುಮಕೂರು ಪ್ರತಿಷ್ಟಿತವಾದ ಜಿಲ್ಲೆಯಾಗಿದೆ. ಬೆಳಗಾವಿ, ಕಲಬುರಗಿ ನಂತರ ವಿಸ್ತೀರ್ಣದಲ್ಲಿ ತುಮಕೂರು ಇದೆ. 11 ವಿಧಾನಸಭಾ ಕ್ಷೇತ್ರಗಳು ಹಾಗೂ ಮೂರು ಲೋಕಸಭಾ ಕ್ಷೇತ್ರಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಬೆಂಗಳೂರಿಗೆ 70 ಕಿ.ಮೀ ದೂರದಲ್ಲಿರುವ ತುಮಕೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಗ್ರೇಟರ್ ಬೆಂಗಳೂರಿನಲ್ಲಿ ತುಮಕೂರು ಒಂದು ಭಾಗವಾಗಲಿದೆ. ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
ಬೃಹತ್ ಕೈಗಾರಿಕೆ ಮತ್ತು ಮೂಲಸೌಲಭ್ಯ (ಇನ್‌ಫ್ರಾಸ್ಟ್ರಕ್ಚರ್) ಸಚಿವರಿಗೆ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ನಿರ್ಮಿಸುವಂತೆ ಮನವಿ ಮಾಡಿದ್ದೇನೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಕಡೆಗಳಲ್ಲಿ ಭೂಮಿ ಗುರುತಿಸಲಾಗಿದೆ. ವಸಂತ ನರಸಾಪುರ ಹೊಂದಿಕೊಂಡತೆ ರಾಷ್ಟ್ರೀಯ ಹೆದ್ದಾರಿ 48 ಸಮೀಪ 3 ಸಾವಿರ ಭೂಮಿ ಹಾಗೂ ಶಿರಾ ತಾಲ್ಲೂಕಿನ ಸಿ.ಬಿ.ದೇವಸ್ಥಾನ ಸಮೀಪ 4 ರಿಂದ 5 ಸಾವಿರ ಎಕರೆ ಭೂಮಿಯನ್ನು ನಕ್ಷೆ ಮೂಲಕ ಗುರುತಿಸಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು ಪಕ್ಷಾತೀತವಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯ ಹಾಗೂ ತುಮಕೂರು ಮಹಾನಗರದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದೇನೆ. 200 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ. 30 ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ನಗರದಲ್ಲಿ ಪಾಲಿಕೆ ವತಿಯಿಂದ ಮಾಂಸ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು. ವದಾಗಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಜನರ ಆರೋಗ್ಯದ ಸುರಕ್ಷತೆಯಿಂದ ಮಾಂಸಮಾರಾಟ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ.
ಅಮಾನಿ ಕೆರೆಯಲ್ಲಿ ಗ್ಲಾಸ್ ಬ್ರಿಡ್ಜ್ (ಗಾಜಿನ ಸೇತುವೆ) ನಿರ್ಮಿಸಲು ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಅಡ್ವೆಂಚರ್‌ಗೆ ಅನುಕೂಲವಾಗಿದೆ. ಕೆಋಯ ಐಲ್ಯಾಂಡ್‌ನಲ್ಲಿ ಬರ್ಡ್ ಪಾರ್ಕ್ ನಿರ್ಮಿಸಲಾಗುವುದು. ಅಮಾನಿಕೆರೆಯನ್ನು ಸ್ವಚ್ಛಗೊಳಿಸಲಾಗುವುದು. ತುಮಕೂರು ನಗರದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು. ಗುಬ್ಬಿ ವೀರಣ್ಣ ಕಲಾ ಮಂದಿರವನ್ನು ಅಭಿವೃದ್ಧಿಪಡಿಸಲಾಗುವುದು. ಅಮಾನಿಕೆರೆ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ 25 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 200 ಕೋಟೊ ರೂ. ಅನುದಾನದ ಪೈಕಿ 137 ಕೋಟಿ ರೂ. ಗಳಲ್ಲಿ 202 ರಸ್ತೆಗಳ ನಿರ್ಮಾಣ, ಸೇತುವೆ, ಚರಂಡಿಗಳ ನಿರ್ಮಾಣಕ್ಕೆ ಬಳಕೆಯಾಗಲಿದೆ ಎಂದು ಹೇಳಿದರು.
ಅಕ್ಕ ತಂಗಿ ಕೆರೆಯನ್ನು ಬೆಂಗಳೂರಿನ ಲಾಲ್ ಬಾಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. 200 ಕೋಟಿ ರೂ. ವಿಶೇಷ ಅನುದಾನದಲ್ಲಿ 18 ಪಾರ್ಕ್‌ಗಳ ಅಭಿವೃದ್ಧಿಗೆ ಹಣ ಹೊಂದಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಅವೆಲ್ಲವನ್ನು ಹಂತಹಂತವಾಗಿ ನೇಮಕಾತಿ ಮಾಡಲಾಗುವುದು. ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಮಾದರಿ ಹೆಲಿಕ್ಯಾಪ್ಟರ್ ಅನ್ನು ಟೌನ್‌ಹಾಲ್ ಪಕ್ಕದಲ್ಲಿ ಇರಿಸಲಾಗುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸರ್ಕಾರ ಒಪ್ಪಿಗೆ ಕೊಟ್ಟ ನಂತರ ಸ್ಥಾಪಿಸಲಾಗುವುದು. ಶ್ರೀ ಸಿದ್ಧಾರ್ಥ ಸಂಸ್ಥೆಯಿಂದ 36 ಲಕ್ಷ ವೆಚ್ಚದ ಪುತ್ಥಳಿಯನ್ನು ಕೊಡುಗೆಯಾಗಿ ನೀಡಲಾಗುವುದು. ಅಂಬೇಡ್ಕರ್ ಪುತ್ಥಳಿಯನ್ನು ಸರ್ಕಲ್‌ನಲ್ಲಿ ಸ್ಥಾಪಿಸುವುದಿಲ್ಲ. ಮಹಾನಗರ ಪಾಲಿಕೆಗೆ ಸೇರಿದ ಆವರಣದ ಜಾಗದಲ್ಲಿ ಸ್ಥಾಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ ಎಂದರು.
ಟೌನ್‌ಹಾಲ್ ಸರ್ಕಲ್ ಸಮೀಪದ ರಸ್ತೆ ಬಳಿ ಇರುವ ದರ್ಗಾ ಮತ್ತು ಮಂದಿರ ತೆರವುಗೊಳಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರುಮುಲ್ ಅಧ್ಯಕ್ಷರ ಆಯ್ಕೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ತುಮುಲ್‌ಗೆ ನಾಮನಿರ್ದೇಶನ ಮಾಡಿ ಅಧ್ಯಕ್ಷನನ್ನಾಗಿ ಮಾಡಲು ಕಾನೂನಿನನಲ್ಲಿ ಅವಕಾಶವಿದೆ. ತುಘಲಕ್ ದರ್ಬಾರ್ ಎಂಬುದು ನನಗೆ ಗೊತ್ತಿಲ್ಲ. ಒಂಬತ್ತು ಜನ ನಿರ್ದೇಶಕರು ಒಮ್ಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ನಮ್ಮದೇನಿದೆ. ಅಧ್ಯಕ್ಷರನ್ನು ಆಯ್ಕೆ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯಲ್ಲವೇ? ಅದಕ್ಕಾಗಿ ಮಾಡಲಾಗಿದೆ. ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗಿದೆ. ಮೈಕ್ರೋಫೈನಾನ್ಸ್‌ಗಳಿಗೆ ಸಬಂಧಿಸಿದಂತೆ ಈಗಿರುವ ಕಾನೂನು ಬಲಪಡಿಸಲಾಗುವುದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿಗೆ ತರಲಾಗುವುದು. ಸುಮೋಟೊ ಕೇಸ್ ತೆಗೆದುಕೊಳ್ಳಲು ಪೊಲೀಸರಿಗೆ ಅವಕಾಶವಿಲ್ಲ. ಇದಕ್ಕೆ ಅವಕಾಶ ಕಲ್ಪಿಸಲಾಗುವುದು. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡಲು ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಚೇಳೂರು ಪೇದೆಯೊಬ್ಬರು ದಬ್ಬಾಳಿಕೆ ಮಾಡಿ ಮನೆಯಿಂದ ಹೊರದಬ್ಬಿದ್ದಾರೆ. ಎಂಬುದರ ಕುರಿತು ಪ್ರತಿಕ್ರಿಯಿಸಿ ಪೇದೆ ವಿರುದ್ಧ ಎಫ್‌ಐಆರ್ ದಾಖಲಿಸಿ ಅಮಾನತುಗೊಳಿಸಲಾಗಿದೆ. ಇದನ್ನು ಮುಂದುವರಿಸಿದರೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದರು.
ಅನಧಿಕೃತ ಫೈನಾನ್ಸ್ ಹಾವಳಿಯನ್ನು ಮಟ್ಟ ಹಾಕಲಾಗುವುದು. ಜಿಲ್ಲಾಧಿಕಾರಿಗಳಿಗೆ ಹೆಚಗಚಿನ ಅಧಿಕಾರ ನೀಡಲಾಗುವುದು. ಈ ವರ್ಷ ಏಳು ಜನರು ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 14 ಪ್ರಕರಣ ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಕಾನೂನು ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.
ನಿಮ್ಮ ಅಭಿಮಾನಿಗಳಿಂದ ಮುಂದಿನ ಮುಖ್ಯಮಂತ್ರಿ ಪರಮೇಶ್ವರ ಎಂಬ ಕೂಗು ಎದ್ದಿದೆ ಎಂಬುದರ ಕುರಿತು ಪ್ರಶ್ನಿಸಿದ ಮಾಧ್ಯಮದವರಿಗೆ ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ತೆರೆ ಎಳೆದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ