Kannada NewsLatest

ರಾಷ್ಟ್ರೀಯ ನೆಲೆಯಲ್ಲಿ ಯೋಚಿಸುವ ಚಿಂತಕ ಡಾ.ಪ್ರಭಾಕರ ಕೋರೆ

ಬೆಳಗಾವಿಗೆ ಪ್ರಭಾಕರ ಕೋರೆಯವರ ಕೊಡುಗೆ ಅನನ್ಯ

ಆಗಸ್ಟ್ 1 ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಚೇರಮನ್ ಡಾ.ಪ್ರಭಾಕರ ಕೋರೆ ಅವರ ಜನ್ಮ ದಿನ. ತನ್ನಿಮಿತ್ತ ಈ ಲೇಖನ

 

                           ಮಹಾಂತೇಶ ಕವಟಗಿಮಠ,                                                 ಮುಖ್ಯ ಸಚೇತಕರು, ವಿಧಾನ ಪರಿಷತ್

 72ರಲ್ಲಿ ಪಾದಾರ್ಪಣೆ ಮಾಡುತ್ತಿರುವ ಡಾ. ಕೋರೆಯವರಿಗೆ ಬೆಳಗಾವಿ ಕನ್ನಡಿಗರಂತೂ ಸರಿಯೇ ಸರಿ; ಇತರ ಭಾಷಿಕರೂ ಸದಾಕಾಲ ಋಣಿಯಾಗಿರಬೇಕು. ತನ್ನ ಭಾಷೆ, ತನ್ನ ನೆಲವನ್ನು ಅಪಾರವಾಗಿ ಗೌರವಿಸುವ ಹಾಗೆ ಇತರರ ಭಾಷೆ ಹಾಗೂ ಭಾವನೆಗಳನ್ನು ಗೌರವಿಸುವ ಡಾ.ಪ್ರಭಾಕರ ಕೋರೆ ರಾಷ್ಟ್ರೀಯ ನೆಲೆಯಲ್ಲಿ ಯೋಚಿಸುವ ಚಿಂತಕ.

ಬೆಳಗಾವಿಯಲ್ಲಿ 1963 ರಲ್ಲಿ ಕೆ.ಎಲ್.ಇ. ಸಂಸ್ಥೆಯ ಜವಾಹರಲಾಲ ನೆಹರು ಮೆಡಿಕಲ್ ಕಾಲೇಜು ಪ್ರಾರಂಭವಾದಾಗ ಗಗನಕುಸುಮವೆನಿಸಿದ್ದ ವೈದ್ಯಕೀಯ ಶಿಕ್ಷಣ ಜನತೆಯ ಮನೆಬಾಗಿಲಿಗೇ ಬಂದಂತಾಯಿತು.

1948 ರಲ್ಲಿ ಹುಬ್ಬಳ್ಳಿಯಲ್ಲಿ ಪೂರ್ಣಪ್ರಮಾಣದ ಇಂಜಿನಿಯರಿಂಗ ಕಾಲೇಜು ಪ್ರಾರಂಭವಾದಾಗ ಖಾಸಗಿ ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಾರಂಭವಾದ ಪ್ರಥಮ ಇಂಜಿನಿಯರಿಂಗ ಕಾಲೇಜೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಬಿ. ವ್ಹಿ. ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ ಹೆಣ್ಣು ಮಕ್ಕಳಿಗೂ ತಾಂತ್ರಿಕ ಶಿಕ್ಷಣ ಪಡೆಯಲು ಅವಕಾಶ ಒದಗಿಸಿಕೊಟ್ಟಿತು.

ಅಂತೆಯೇ ಇನ್‌ಫೋಸಿಸ್ ಚೇರಮನ್ ಡಾ. ಸುಧಾಮೂರ್ತಿ ಅಂಥವರೂ ಇಂಜಿನಿಯರಿಂಗ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಅದೇ ವರ್ಷ 1948 ಹುಬ್ಬಳ್ಳಿಯಲ್ಲಿಯೇ ಕಾಮರ್ಸ ಕಾಲೇಜು ಪ್ರಾರಂಭಿಸಿದ ಕೆ.ಎಲ್.ಇ. ಸಂಸ್ಥಾಪಕರು ವಿಭಿನ್ನ ನೆಲೆಯಲ್ಲಿ ಚಿಂತನೆ ಮಾಡಿ ವೃತ್ತಿಪರ ಶಿಕ್ಷಣ ನೀಡುವತ್ತ ಹೆಜ್ಜೆ ಹಾಕಿದರು.

1933 ರಲ್ಲಿಯೇ ಪ್ರಪ್ರಥಮ ಪದವಿ ಕಾಲೇಜನ್ನು ಬೆಳಗಾವಿಯಲ್ಲಿ ಪ್ರಾರಂಭಿಸುವ ಮೂಲಕ ಕನ್ನಡಕ್ಕೆ ಭದ್ರ ನೆಲೆಯನ್ನು ಒದಗಿಸಿದ ಸಂಸ್ಥಾಪಕ ಆಜೀವ ಸದಸ್ಯರು ಮುಂದಿನ ವರ್ಷಗಳಲ್ಲಿ ಕನ್ನಡಕ್ಕೆ ಬೃಹತ್‌ಶಕ್ತಿ ತುಂಬುವ ಕರ‍್ಯ ಮಾಡುತ್ತ ಹೋದರು. 1984 ರವರೆಗೆ 38 ಶಾಲೆ ಕಾಲೇಜುಗಳನ್ನು ಸ್ಥಾಪಿಸಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ತಮ್ಮ ಶಿಕ್ಷಣ ಸಾಮ್ರಾಜ್ಯವನ್ನು ವಿಸ್ತರಿಸಿದ ಸಂಸ್ಥಾಪಕರು ಹಾಗೂ ಅವರ ನಂತರದ ಪದಾಧಿಕಾರಿಗಳು ದಾನಿಗಳ ಕೊಡುಗೆಯನ್ನು ಸಾರ್ಥಕಗೊಳಿಸಿ ತೋರಿಸಿದರು.

35 ವರ್ಷದ ಪವಾಡ ಸದೃಶ ಸಾಧನೆ 

1984 ರ ನಂತರ ಕೆ.ಎಲ್.ಇ. ಸಂಸ್ಥೆ ಉಹೆಗೂ ಮೀರಿದ ಪ್ರಗತಿಗೆ ಸಾಕ್ಷಿಯಾಗುತ್ತ ಸಾಗಿತು. ಕಳೆದ 35 ವರ್ಷಗಳಲ್ಲಿ ನವೀಮುಂಬಯಿ, ದೆಹಲಿ ಮತ್ತು ದುಬೈಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವದರ ಜತೆಗೆ ರಾಜ್ಯದ ತುಂಬ ಹಾಗೂ ರಾಜ್ಯದ ಹೊರಗೆ ಶಿಕ್ಷಣ ಸಂಸ್ಥೆಗಳ ಜಾಲ ನಿರ‍್ಮಿಸಿ ಪವಾಡ ಸದೃಶ ಸಾಧನೆ ಮಾಡಿ ತೋರಿಸಿದವರು ಡಾ. ಪ್ರಭಾಕರ ಕೋರೆ.

ಇದೆಲ್ಲ ಸಾಧ್ಯವಾಗಿದ್ದು ಡಾ. ಪ್ರಭಾಕರ ಕೋರೆಯವರ ದೂರದರ್ಶಿತ್ವ ಹಾಗೂ ಅವಿಶ್ರಾಂತ ದುಡಿಮೆಯ ಫಲವೆನ್ನಬಹುದು. ಕೋರೆಯವರು ಏನಾದರೂ ಸಾಧಿಸಬೇಕೆಂದರೆ ಅವರಲ್ಲಿ ಛಲದಿಂದ ಮಾಡಿ ತೋರಿಸುವ ತಾಕತ್ತಿದೆ ; ತತ್‌ಕ್ಪಣದಲ್ಲಿ ನಿರ್ಣಯ ತೆಗೆದುಕೊಳ್ಳುವ ಧೈರ್ಯವಿದೆ, ಕೈಗೆತ್ತಿಕೊಂಡ ಯೋಜನೆಗಳನ್ನು ಪೂರ್ಣಗೊಳಿಸಿ ತೋರಿಸುವ ಸಮರ್ಪಿತ ದುಡಿಮೆ ಇದೆ. ತಾನೂ ಶ್ರಮಿಸಿ ತನ್ನ ಸಂಸ್ಥೆಯ ಬಳಗದವರಿಗೂ ಮತ್ತು ಸಿಬ್ಬಂದಿಯವರಿಗೂ ಶ್ರಮಿಸಲು ತೊಡಗಿಸಿ ನಿರಂತರ ಪರಿಶ್ರಮದಿಂದ ಹೇಗೆ ಬೆಳೆಯಬಹುದೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ದುಡ್ಡಿನ ಕೊರತೆ ಇದ್ದಾಗಲೂ ಸಾಲ ಸೋಲಮಾಡಿ ಅತ್ಯಾಧುನಿಕ ಸಾವಿರ ಹಾಸಿಗೆಗಳ ಮಲ್ಟಿ-ಸ್ಪೆಶಾಲಿಟಿ ಆಸ್ಪತ್ರೆ ನರ‍್ಮಿಸಿ ಬೆಳಗಾವಿ ಜನತೆಗೆ ಸಮರ್ಪಿಸಿದ್ದಾರೆ. ಆಸ್ಪತ್ರೆಯ ಆದಾಯ ಸುಧಾರಿಸಹತ್ತಿದ ಮೇಲೆ 1200 ಹಾಸಿಗೆಗಳ ಫ್ರೀ ಬ್ಲಾಕ್ ನರ‍್ಮಿಸಿ ಬಡವರ ಪಾಲಿನ ಕಲ್ಪವೃಕ್ಷ ವೆನಿಸಿದ್ದಾರೆ. ಬಿ.ಎಂ. ಕಂಕಣವಾಡಿ ಆಯುರ್ವೇದ ಆಸ್ಪತ್ರೆಯನ್ನು 500 ಹಾಸಿಗೆಗಳ ಸಹಿತಕಾಲಕ್ಕೆ ತಕ್ಕಂತೆ ಆಧುನೀಕರಣಗೊಳಿಸಿ ಬಹುಬೇಡಿಕೆ ಪಡೆಯುವಂತೆ ಮಾಡಿದ ಕೀರ್ತಿ ಡಾ. ಕೋರೆಯವರದು.

ಬೆಳಗಾವಿ ತಾಲೂಕಿನ ಮೂರು ಪ್ರಾಥಮಿಕ ಆರೋಗ್ಯಕೇಂದ್ರಗಳನ್ನು (Pಊಅ) ದತ್ತು ಪಡೆದು ಗ್ರಾಮೀಣ ಜನತೆಯ ಆರೋಗ್ಯ ಸೇವೆಗೆ ತೊಡಗಿಸಿದ್ದು ಮರೆಯಲಾಗದು. ವೈದ್ಯಕೀಯ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ, ಹೆಚ್ಚಿನ ಹಣ ತೊಡಗಿಸಿ “ತಾಯಿ-ಮಕ್ಕಳ ಆರೋಗ್ಯಕ್ಕೆ’’ ವಿಶೇಷ ಗಮನಹರಿಸಿದ್ದರಿಂದ ವಿಶ್ವ ಆರೋಗ್ಯ ಸಂಸ್ಥೆಯವರೂ, ಅಮೇರಿಕೆಯ ಆರೋಗ್ಯ ಸಚಿವಾಲಯದ ಕರ‍್ಯದರ್ಶಿಗಳೂ ಜೆ.ಎನ್.ಮೆಡಿಕಲ್ ಕಾಲೇಜಿಗೆ ಸಂದರ್ಶನ ನೀಡುವಂತಾಯಿತಲ್ಲದೆ ಆ ಸಂಶೋಧನೆಯ ಫಲಗಳು ಸಾಮಾನ್ಯ ಜನತೆಗೆ ತಲುಪುವಂತಾಯಿತು.

ಕೆ.ಎಲ್.ಇ. ಯು.ಎಸ್.ಎಂ. ಮೆಡಿಕಲ್ ಕಾಲೇಜು ಪ್ರಾರಂಭಿಸಿ ಆ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿಗಾಗಿ ಬೆಳಗಾವಿ-ಯಳ್ಳೂರ ರಸ್ತೆಗೆ ಸಮೀಪ 500 ಹಾಸಿಗೆಗಳ ಉಚಿತ ಆಸ್ಪತ್ರೆ ನರ‍್ಮಿಸಿ ಕೋರೆಯವರು ಸಾಹಸವೆಂಬ ಶಬ್ದಕ್ಕೆ ವ್ಯಾಖ್ಯಾನ ಬರೆದಿದ್ದಾರೆ.

ಇಂದು ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ನೇಸರಗಿ ಸಮೀಪದ ಮತ್ತಿಕೊಪ್ಪದಲ್ಲಿ ಕೃಷಿ ತರಬೇತಿ ಕೇಂದ್ರ ಸ್ಥಾಪಿಸಿದ್ದಾರೆ. ಬೆಳಗಾವಿಯ ಕುವೆಂಪು ನಗರದಲ್ಲಿ ಕಾರ್ಯನಿರತವಾಗಿರುವ ಅಂತರಾಷ್ಟ್ರೀಯ ಕೆ.ಎಲ್.ಇ. ಶಾಲೆ ಹಾಗೂ ಬೆಳಗಾವಿಯ ಜಕ್ಕೇರಿಹೊಂಡ ಪ್ರದೇಶದಲ್ಲಿ ಪ್ರಾರಂಭಿಸಿರುವ ಸ್ವತಂತ್ರ ಪಿ.ಯು. ಸೈನ್ಸ ಹಾಗೂ ಕಾಮರ್ಸ ಕಾಲೇಜುಗಳು ಡಾ. ಕೋರೆಯವರ ಪ್ರಗತಿಪರ ಆಲೋಚನೆಗಳಿಗೆ ಸಾಕ್ಷಿಯಾಗಿವೆ.

ಕೆ.ಎಲ್.ಇ. ಸಂಸ್ಥೆ ಒಂದು ಸ್ವತಂತ್ರ ವಿಶ್ವವಿದ್ಯಾಲಯವಾಗುವಂತೆ ಪರಿಶ್ರಮಿಸಿ, ಹಾಗೂ ಅದು ’ಎ’ ಗ್ರೇಡ್ ಮಾನಾಂಕನ ಪಡೆದ ಖಾಸಗೀ ಕ್ಷೇತ್ರದ ವಿ.ವಿ. ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ನೋಡಿಕೊಂಡಿದ್ದಾರೆ. ಸಂಗೀತ ಕಾರಂಜಿಯ ನರ‍್ಮಾಣ, ಸಂಗೀತ ಶಾಲೆಯ ಸ್ಥಾಪನೆ ಡಾ. ಕೋರೆಯವರ ಸೌಂದರ‍್ಯ ಪ್ರಜ್ಞೆ ಹಾಗೂ ಸಂಗೀತ ಪ್ರೀತಿಗೆ ಸಾಕ್ಷಿಯೆನಿಸಿವೆ.

ಮೌಲಿಕ ಯೋಗದಾನ

ಬೆಳಗಾವಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ. ಸೆಂಟರ್ ಬರಲಿಕ್ಕೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬರಲಿಕ್ಕೆ ಅಪಾರವಾಗಿ ಶ್ರಮಿಸಿದ ಡಾ. ಕೋರೆಯವರು – ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಾರಂಭವಾಗಲೂ ಮೌಲಿಕ ಯೋಗದಾನ ನೀಡಿದ್ದಾರೆ.

ಕ.ವಿ.ವಿ. ಪಿ.ಜಿ. ಸೆಂಟರ್ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಪ್ರಾರಂಭಗೊಂಡ ಮೊದಲ ಕೆಲ ವರ್ಷಗಳ ಕಾಲ ಕೆ.ಎಲ್.ಇ. ಕಾಲೇಜುಗಳಲ್ಲಿ ಸ್ಥಳಾವಕಾಶ ಮಾಡಿಕೊಟ್ಟು ಅವು ಪ್ರವರ್ಧಮಾನಕ್ಕೆ ಬರಲು ನೆರವಾಗಿದ್ದಾರೆ. ಹೈಕೋರ್ಟಪೀಠ ಬೆಳಗಾವಿಗೆ ಬರಬೇಕು, ಕೇಂದ್ರಿಯ ವಿಶ್ವವಿದ್ಯಾಲಯ ಬೆಳಗಾವಿಗೆ ಬರಬೇಕು ಎಂದು ಅಂತಿಮ ಕ್ಷಣದವರೆಗೆ ಹೋರಾಟ ಮಾಡಿದ ಡಾ. ಕೋರೆ ಬೆಳಗಾವಿಗೆ ವಿಧಾನ ಮಂಡಲದ ಅಧಿವೇಶನಗಳನ್ನು ತಂದು ಧರ‍್ಯದಿಂದ ಸಂಘಟಿಸಿ ತೋರಿಸಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧ ನರ‍್ಮಿಸಲು ಅವಿರತ ಕಷ್ಟಪಟ್ಟಿದ್ದಾರೆ. ವಿಶ್ವಕನ್ನಡ ಸಮ್ಮೇಳನ ಯಶಸ್ವಿಗೊಳಿಸಿದ್ದಾರೆ; 70ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ(2003)ದ ನೆನಪಿಗಾಗಿ ಕನ್ನಡ ಸಾಂಸ್ಕೃತಿಕ ಭವನ ನರ‍್ಮಿಸಲು 3 ಕೋಟಿ ರೂ. ಗಳ ಅನುದಾನವನ್ನು ಸರಕಾರದಿಂದ ಕೊಡಿಸಿದ್ದಾರೆ. ಅದೇ ಭವನಕ್ಕೆ ತಮ್ಮ ಎಂ. ಪಿ. ಫಂಡಿನಿಂದ 25 ಲಕ್ಷ ರೂ. ಗಳನ್ನು ನೀಡಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಗಡಿಪ್ರದೇಶಗಳಾದ ನಿಪ್ಪಾಣಿ, ಅಥಣಿ ಹಾಗೂ ಖಾನಾಪುರಗಳಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಒಂದು ಕಾಲಕ್ಕೆ ಚಿಕ್ಕಪುಟ್ಟ ರೋಗರುಜಿನಗಳ ಉಪಚಾರಕ್ಕೂ ಘಟಪ್ರಭಾ-ಮಿರಜಗಳಿಗೆ ತೆರಳುತ್ತಿದ್ದ ಬೆಳಗಾವಿ ಜನತೆಗೆ ಇಂದು ಹೃದಯಶಸ್ತ್ರಚಿಕಿತ್ಸೆ ಮೊದಲು ಮಾಡಿ ಎಲ್ಲ ಪ್ರಕಾರದ ರೋಗಗಳಿಗೂ ಬೆಳಗಾವಿಯಲ್ಲಿಯೇ ಉಪಚಾರ ಲಭ್ಯವಾಗಿದೆ. ಅವರ ಸ್ನೇಹಿತರ ವಲಯ ತುಂಬ ದೊಡ್ಡದು. ಅಲ್ಲಿ ಕನ್ನಡಿಗರು, ಮರಾಠಿಗರು, ಮುಸ್ಲಿಮರು-ಕ್ರಿಶ್ಚನ್‌ರು ಇನ್ನಾವ ಬೇಧ-ಭಾವವಿಲ್ಲ.

ಎಲ್ಲರನ್ನೂ ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ತೆಗೆದುಕೊಳ್ಳುವ ಅವರ ಜಾಯಮಾನವೇ ವಿಶಿಷ್ಟವಾದುದು. ಬೆಳಗಾವಿಗೆ ಯೋಗ-ಗುರು ಬಾಬಾ ರಾಮದೇವರನ್ನು ಕರೆಯಿಸಿ ಶಿಬಿರವನ್ನು ಯಶಸ್ವಿಗೊಳಿಸಿದ್ದಲ್ಲದೆ ಜನಮಾನಸದಲ್ಲಿ ಯೋಗದ ಬಗ್ಗೆ ಆಸಕ್ತಿ ಹಾಗೂ ಜಾಗೃತಿ ಮೂಡಲು ಕಾರಣರಾದರು.

ಬೆಳಗಾವಿಗಾಗಿ ಅಪಾರ ಶ್ರಮಿಸಿ ಬೆಳಗಾವಿಗೆ ಅನನ್ಯ ಕೊಡುಗೆ ನೀಡಿರುವ ಡಾ. ಪ್ರಭಾಕರ ಕೋರೆ ಶತಾಯುಷಿಗಳಾಗಲಿ ಹಾಗೂ ಬೆಳಗಾವಿಯನ್ನು ಇನ್ನಷ್ಟು ಬೆಳಗಲಿ ಎಂದು ಹಾರೈಸುತ್ತ ಜನ್ಮದಿನದ ಶುಭಾಶಯಗಳನ್ನು ಕೋರುತ್ತೇನೆ.///

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button