3 ರಾಜ್ಯಗಳ ಸಂಗಮವಾಗಲಿದೆ ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ: ಹರಿದು ಬರಲಿದ್ದಾರೆ ಲಕ್ಷಾಂತರ ಅಭಿಮಾನಿಗಳು
ಅರ್ಥಪೂರ್ಣ ಆಚರಣೆಗೆ ಸಿದ್ಧತೆ
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೂಲಕ ಬೆಸೆಯುವ ಮೂಲಕ ಮತ್ತೊಂದು ಮಹತ್ಸಾಧನೆ ಮಾಡಿದ್ದಾರೆ. ಸಮಾಜದ ದೊಡ್ಡ ಆಸ್ತಿಯಾಗಿರುವ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಮೃತಮಹೋತ್ಸವ ಸಮಿತಿ ನಿರ್ಧರಿಸಿದೆ
-ಮಹಾಂತೇಶ ಕವಟಗಿಮಠ
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ : 3 ಬಾರಿ ರಾಜ್ಯಸಭೆ ಸದಸ್ಯರಾಗಿ, 1 ಬಾರಿ ವಿಧಾನಪರಿಷತ್ ಸದಸ್ಯರಾಗಿ , ನಾಲ್ಕು ದಶಕಗಳಷ್ಟು ಸುದೀರ್ಘ ಕಾಲ ಕೆಎಲ್ಇ ಸಂಸ್ಥೆಯ ಚೇರಮನ್ ಆಗಿ ಅಪ್ರತಿಮ ಸೇವೆ ಸಲ್ಲಿಸಿರುವ, ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಇಷ್ಟೊಂದು ಸಾಧಿಸಬಹುದೆನ್ನುವುದನ್ನು ತೋರಿಸಿಕೊಡುವ ಮೂಲಕ ಸಮಾಜಕ್ಕೆ ಆದರ್ಶರೆನಿಸಿರುವ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನಾಚರಣೆ – ಅಮೃತಮಹೋತ್ಸವ ಶನಿವಾರ (ಅಕ್ಟೋಬರ್ 15) ನಡೆಯಲಿದೆ.
ಇಲ್ಲಿನ ನೆಹರೂ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅ.15ರಂದು ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ 1 ಲಕ್ಷದಷ್ಟು ಅಭಿಮಾನಿಗಳು ಆಗಮಿಸಲಿದ್ದಾರೆ.
ಕೆಎಲ್‌ಇ ಸಂಸ್ಥೆಯ ನಿರ್ದೇಶಕರೂ ಆಗಿರುವ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
1980ರ ದಶಕದಲ್ಲಿ ಕೆಎಲ್ಇ ಸಂಸ್ಥೆಯ ಚುಕ್ಕಾಣಿ ಹಿಡಿದು, 34 ಅಂಗಸಂಸ್ಥೆಗಳಿಂದ 293 ಅಂಗ ಸಂಸ್ಥೆಗಳಿಗೆ ಏರಿಸುವ ಮೂಲಕ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬಹುದೊಡ್ಡ ಸಾಧನೆ ಮಾಡುವ ಮೂಲಕ ಡಾ.ಪ್ರಭಾಕರ ಕೋರೆ ಸಮಾಜಕ್ಕೆ ಆದರ್ಶರೆನಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೂಲಕ ಬೆಸೆಯುವ ಮೂಲಕ ಮತ್ತೊಂದು ಮಹತ್ಸಾಧನೆ ಮಾಡಿದ್ದಾರೆ. ಸಮಾಜದ ದೊಡ್ಡ ಆಸ್ತಿಯಾಗಿರುವ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಮೃತಮಹೋತ್ಸವ ಸಮಿತಿ ನಿರ್ಧರಿಸಿದೆ ಎಂದು ಅವರು ವಿವರಿಸಿದರು.
ಕೆಎಲ್ಇ ಸಂಸ್ಥೆ ಮಾತ್ರವಲ್ಲದೆ, ಸಕ್ಕರೆ ಕಾರ್ಖಾನೆ, ರಾಣಿ ಚನ್ನಮ್ಮ ಮಹಿಳಾ ಬ್ಯಾಂಕ್, ಅಂಕಲಿ ಸಹಕಾರಿ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ ಮೊದಲಾದವುಗಳ ಮೂಲಕ ಲಕ್ಷಾಂತರ ಜನರ ಜೀವನಕ್ಕೆ ಆಧಾರವಾಗಿದ್ದಾರೆ. 30 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಪ್ರಭಾಕರ ಕೋರೆ ಆಸರೆಯಾಗಿದ್ದಾರೆ ಎಂದು ಕವಟಗಿಮಠ ಹೇಳಿದರು.
75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಿಮಿತ್ತ ಅವರ ಸಾಧನೆಯ ಹಾದಿಯನ್ನು ಅವಲೋಕನ ಮಾಡುವುದು ಅಮೃತ ಮಹೋತ್ಸವದ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಅವರು ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ಹೆಜ್ಜೆ ಹಾಕುತ್ತಿರುವ ಯುವ ನಾಯಕರಿಗೆ ಪ್ರೇರೇಪಣೆ ನೀಡುವುದು ಸಹ ಪ್ರಮುಖ ಉದ್ದೇಶವಾಗಿದೆ ಎಂದು ಕವಟಗಿಮಠ ತಿಳಿಸಿದರು.
ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಕೊಡುಗೆಯಾಗಿ ೨೦೦೬ರಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಎಂಡ್ ರೀಸರ್ಚ್ (ಕಾಹೇರ್) ಸ್ಥಾಪಿಸಿದ್ದಾರೆ. ೨೦೧೫ರಲ್ಲಿ ಹುಬ್ಬಳ್ಳಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಡಾ. ಕೋರೆ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಗಣ್ಯರು ಭಾಗಿ
ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧಮೇಂದ್ರ ಪ್ರಧಾನ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಿಜೆಪಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಹಾರಾಷ್ಟ್ರದ ಸಚಿವ ರಾಧಾಕೃಷ್ಣ ಪಾಟೀಲ, ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಊಟ, ಪಾರ್ಕಿಂಗ್‌ಗೆ ವ್ಯವಸ್ಥೆ
ಅಮೃತ ಮಹೋತ್ಸವದಲ್ಲಿ ಭಾಗವಹಿಸಲು ಚಿಕ್ಕೋಡಿ ಕಡೆಯಿಂದ ಬರುವ ಜನರಿಗಾಗಿ ತಾಲೂಕಿನ ಭೂತರಾಮನಹಟ್ಟಿಯ ಮುಕ್ತಿಮಠ, ಗೋಕಾಕ ಕಡೆಯಿಂದ ಬರುವವರಿಗೆ ಕಣಬರ್ಗಿಯ ಸಂಕಲ್ಪ ಗಾರ್ಡನ್, ಬೈಲಹೊಂಗಲ ಕಡೆಯಿಂದ ಬರುವವರಿಗೆ ನಿಲಜಿ ಗಜಾನನ ಗಾರ್ಡನ್, ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಕಿತ್ತೂರು ಭಾಗದಿಂದ ಬರುವವರಿಗೆ ಧರ್ಮನಾಥ ಭವನ, ಬೆಳಗಾವಿ ಗ್ರಾಮೀಣ ಭಾಗ, ನಗರ ಭಾಗ ಹಾಗೂ ಖಾನಾಪುರದಿಂದ ಬರುವವರಿಗೆ ನಾಗನೂರು ರುದ್ರಾಕ್ಷಿಮಠದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಮಹಾಂತೇಶ ನಗರ, ಬಾಕ್ಸೈಟ್ ರಸ್ತೆ, ಶ್ರೀನಗರ ಹಾಗೂ ಐಸಿಎಂಆರ್ ಆವರಣದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವರ್ಷವಿಡೀ ಆಚರಣೆ
ಡಾ. ಪ್ರಭಾಕರ ಕೋರೆ ಅವರ ೭೫ನೇ ಜನ್ಮ ವರ್ಷಾಚರಣೆಯನ್ನು ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುವುದು. ನ.೧೧ರಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಮಠಾಧೀಶರ ಸಮಾವೇಶ ನಡೆಯಲಿದೆ. ೨೦೨೩ರ ಜನವರಿಯಲ್ಲಿ ಚಿದಾನಂದ ಪ್ರಭು ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕೃಷಿ ಮೇಳ ನಡೆಸಲಾಗುವದು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ನ್ಯಾಯವಾದಿ ಎಂ.ಬಿ.ಝಿರಲಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.
ಅಕ್ಟೋಬರ್ 15ರಂದು ಡಾ.ಪ್ರಭಾಕರ ಕೋರೆ ಅಮೃತ ಮಹೋತ್ಸವ : ಗಣ್ಯಾತಿಗಣ್ಯರು ಭಾಗಿ
https://pragati.taskdun.com/politics/amrita-mahotsav-for-dr-prabhakar-on-october-15-dignitaries-will-participate/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ